ಬೆಳ್ತಂಗಡಿ:ನಾಳ ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ನೂತನ ಮೇಳವು ಡಿ 18 ರಿಂದ ತಿರುಗಾಟ ನಡೆಸಲಿದೆ. ಎಂದು ಮೇಳದ ವ್ಯವಸ್ಥಾಪಕರು ಹಾಗೂ ನಾಳ ದೇವಸ್ಥಾನದ ಪ್ರಧಾನ ಅರ್ಚಕ ವೆ !ಮೂ! ರಾಘವೇಂದ್ರ ಅಸ್ರಣ್ಣ ಎಂ. ತಿಳಿಸಿದರು. ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಪುರಾಣ ಪ್ರಸಿದ್ಧವಾದ ಕಣ್ವ ಪ್ರತಿಷ್ಠಾಪಿತ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ” ಗೆಜ್ಜೆ ಕಟ್ಟುವ” ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಯಕ್ಷಗಾನ ಎನ್ನುವ ಬೆಳಕಿನ ಸೇವೆ ದೇವಿಗೆ ಪ್ರಿಯವಾದದ್ದು. ಅದ್ದರಿಂದ ಈಗಾಗಲೇ ನಾಳ ಕ್ಷೇತ್ರದಲ್ಲಿ ಯಕ್ಷಗಾನ ಸಂಘಗಳ ಮೂಲಕ ಬಯಲಾಟ, ತಾಳಮದ್ಧಳೆಯಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಈ ಬಾರಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಒಮ್ಮತದ ಅಭಿಪ್ರಾಯದಂತೆ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ದಿನಾಂಕ ಡಿಸೆಂಬರ್ 18ನೇ ಶನಿವಾರದಿಂದ ಮೇಳ ತಿರುಗಾಟ ಪ್ರಾರಂಭಿಸಲಿದೆ.ಈ ಮೇಳವು ಬಯಲಾಟ ಮೇಳವಾಗಿದ್ದು , ಎಲ್ಲಾ ಪೌರಣಿಕ, ಐತಿಹಾಸಿಕ, ಹಾಗೂ ಕಾಲ್ಪನಿಕ ಪ್ರಸಂಗಗಳನ್ನು ಹಿತ- ಮಿತ ವೀಳ್ಯದ ಜೊತೆಗೆ ಉತ್ತಮ ಪ್ರದರ್ಶನ ನೀಡಲು ಬದ್ಧರಿದ್ದೇವೆ.ಎಂದರು.
ಸಂಜೆ 7 ರಿಂದ 12 ಗಂಟೆ ತನಕ ಕಾಲಮಿತಿ ಪ್ರದರ್ಶನ ಹಾಗೂ ಸಂಘಟಕರ ವಿನಂತಿ ಮೇರೆಗೆ ಇಡೀ ರಾತ್ರಿ ಯಕ್ಷಗಾನ ಪ್ರದರ್ಶನ ನೀಡಲಾಗುತ್ತಿದೆ. ಈಗಾಗಲೇ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಡಿ. 18 ರಂದು ಯಕ್ಷಗಾನ ತಿರುಗಾಟ ಆರಂಭವಾಗಲಿದೆ ಎಂದರು.
ಡಿ 18 ರಂದು ರಾತ್ರಿ 8-30 ರಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಇವರ ಸೇವಾ ಬಯಲಾಟ “ಪಾಂಡವಾಶ್ವಮೇಧ ” ಪ್ರಸಂಗ ನಾಳ ರಥಬೀದಿಯಲ್ಲಿ ನಡೆಯಲಿದೆ. ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ನಾಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ಭುವನೇಶ್ ಗೇರುಕಟ್ಟೆ ವಹಿಸಿಕೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಶಿಧರ್ ಶೆಟ್ಟಿ ಅಧ್ಯಕ್ಷರು ತುಳು ಸಂಘ ಬರೋಡಾ. ವೆ! ಮೂ! ರಾಮದಾಸ ಅಸ್ರಣ್ಣ ಖಂಡಿಗ, ದೇವದಾಸ ಶೆಟ್ಟಿ ಉದ್ಯಮಿ ಬದ್ಯಾರ್, ರಾಜೇಶ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ,ಕೃಷ್ಣ ಸೋಮಾಯಾಜಿ , ಕಳಿಯ ಗ್ರಾ.ಪಂ ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ , ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಮೈಸೂರಿನ ಉದ್ಯಮಿ ಹೇಮಂತ್ ಕುಮಾರ್ ಗೇರುಕಟ್ಟೆ, ಕಣಿಯೂರು ರೈತಬಂಧು ಆಹಾರೋಧ್ಯಮದ
ಶಿವಶಂಕರ್ ನಾಯಕ್, ಉದ್ಯಮಿ ದೇವರಾಜ್ ಶೆಟ್ಟಿ ಮದ್ವ ಸುರತ್ಕಲ್, ನಾಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ
ಜನಾರ್ದನ ಪೂಜಾರಿ ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಭುವನೇಶ್ವರ .ಜಿ. ಭಾಗವತರಾದ ಮೋಹನ ಕಲಂಬಾಡಿ, ರಾಘವ ಹೆಚ್. ಉಪಸ್ಥಿತರಿದ್ದರು.