ಕುಟುಂಬಗಳಿಗೆ ಶಾಪವಾಗಿ ಕಾಡುತ್ತಿವೆ ವ್ಯಾಜ್ಯಗಳು: ತ್ವರಿತ ನ್ಯಾಯದಾನಕ್ಕೆ ಕ್ರಮ ಕೈಗೊಳ್ಳುವ ಅನಿವಾರ್ಯತೆ: ಜನಸಂಖ್ಯೆ, ವ್ಯಾಜ್ಯಗಳಿಗನುಗುಣವಾಗಿ ಹಲವಾರು ಮಾರ್ಪಾಡು ಮಾಡಿದಲ್ಲಿ ಅನುಕೂಲ: ಮೂರು ಕೋಟಿಗೂ ಅಧಿಕ ವ್ಯಾಜ್ಯಗಳು ಉಳಿಕೆ, ಕಡಿಮೆ ವೆಚ್ಚದಲ್ಲಿ ತ್ವರಿತ ನ್ಯಾಯದಿಂದ ಶೀಘ್ರ ನ್ಯಾಯ: ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಹೇಳಿಕೆ: ಬೆಳ್ತಂಗಡಿ ನೂತನ ವಕೀಲರ ಭವನ ಉದ್ಘಾಟನೆ

 

 

ಬೆಳ್ತಂಗಡಿ: ಜನಸಾಮಾನ್ಯರಿಗೆ ಕನಿಷ್ಠ ವೆಚ್ಚದಲ್ಲಿ ಶೀಘ್ರ ನ್ಯಾಯ ಒದಗಿಸುವುದೇ ನ್ಯಾಯಾಲಯ ವ್ಯವಸ್ಥೆಯ ಆಶಯವಾಗಬೇಕಿದೆ. ದೇಶದಲ್ಲಿ ಮೂರು ಕೋಟಿ ವ್ಯಾಜ್ಯಗಳು ಇತ್ಯರ್ಥವಾಗಲು ಬಾಕಿ ಇದ್ದು, ಇದಕ್ಕೆ ಕಾರಣ ಸಣ್ಣ ಪುಟ್ಟ ಸಿವಿಲ್ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವ ಪರಿಪಾಠ ಮತ್ತು ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳ ತೀರ್ಪಿಗಿರುವ ಕಾನೂನು ತೊಡಕು ಇದಕ್ಕೆ ಕಾರಣವಾಗಿದೆ. ಇಂದು ಒಂದು ಬಡ ಕುಟುಂಬಕ್ಕೆ ಯಾವುದೇ ದೊಡ್ಡ ಶಾಪ ಬೇಕಾಗಿಲ್ಲ. ಒಂದು ಸಿವಿಲ್ ವ್ಯಾಜ್ಯ ಎದುರಾದರೆ ಸಾಕು. ಮೂರು ತಲೆಮಾರುಗಳು ಈ ವ್ಯಾಜ್ಯಗಳನ್ನು ಎದುರಿಸಿ, ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ಕುಟುಂಬ ಹೇಗೆ ತಾನೆ ಅಭಿವೃದ್ಧಿ ಹೊಂದಲು ಸಾಧ್ಯ…? ಆದ್ದರಿಂದ ಶೀಘ್ರ ನ್ಯಾಯ, ಕಡಿಮೆ ವೆಚ್ಚದಲ್ಲಿ ಇತ್ಯರ್ಥ ಮಾಡುವಂತಾಗಬೇಕಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಬೇಸರ ವ್ಯಕ್ತಪಡಿಸಿದರು.

 

 

ಅವರು ನ್ಯಾಯಾಲಯ ಸಂಕೀರ್ಣ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ, ದ.ಕ. ಹಾಗೂ ಬೆಳ್ತಂಗಡಿ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಿರ್ಮಿಸಿರುವ ಬೆಳ್ತಂಗಡಿ ವಕೀಲರ ಭವನ ಉದ್ಘಾಟಿಸಿ ಮಾತನಾಡಿದರು.
ಶಾಸಕಾಂಗದ ಮೂಲಕ ಜನತೆಗೆ ಅನುಕೂಲವಾಗುವ ರೀತಿ, ಕಡತಗಳ ತ್ವರಿತ ವಿಲೇವಾರಿಗೆ ಸಂವಿಧಾನಾತ್ಮಕ ಮಾರ್ಪಾಡುಗಳನ್ನು ತರುವುದು ಅವಶ್ಯವಾಗಿದೆ. ಕಾನೂನು ಪಂಡಿತರು ಒಟ್ಟುಗೂಡಿ ಚರ್ಚಿಸಿ‌ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡು ಹಿಡಿಯಬೇಕಿದೆ. ಕಡತಗಳ ವಿಲೇವಾರಿ ಪ್ರಮಾಣ ವ್ಯಾಜ್ಯ ದಾಖಲಾಗುತ್ತಿರುವ ಪ್ರಮಾಣಕ್ಕಿಂತ ಅಜಗಜಾಂತರ ವ್ಯತ್ಯಾಸದಲ್ಲಿರುವುದು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದರು.

 

 

 

ಮುಖ್ಯವಾಗಿ ಇಂದಿನ ಪ್ರಪಂಚದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ನ್ಯಾಯ ಸಮ್ಮತವಾದ ಕಾನೂನು ಸುವ್ಯವಸ್ಥೆಗೆ ಬೇಕಾದ ವ್ಯವಸ್ಥೆಗಳು ಅದರಲ್ಲೂ ಮೂಲಸೌಕರ್ಯಗಳನ್ನು ಒದಗಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ನೂತನ ಕಟ್ಟಡ ಉತ್ತಮವಾಗಿ ಮೂಡಿ ಬಂದಿದ್ದು, ಕಟ್ಟಡಕ್ಕೆ ನೀಡಿದ ಕಾಳಜಿ ಗ್ರಂಥಾಲಯ ‌ನಿರ್ಮಾಣ ವಿಚಾರದಲ್ಲೂ ಇದ್ದಲ್ಲಿ ಉತ್ತಮ. ಸ್ಥಳೀಯ ಜನಪ್ರತಿನಿಧಿಗಳು ಶೀಘ್ರವಾಗಿ ಸುಸಜ್ಜಿತ ಗ್ರಂಥಾಲಯ ‌ನಿರ್ಮಾಣಕ್ಕೆ ಸಹಕಾರ ನೀಡಬೇಕಿದೆ. ಜೊತೆಗೆ ಕಟ್ಟಡಕ್ಕೆ ಲಿಫ್ಟ್ ಅವಶ್ಯಕತೆ ಇದ್ದು ಅದನ್ನೂ ಒದಗಿಸಬೇಕಿದೆ. ಮುಖ್ಯವಾಗಿ 13 ಕೋಟಿಗೂ ಅಧಿಕ ವೆಚ್ಚದಲ್ಲಿ ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸುಸಜ್ಜಿತ ಕಟ್ಟಡ ಮಂಜೂರು ಮಾಡಲು, ಕಟ್ಟಡ ಅತಿ ಶೀಘ್ರದಲ್ಲಿ ‌ನಿರ್ಮಾಣವಾಗಲು ಜನಪ್ರತಿನಿಧಿಗಳು ಪ್ರಯತ್ನಿಸಬೇಕಿದೆ ಎಂದರು.

 

 

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್, ಹಿಂದೆ ವಕೀಲರಿಗೆ ಮೂಲಸೌಕರ್ಯದ ಕೊರತೆ ಹೆಚ್ಚಾಗಿ ಕಾಡುತ್ತಿತ್ತು. ಈಗ ಸೌಕರ್ಯಗಳು ಲಭಿಸಿವೆ. ಇದರ ಸದುಪಯೋಗವನ್ನು ಯುವ ವಕೀಲರು ಪಡೆಯಬೇಕಿದೆ ಎಂದರು.

 

 

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ವಿಶ್ವಜಿತ್‌ ಶೆಟ್ಟಿ, ಬೆಳ್ತಂಗಡಿ ತಾಲೂಕಿನ ವಕೀಲರ ಸಂಘ ಇತರ ಸಂಘಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಅಚ್ಚುಕಟ್ಟುತನ ಕಾಣುತ್ತಿದೆ. ವಕೀಲರ ಕ್ರಿಯಾತ್ಮಕ ಕಾರ್ಯಗಳಿಗೆ ಈ‌ ಕಟ್ಟಡ ವೇದಿಕೆಯಾಗಬೇಕಿದೆ. ಮುಖ್ಯವಾಗಿ ಹೊಸದಾಗಿ ಅಧ್ಯಯನ ಮಾಡಲು ಬರುವವರಿಗೆ ಮಾರ್ಗದರ್ಶಿಯಾಗಿ, ಉತ್ತಮ ಕಾರ್ಯಗಳನ್ನು ಮಾಡಲು ಅನುಕೂಲಕರ ತಾಣವಾಗಿ ಈ ಕಟ್ಟಡ ಬಳಕೆಯಾಗಬೇಕಿದೆ ಎಂದರು.

 

 

 

ಶಾಸಕ ಹರೀಶ್ ಪೂಂಜ ಗೌರವ ಸ್ವೀಕರಿಸಿ ಮಾತನಾಡಿ, ಬೆಳ್ತಂಗಡಿ ತಾಲೂಕಿನ ವಕೀಲರು ವೃತ್ತಿಯನ್ನು ಮಾಡುತ್ತಿಲ್ಲ. ಸಮಾಜ ಸೇವೆಯ ಜೊತೆಗೆ ವೃತ್ತಿಯನ್ನು ಪರಿಣಾಮಕಾರಿ ಮಾಡಿಕೊಂಡು ಬರುತ್ತಿದ್ದಾರೆ. 2019ರಲ್ಲಿ ತಾಲೂಕಿನಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಇಲ್ಲಿನ ವಕೀಲರ ಸಂಘ ತೋರಿದ ಸಾಮಾಜಿಕ ಕಳಕಳಿ ಸ್ಮರಣೀಯ. ಅದೇ ರೀತಿ ಕೊರೋನಾ ಸಂದರ್ಭದಲ್ಲೂ ಸಾಮಾಜಿಕ ಜವಾಬ್ದಾರಿ ಎಲ್ಲರೂ ಮೆರೆದಿದ್ದಾರೆ‌. ಆದಷ್ಟು ಶೀಘ್ರ ಭವನಕ್ಕೆ ಸುಸಜ್ಜಿತ ಗ್ರಂಥಾಲಯ‌ ಪೂರ್ಣಗೊಳಿಸಲು ಅಗತ್ಯ ಕ್ರಮ‌ಕೈಗೊಳ್ಳಲಾಗುವುದು. ವಕೀಲರ ಭವನಕ್ಕೆ ಮುಂದೆಯೂ ಸರಕಾರದ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

 

 

 

ಹೈಕೋರ್ಟ್ ಮುಖ್ಯ ನ್ಯಾ. ಋತುರಾಜ್ ಅವಸ್ಥಿ ವೀಡಿಯೋ ಸಂದೇಶ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಸಂದೇಶವನ್ನು ತಿಳಿಸಲಾಯಿತು.

 

 

ವಿಧಾನ‌ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ನ್ಯಾಯಾಲಯ ಕಟ್ಟಡದಲ್ಲಿ ಸುಮಾರು 34 ವರ್ಷಗಳ ಕಾಲ 2 ತಲೆಮಾರುಗಳ‌ ಕಾಲ ನ್ಯಾಯಾಲಯದಲ್ಲಿ ಸೇವೆ ಮಾಡುವ ಅವಕಾಶ ಲಭಿಸಿದೆ. ಇಲ್ಲಿನ ಒಂದೊಂದು ಮೂಲೆಯೂ ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಈ ಹೊಸ ಕಟ್ಟಡ ಜನತೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಹೊಸ ಸ್ಪೂರ್ತಿ ನೀಡಲಿದೆ ಎಂಬ ಭರವಸೆ ಮೂಡಿಸಿದೆ ಎಂದು ತಿಳಿಸಿದರು.

 

 

 

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಶ್ರೀರಾಮ, ಪುಣ್ಯಕೋಟಿ ಮೊದಲಾದ ಉದಾಹರಣೆ ಸಹಿತ ಮಾತಿನೊಂದಿಗೆ ಕಾವ್ಯ ವಾಚನದ ಮೂಲಕ ತಮ್ಮ ಮಾತುಗಳಿಂದ ಗಮನ ಸೆಳೆದರು.
ಅಧ್ಯಕ್ಷತೆ ವಹಿಸಿದ್ದ ಉಚ್ಚ ನ್ಯಾಯಾಲಯದ   ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಕೆ. ಸೋಮಶೇಖರ್  ಮಾತನಾಡಿ, ದಿನನಿತ್ಯದ ಪ್ರತಿಯೊಂದು ವಿಚಾರಗಳಲ್ಲೂ ಕಾನೂನು ಅಡಕವಾಗಿರುತ್ತದೆ. ಸತ್ಯ ಶೋಧನೆಯ ಸಂದರ್ಭದಲ್ಲಿ ಜಾಗೃತರಾಗಿರುವುದು ಅವಶ್ಯ. ಪ್ರತಿಯೊಂದು ವಿಚಾರಗಳೂ ಕಾನೂನು ಚೌಕಟ್ಟು ಹೊಂದಿರುತ್ತವೆ. ವಕೀಲರುಗಳು ಬುದ್ಧಿವಂತಿಕೆ, ಮಾನವೀಯ ‌ಮೌಲ್ಯಗಳ ಜೊತೆಗೆ ಹೃದಯವಂತಿಕೆಯನ್ನೂ ಹೊಂದಬೇಕಿದೆ ಎಂದರು.

 

 

 

ನ್ಯಾಯಾಧೀಶರು, ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಲೋಕೋಪಯೋಗಿ ಇಲಾಖೆ ಹಿರಿಯ ಇಂಜಿನಿಯರ್ ಬಿ.ಟಿ. ಕಾಂತರಾಜ್, ಗುತ್ತಿಗೆದಾರ ಕೆಂತೂರು ಕೃಷ್ಣಮೂರ್ತಿ ಭಟ್ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷ ಎಲ್.ಶ್ರೀನಿವಾಸ ಬಾಬು, ಮಾಜಿ ಅಧ್ಯಕ್ಷ ಪಿ.ಪಿ.ಹೆಗ್ಡೆ, ಹೈ ಕೋರ್ಟ್ ರಿಜಿಸ್ಟಾರ್ ಟಿ.ಜಿ.ಶಿವಶಂಕರೇ ಗೌಡ, ಲೋಕೋಪಯೋಗಿ ಇಲಾಖೆ ಶಿವಮೊಗ್ಗ ವಿಭಾಗದ ಮುಖ್ಯ ಎಂಜಿನಿಯರ್‌ ಕಾಂತರಾಜ್ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಎಸ್. ಪ್ರಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಮುರಳೀಧರ ಪೈ. ಸ್ವಾಗತಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಶೈಲೇಶ್ ಆರ್ ಠೋಸರ್ ವಂದಿಸಿದರು. ನ್ಯಾಯವಾದಿ ಬಿ.ಕೆ.ಧನಂಜಯ್‌ ಕುಮಾರ್‌ ಮತ್ತು ಕೃಷ್ಣ ಶೆಣೈ ನಿರೂಪಿಸಿದರು.

error: Content is protected !!