₹ 15 ಲಕ್ಷಕ್ಕೆ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಬೆಳ್ತಂಗಡಿಯ ಅಶ್ವಲ್ ರೈ: ದಾಖಲೆ ಮೊತ್ತಕ್ಕೆ ಖರೀದಿಸಿದ ಕೋಲ್ಕತ್ತಾ ಥಂಡಲ್ ಬೋಲ್ಟ್ಸ್ ತಂಡ: ಭಾರತ ರಾಷ್ಟ್ರೀಯ ನೆಟ್ ಬಾಲ್, ಹುಬ್ಬಳ್ಳಿ ರೈಲ್ವೇ ವಾಲಿಬಾಲ್, ಇಂಡಿಯನ್ ರೈಲ್ವೇ ವಾಲಿಬಾಲ್ ತಂಡಗಳ ಕಪ್ತಾನ

 

ಬೆಂಗಳೂರು: ವಾಲಿಬಾಲ್ ನಲ್ಲಿ ಲೀಗ್ ಮಾದರಿಯಲ್ಲಿ‌ ಆರಂಭವಾಗಲಿರುವ ಕೂಟದ ಮೊದಲ ಸೀಸನ್ ನ ಹರಾಜು ಪ್ರಕ್ರಿಯೆ ಕೊಚ್ಚಿನ್ ನಲ್ಲಿ ನಡೆದಿದ್ದು, ಬೆಳ್ತಂಗಡಿಯ ವಾಲಿಬಾಲ್ ಆಟಗಾರ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಅಶ್ವಲ್ ರೈ ಅವರನ್ನು ದಾಖಲೆಯ 15 ಲಕ್ಷ ರೂ. ಮೊತ್ತಕ್ಕೆ ಕೋಲ್ಕತ್ತಾ ಥಂಡಲ್ ಬೋಲ್ಟ್ಸ್ ತಂಡ ಖರೀದಿಸಿದೆ.
ಪ್ರೈಮ್ ವಾಲಿಬಾಲ್ ಹರಾಜಿನಲ್ಲಿ ಅಶ್ವಲ್ ಜೊತೆಗೆ ಕಾರ್ತಿಕ್ ಎ. ಮತ್ತು ಜೆರೋಮ್ ವಿನಿತ್ ಅವರನ್ನೂ ಇಷ್ಟೇ ಮೊತ್ತಕ್ಕೆ ಕ್ರಮವಾಗಿ ಕೊಚ್ಚಿ ಬ್ಲೂ ಸ್ಪೈಕರ್ಸ್ ಹಾಗೂ ಕ್ಯಾಲಿಕಟ್ ಹೀರೋಸ್ ತಂಡಗಳು ಖರೀದಿಸಿವೆ.

 

 

ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಏಳು ತಂಡಗಳು ಭಾಗವಹಿಸುತ್ತಿದ್ದು ಕ್ಯಾಲಿಕಟ್ ಹೀರೋಸ್, ಕೊಚ್ಚಿ ಬ್ಲೂ ಸ್ಪೈಕರ್ಸ್, ಅಹಮದಾಬಾದ್ ಡಿಫೆಂಡರ್ಸ್, ಹೈದರಾಬಾದ್ ಬ್ಲಾಕ್ ಹಾಕ್ಸ್, ಚೆನ್ನೈ ಬ್ಲಿಟ್ಜ್, ಬೆಂಗಳೂರು ಟಾರ್ಪಿಡೋಸ್ ಮತ್ತು ಕೋಲ್ಕತ್ತಾ ಥಂಡರ್ ಬೋಲ್ಟ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣೆಸಾಡಲಿವೆ.

 

ಅಂತಾರಾಷ್ಟ್ರೀಯ ಮಟ್ಟದ ಆಟಗಾರ ಅಶ್ವಲ್:

ಅಶ್ವಲ್ ರೈ ಹುಬ್ಬಳ್ಳಿ ರೈಲ್ವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕ್ರೀಡಾ ಕೋಟಾದಡಿ ಕೆಲಸ ಪಡೆದಿದ್ದಾರೆ.
ಬೆಳ್ತಂಗಡಿ ತಾಲೂಕಿನ ಅಚ್ಚಿನಡ್ಕನಿವಾಸಿ ನಿವೃತ್ತ ಎ.ಎಸ್.ಐ. ಸಂಜೀವ ರೈ ಹಾಗೂ ವಾಣಿ ಎಸ್. ರೈ ಅವರ ಪುತ್ರರಾಗಿರುವ ಅಶ್ವಲ್ ರೈ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ‌ ಕ್ರೀಡಾ ತರಬೇತುದಾರ ರಮೇಶ್ ಪಿ.ಡಿ‌. ಅವರ ಮಾರ್ಗದರ್ಶನದೊಂದಿಗೆ ವಾಲಿಬಾಲ್ ಕಲಿಕೆ ಆರಂಭಿಸಿ, ಉತ್ತಮ ಪ್ರದರ್ಶನದೊಂದಿಗೆ ಜನಮೆಚ್ಚುಗೆ ಪಡೆದಿದ್ದರು. ತಮ್ಮ ಎತ್ತರವನ್ನು ಸಮರ್ಪಕವಾಗಿ ಬಳಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡುತ್ತಾ, ಕಾಲೇಜು ಮಟ್ಟ, ವಲಯ ಮಟ್ಟ, ಜಿಲ್ಲಾಮಟ್ಟ, ರಾಜ್ಯ ಮಟ್ಟ ಹಾಗೂ ರಾಷ್ಟ್ರ ಮಟ್ಟ್ ಸಾಧನೆಯೊಂದಿಗೆ ಪುರಸ್ಕೃತರಾಗಿದ್ದರು. ಅತ್ಯುತ್ತಮ ವಾಲಿಬಾಲ್ ಆಟಗಾರನಾಗಿ ಗುರುತಿಸಿಕೊಂಡು ಬಳಿಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ‌ ಪಡೆದು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

 

 

 

ಪ್ರಸ್ತುತ ಹುಬ್ಬಳ್ಳಿ ರೈಲ್ವೆ ತಂಡ ಹಾಗೂ ಇಂಡಿಯನ್ ರೈಲ್ವೇ ವಾಲಿಬಾಲ್ ತಂಡದ ಕಪ್ತಾನನಾಗಿದ್ದಾರೆ. ಜಪಾನ್‌ನಲ್ಲಿ ನಡೆದ ವಾಲಿಬಾಲ್ ಚಾಂಪಿಯನ್‌ ಶಿಪ್‌ನಲ್ಲೂ ಭಾರತವನ್ನು ಪ್ರತಿನಿಧಿಸಿ ಅದ್ಭುತ ಸಾಧನೆ ತೋರಿದ್ದರು. ವಿಶೇಷ ಎಂದರೆ ಇವರು ಭಾರತದ ರಾಷ್ಟ್ರೀಯ ನೆಟ್‌ಬಾಲ್ ತಂಡದ ನಾಯಕನೂ ಆಗಿದ್ದಾರೆ.

 

ಪ್ರಶಸ್ತಿಗಳ ಗರಿ:

ಅಶ್ವಲ್ ರೈ 2019ರಲ್ಲಿ ಏಶ್ಯದ ಬೆಸ್ಟ್ ಬ್ಲಾಕರ್, ಸೌತ್ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಾಲಿಬಾಲ್ ಆಟದಲ್ಲಿ ದೇಶದ ಪರ ಗಮನಾರ್ಹ ಸಾಧನೆ ತೋರಿದ್ದಾರೆ.

error: Content is protected !!