ಸಾಹಿತ್ಯದಿಂದ ಸಮಾಜ ತಿದ್ದುವ ಕಾರ್ಯ: ಸಾಹಿತ್ಯ ಕ್ಷೇತ್ರಕ್ಕೆ ಕನ್ನಡದ ಕೊಡುಗೆ ಅನನ್ಯ: ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದವರ ಸ್ಮರಣೆ ಅವಶ್ಯ: ಧರ್ಮಸ್ಥಳದಿಂದ ಕನ್ನಡ ಭಾಷೆಗೆ ಭದ್ರ ಬುನಾದಿ‌ ನಿರ್ಮಿಸುವ ಕಾರ್ಯ: ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಹೇಳಿಕೆ: ತುಳು ಭಾಷೆಯಲ್ಲಿ ಮಾತು ಆರಂಭಿಸಿದ ಸಚಿವರು: ಸಾಹಿತ್ಯ ಸಮ್ಮೇಳನದ 89ನೇ ಅಧಿವೇಶನ ಉದ್ಘಾಟನೆ

 

ಧರ್ಮಸ್ಥಳ: ಕನ್ನಡ ಸಾಹಿತ್ಯ ಶತಮಾನಗಳ‌ ಹಿಂದಿನಿಂದಲೂ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಬಸವಣ್ಣ ಮೊದಲಾದವರು ಅಂದಿನ ಕಾಲದಲ್ಲಿಯೇ ಪ್ರಜಾಪ್ರಭುತ್ವದ ಚಿಂತನೆ ಹೊಂದಿದ್ದರು. ಅವರು ತಮ್ಮ ಸಾಹಿತ್ಯದ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದರು. ಇಂದಿಗೂ ‌ಸಾಹಿತ್ಯದಿಂದ ಸಮಾಜವನ್ನು ಸರಿ ದಾರಿಯಲ್ಲಿ ನಡೆಸುವ ಕಾರ್ಯ ನಡೆಸಿದ್ದಾರೆ. ಕನ್ನಡ ಭಾಷೆಯ ಪ್ರಥಮ ಪ್ರತಿಯೆಂದು ಹೇಳಲಾದ ಮೂಡಬಿದಿರೆಯ ಉದ್ಧಟ ಕವಿಯಬಚಂಪೂ ಕಾವ್ಯ, ಕಾಸರಗೋಡಿನಲ್ಲಿ ಲಭಿಸಿರುವ 10ನೇ ಶತಮಾನದ ಶಾಸನ, ಶೃಂಗಾರಾಣವ ಚಂದ್ರಿಕಾ ಕೃತಿ, 15ನೇ ಶತಮಾನದಲ್ಲಿ ಕವಿ ರತ್ನಾಕರವರ್ಣಿ ರಚಿಸಿರುವ ಭರತೇಶ ವೈಭವ, ಮಾಧ್ಯಮ ಕ್ಷೇತ್ರದಲ್ಲಿ ಪ್ರಥಮ ಪತ್ರಿಕೆ ಮೊದಲಾಗಿ ಸಾಹಿತ್ಯ ಕ್ಷೇತ್ರಕ್ಕೆ ಕನ್ನಡ ನೀಡಿರುವ ಕೊಡುಗೆ ಅನನ್ಯ ಎಂದು ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಹೇಳಿದರು.

 

 

ದೀಪ ಎಂದರೆ ಬೆಳಕಿನ ಸಂಕೇತವಾಗಿದೆ. ಜ್ಞಾನವನ್ನು ಜಗತ್ತಿಗೆ ಪಸರಿಸುವ ಸಂಕೇತವಾಗಿ‌ ಇಂದು ಸಾಹಿತ್ಯ ಸಮ್ಮೇಳನ‌ ನಡೆಯುತ್ತಿದೆ. ದೀಪ ಹಚ್ಚಿ ಭಗವಂತನಿಗೆ ಕೃತಜ್ಞತೆ ಅರ್ಪಿಸುವ ಜೊತೆಗೆ ಸಾಹಿತ್ಯ ಪೋಷಿಸುವ, ಸುಜ್ಞಾನ ಪಸರಿಸುವ ಉತ್ಸವವಾಗಿ ನಡೆಯುತ್ತಿರುವುದು ಅರ್ಥಪೂರ್ಣ ಕಾರ್ಯವಾಗಿದೆ. ಧರ್ಮಸ್ಥಳದಿಂದ ಕನ್ನಡ ಭಾಷೆಗೆ ಭದ್ರ ಬುನಾದಿ‌ ನಿರ್ಮಿಸುವ ಕಾರ್ಯ ಸಾಹಿತ್ಯ ಸಮ್ಮೇಳನದ ಮೂಲಕ 89 ವರ್ಷಗಳಿಂದ ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಕನ್ನಡ ಏಕೀಕರಣಕ್ಕೆ ಶ್ರಮಿಸಿದವರ ಸ್ಮರಣೆ ಅವಶ್ಯ:

ಕರ್ನಾಟಕ ರಾಜ್ಯ 8 ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಹೊಂದಿದೆ. ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕನ್ನಡ ಏಕೀಕರಣಕ್ಕೆ ಶ್ರಮಿಸಿದ ಮಹನೀಯರನ್ನು ಸ್ಮರಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ.

 

 

ಕುವೆಂಪು, ಆಲೂರು ವೆಂಕಟರಾಯರು, ದೇವರಾಜ ಅರಸ್ ಸೇರಿದಂತೆ ಮಹನೀಯರು ಹೋರಾಟ ಮಾಡಿದ ಫಲವಾಗಿ ಭಾಷಾ ಪ್ರಾಂತ್ಯಗಳಾಗಿ ಹಂಚಿ ಹೋಗಿದ್ದ ರಾಜ್ಯವನ್ನು ಏಕೀಕರಣದ ಮೂಲಕ ಕರ್ನಾಟಕಕ್ಕೆ ಸೇರಿಸಿಕೊಂಡು ನವ ಕರ್ನಾಟಕ ನಿರ್ಮಾಣಕ್ಕೆ ತಮ್ಮ ಕೊಡುಗೆ ನೀಡಿದರು ಎಂದರು.

ತುಳುವಿನಲ್ಲಿ ಮಾತು ಆರಂಭ:

ಸಚಿವ ಡಾ. ಸುಧಾಕರ್ ಅವರು ಸಭೆಯಲ್ಲಿ ಮಾತು ಆರಂಭಿಸುವ ಸಂದರ್ಭದಲ್ಲಿ “ತುಳುನಾಡ್ ದ ಎನ್ನ ಮಾತ ಬಂಧುಲೆಗ್ ಎನ್ನ ಉಡಲ್ ದಿಂಜಿನ ಸೊಲ್ಮೆಲು” (“ತುಳುನಾಡಿನ ನನ್ನ ಎಲ್ಲಾ ಬಂಧುಗಳಿಗೆ ಹೃದಯಪೂರ್ವಕ ನಮಸ್ಕಾರಗಳು”) ಎಂಬ ಮಾತಿನೊಂದಿಗೆ ಭಾಷಣ ಆರಂಭಿಸುವ ಮೂಲಕ ಗಮನ ಸೆಳೆದರು.

 

 

 

ಸಮೃದ್ಧವಾಗಿದೆ ರಾಜ್ಯ, ದೂರವಾಗಲಿ ಕೊರೋನಾ ಮಹಾಮಾರಿ:

ಧರ್ಮಸ್ಥಳದಿಂದ ಕೆರೆಗಳ ಹೂಳೆತ್ತಿ ಪುನಶ್ಚೇತನಗೊಳಿಸುವ ಕಾರ್ಯ‌ ನಡೆದಿದೆ. ಅದೇ ರೀತಿ ಈ ವರ್ಷ ರಾಜ್ಯದ ಬಹುತೇಕ ಕೆರೆಗಳು ತುಂಬಿ ಹರಿದಿವೆ. ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಬರದಿಂದ ತತ್ತರಿಸಿ ಹೋಗುತ್ತಿದ್ದವು. ಆದರೆ ಈ ಬಾರಿ ನಿರಂತರ ಮಳೆಯಿಂದ ಕೆರೆಗಳು ತುಂಬಿ ಕೋಡಿ ಹರಿದಿದ್ದು, ಬರ ಪೀಡಿತ ಜಿಲ್ಲೆಗಳೆಂಬ ಹಣೆಪಟ್ಟಿ ಹೊತ್ತಿದ್ದ ಈ ಜಿಲ್ಲೆಗಳು‌ ಮಲೆನಾಡಿನಂತೆ ಹಸಿರಿನಿಂದ ಮಲೆನಾಡಿನಂತೆ ಕಂಗೊಳಿಸುತ್ತಿದೆ. ಅದೇ ರೀತಿ ಕೊರೋನಾ ಎರಡೂ ಅಲೆಗಳನ್ನು ಸರಕಾರ ಸಮರ್ಥವಾಗಿ ಎದುರಿಸಿದ್ದು, ಮೈಕ್ರಾನ್ ಭೀತಿಯನ್ನೂ ಸಮರ್ಪಕವಾಗಿ ಎದುರಿಸಲಿದ್ದೇವೆ. ಆದರೆ ಅದು ಯಾವುದೇ ಹಾನಿ‌ ಉಂಟುಮಾಡದಿರಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

 

 

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಸಾಹಿತ್ಯದಿಂದ ಅಂತಃಕರಣದ ಶುದ್ಧಿ ಸಾಧ್ಯ. ಇಂದಿನ ಆಧುನಿಕ ಪ್ರಪಂಚದಲ್ಲಿ ರಂಜನೀಯ ಸಾಹಿತ್ಯ ಹೆಚ್ಚು ಪ್ರಚಲಿತದಲ್ಲಿದೆ. ಆದರೆ ಸಾಹಿತ್ಯ ಮನೋರಂಜನೆಗೆ ಸೀಮಿತವಾಗದೆ, ಮನೋವಿಕಾಸಕ್ಕೆ ಪೂರಕವಾಗಿರಬೇಕು. ಯಾವುದೇ ವಿಜ್ಞಾನ, ತಂತ್ರಜ್ಞಾನಗಳು ವ್ಯಕ್ತಿಯ ವಿಕಾಸಕ್ಕೆ ಕಾರಣವಾಗಬೇಕೇ ಹೊರತು ಮುರುಟಿ ಹೋಗುವಂತಿರಬಾರದು ಎಂದರು.
ಧರ್ಮಾಧಿಕಾರಿ‌ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣ ಮಾಡಿದರು.

 

 

 

ಕೆ.ಪಿ.ಟಿ.ಸಿ.ಎಲ್.ನಲ್ಲಿ ಇಂಜಿನಿಯರ್ ಡಾ. ಗಜಾನನ ಶರ್ಮ ಅವರು ‘ಐತಿಹಾಸಿಕ ಸಾಹಿತ್ಯ ಸೃಷ್ಟಿಯಲ್ಲಿ ಎದುರಾಗುವ ಸವಾಲುಗಳು’ ವಿಚಾರದ ಕುರಿತು, ಲೇಖಕಿ, ಕಿರುತೆರೆ, ಸಿನಿಮಾ ಕಥಾ ರಚನಾಕಾರರು, ಕಿರುಚಿತ್ರ ನಿರ್ಮಾಪಕರು, ನಿರ್ದೇಶಕಿ ಡಾ. ಪಿ. ಚಂದ್ರಿಕಾ ಅವರು ‘ಸಾಹಿತ್ಯ ಸಂವೇದನೆ, ಮಹಿಳಾ ಅಭಿವ್ಯಕ್ತಿ’ ವಿಚಾರದ ಕುರಿತು, ಕಿರುತೆರೆ ಹಾಸ್ಯ ಕಲಾವಿದ, ವಾಗ್ಮಿ, ಅಂಕಣಕಾರ, ಲೇಖಕ ಡಾ. ಕೆ. ಪಿ. ಪುತ್ತೂರಾಯ ಅವರು ‘ಶಿಕ್ಷಣ ಮತ್ತು ಸಂಸ್ಕೃತಿಯ ರಕ್ಷಣೆಯಲ್ಲಿ ಸಾಹಿತ್ಯದ ಪಾತ್ರ’ ಕುರಿತು ಉಪನ್ಯಾಸ ನೀಡಲಿದ್ದಾರೆ. ಸ್ವಾಗತ ಸಮಿತಿ ‌ಉಪಾಧ್ಯಕ್ಷರಾದ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ‌ಕುಮಾರ್, ಖಜಾಂಚಿ ಡಿ. ಹರ್ಷೇಂದ್ರ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್.ಡಿ. ಎಂ ಸೊಸೈಟಿ ಯೋಜನಾ ವಿಭಾಗ ನಿರ್ದೇಶಕ ಡಿ. ಶ್ರೇಯಸ್ ಕುಮಾರ್, ಕ.ಸಾ.ಪ.‌ ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಸನ್ಮಾನ ಪತ್ರ ವಾಚಿಸಿದರು.
ಉದ್ಘಾಟಕರು, ಅಧ್ಯಕ್ಷರು ಹಾಗೂ ಉಪನ್ಯಾಸರನ್ನು ಧರ್ಮಸ್ಥಳದ ವತಿಯಿಂದ ಗೌರವಿಸಲಾಯಿತು.
ಅತಿಥಿಗಳನ್ನು ಧರ್ಮಸ್ಥಳದ ಬೀಡಿನಿಂದ ಮೆರವಣಿಗೆ ಮೂಲಕ ವೇದಿಕೆ ಬಳಿಗೆ ಕರೆತರಲಾಯಿತು.
ಉಪನ್ಯಾಸಕ ಡಾ. ಬಿ. ಪಿ. ಸಂಪತ್ ಕುಮಾರ್ ಕಾರ್ಯಕ್ರಮ ‌ನಿರ್ವಹಿಸಿದರು. ರುಡ್ ಸೆಟಿ ನಿರ್ದೇಶಕ ಎಂ ಸುರೇಶ್ ವಂದಿಸಿದರು.

error: Content is protected !!