ಡಿ.ವೈ.ಎಸ್.ಪಿ., ಪಿ.ಎಸ್.ಐ., ಸೇರಿ ಪೊಲೀಸರ ಮೇಲೆ ಹಲ್ಲೆ, ಗಾಯ: ಉಪ್ಪಿನಂಗಡಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಯತ್ನ ವಿಫಲ: ಪರಿಸ್ಥಿತಿ ನಿಯಂತ್ರಿಸಲು ಲಾಠಿಚಾರ್ಜ್: ಗಂಭೀರ ಗಾಯ ಗೊಂಡ ಬಂಟ್ವಾಳ ಪಿಎಸ್ಐ ಮಂಗಳೂರು ಆಸ್ಪತ್ರೆಗೆ

 

 

 

ಬೆಳ್ತಂಗಡಿ: ಉಪ್ಪಿನಂಗಡಿ ಬಳಿ ನಡೆದಿದ್ದ ತಲ್ವಾರ್ ದಾಳಿಗೆ ಸಂಬಂಧಿಸಿ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದ ಪಿಎಫ್ಐ ಮುಖಂಡರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ರಾತ್ರಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದ್ದು ಪುತ್ತೂರು ಪೊಲೀಸ್ ಉಪಾಧೀಕ್ಷಕರಾದ ಗಾನ.ಪಿ. ಕುಮಾರ್, ಉಪ್ಪಿನಂಗಡಿ ಪಿಎಸ್ಐ ಶ್ರೀಮತಿ ವಾಮನ, ಕಿರಣ್ ಕುಮಾರ್, ರೇಣುಕಾ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡ ಬಂಟ್ವಾಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಉಪ್ಪಿನಂಗಡಿ ಠಾಣೆ ಮುಂಭಾಗ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಯತ್ನ ವಿಫಲಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಬಂಟ್ವಾಳ ಠಾಣಾ ಎಸ್.ಐ. ನಾಗರಾಜ್ ಡಿ. ಪ್ರತಿಭಟನೆ ನಿಲ್ಲಿಸುವಂತೆ ಕಾರ್ಯಕರ್ತರ ಬಳಿ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ ಪ್ರತಿಭಟನೆ ಸಂಘರ್ಷ ರೂಪ ಪಡೆದಿದ್ದು, ಪೊಲೀಸರೇ ಏಟು ತಿಂದು ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅನಿವಾರ್ಯವಾಗಿ ಲಾಠಿಚಾರ್ಜ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಠಿ ಚಾರ್ಜ್ ಸಂದರ್ಭದಲ್ಲಿ ಓಡುವ ಭರದಲ್ಲಿ ಬಿದ್ದು ಕೆಲ ಪಿಎಫ್ಐ ಕಾರ್ಯಕರ್ತರೂ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಉಪ್ಪಿನಂಗಡಿಯಲ್ಲಿ ಪೊಲೀಸ್ ಬಿಗಿ‌ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.

error: Content is protected !!