ಬೆಳ್ತಂಗಡಿ: ಗುಲಾಬಿ, ಸೇವಂತಿಗೆ, ಕಿಸ್ ಅಂತೋರಿಯಂ, ಸುಗಂಧರಾಜ, ಸೇವಂತಿಗೆ, ಕಾರ್ನಿಶಿಯಾ, ಆರ್ಕಿಡ್ ಮೊದಲಾದ ಹೂಗಳು, ತೆಂಗಿನಗರಿ, ಎಳೆಗರಿ, ಸೈಬೋಸ್, ಡ್ರೆಸಿನಾ ಡ್ರೆಸಿನಾ, ದಾಳಿಂಬೆ, ಬೇಲದ ಕಾಯಿ, ಜೋಳ, ಎಳನೀರು, ಬಾಳೆಹಣ್ಣು, ಅಡಕೆ, ತೆಂಗು, ಕಬ್ಬು ಮೊದಲಾದ ಹಣ್ಣುಗಳನ್ನು ಒಪ್ಪ ಓರಣವಾಗಿ ಜೋಡಿಸಿ ವಿವಿಧ ಅಲಂಕಾರಗಳನ್ನು ಮಾಡುವ ಮೂಲಕ ದೇವೆರ ಸೇವೆಯ ಜೊತೆಗೆ ಭಕ್ತರ ಕಣ್ಮನಗಳಿಗೆ ಆನಂದವನ್ನುಂಟು ಮಾಡುವ ಮೂಲಕ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತರು ವಿಶೇಷವಾಗಿ ಹೊಸವರ್ಷವನ್ನು ಬರಮಾಡಿಕೊಂಡಿದ್ದಾರೆ.
ದೇವಸ್ಥಾನ, ಬೀಡು ಮೊದಲಾದ ಕಟ್ಟಡಗಳನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ದೇವಸ್ಥಾನದ ಹೊರಭಾಗದಲ್ಲಿ ವಿಶೇಷವಾಗಿ ಸಿಂಗರಿಸಲಾಗಿದೆ. ದೇಗುಲದ ಒಳಾಂಗಣವನ್ನು ಹೂ, ಹಣ್ಣು ಗರಿಗಳಿಂದ ವಿಶೇಷವಾಗಿ ಸಿಂಗರಿಸಲಾಗಿದೆ. ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿರುವ ಸಾಯಿ ಪ್ಲವರ್ ಡೆಕೊರೇಟರ್‌ನ ಗೋಪಾಲ ರಾವ್, ಶ್ರವಣಮೂರ್ತಿ ಮತ್ತು ಆನಂದ್ ನೇತೃತ್ವದಲ್ಲಿ ಭಕ್ತರು ಸತತ ಐದು ದಿನಗಳಿಂದ 45 ಮಂದಿ ಇದಕ್ಕಾಗಿ ಶ್ರಮಿಸಿದ್ದಾರೆ. ಹೊಸ ವರ್ಷದ ಅಂಗವಾಗಿ ವಿವಿಧ ಹಣ್ಣುಗಳು, ಹೂಗಳು ಮತ್ತು ಎಲೆಗಳನ್ನು ಮಾತ್ರ ಬಳಸಿಕೊಂಡು ಪರಿಸರ ಸಂರಕ್ಷಣೆ ಸಂದೇಶ ಸಾರುವ ಮೂಲಕ ಭಕ್ತರು ಅಲಂಕಾರ ಸೇವೆ ಸಮರ್ಪಿಸಿರುವುದು ವಿಶೇಷವಾಗಿದೆ. ಅಲಂಕಾರ ಮಾಡಿರುವ ಭಕ್ತವೃಂದವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಭಕ್ತರನ್ನು ಅಭಿನಂದಿಸಿದ್ದಾರೆ.
ದೇಗುಲಕ್ಕೆ ವಿಶೇಷ ಅಲಂಕಾರ ಸೇವೆ ಮಾಡಿದ ಭಕ್ತರಾದ ಗೋಪಾಲ ರಾವ್ ಪ್ರತಿಕ್ರಿಯಿಸಿ, ಪ್ರತಿವರ್ಷದಂತೆ ಈ ವರ್ಷವೂ ಹೊಸ ವರ್ಷಾಚರಣೆಯ ಅಂಗವಾಗಿ ಅಲಂಕಾರ ಸೇವೆ ಮಾಡಲಾಗಿದೆ. ಇದರಿಂದ ವ್ಯವಹಾರದಲ್ಲಿ ಲಾಭದ ಜೊತೆಗೆ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಮುಖ್ಯವಾಗಿ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಂತೋಷ ದೊರಕಿದೆ ಎಂದರು.