ಧರ್ಮಸ್ಥಳ: ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು ಸರ್ವರ ಹಿತ ಹಾಗೂ ಸುಂದರ ಸಹಬಾಳ್ವೆಯ ಜೊತೆಗೆ ಭಾಷಾ ಸಾಮರಸ್ಯ, ಭಾಷಾಭಿಮಾನದ ಜೊತೆಗೆ ಮಾನವೀಯ ಗುಣಗಳ ಉದ್ದೀಪನಗೊಳಿಸುವ ಉದ್ದೇಶ ಹೊಂದಿದೆ. ಇದರೊಂದಿಗೆ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ಸಾಹಿತ್ಯ ಅಧ್ಯಯನದಿಂದ ಮಾನವನ ಬದುಕಿಗೆ ಆವಶ್ಯಕವಾದ ನೈತಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮೌಲ್ಯಗಳ ಪ್ರೇರಣೆ ದೊರೆಯುತ್ತದೆ. ಪ್ರಸ್ತುತ ಅನೇಕ ಪುಣ್ಯಕ್ಷೇತ್ರ, ಮಠ-ಮಂದಿರಗಳು ಅಲ್ಲಿಯ ವಾರ್ಷಿಕ ಜಾತ್ರೆಗಳ ಸಂದರ್ಭ ಧರ್ಮಸ್ಥಳದ ಮಾದರಿಯಲ್ಲೇ ಸಾಹಿತ್ಯ ಸಮ್ಮೇಳನಗಳ ಆಯೋಜನೆ ಮೂಲಕ ಸಾಹಿತಿಗಳಿಗೂ, ಸಾಹಿತ್ಯ ಪ್ರೇಮಿಗಳಿಗೆ ಬೆಂಬಲ ನೀಡಲಾಗುತ್ತಿದೆ. ಸಾಹಿತ್ಯ ಕೃತಿಗಳು ಸಮಾಜ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂಬ ಕಾರಣದಿಂದ ಉತ್ತಮ ಸಾಹಿತ್ಯವನ್ನು ಹಾಗೂ ಅದನ್ನು ರಚಿಸುವ ಲೇಖಕರನ್ನು, ಅವರ ಸಾಹಿತ್ಯವನ್ನು ಪ್ರಕಟಿಸುವ ಪ್ರಕಾಶಕರನ್ನು, ಬೆಂಬಲಿಸುವ ಓದುಗರನ್ನು, ಸಂಘ-ಸಂಸ್ಥೆಗಳನ್ನು ನಾಡು ಕೃತಜ್ಞತೆಯಿಂದ ಸದಾ ಸ್ಮರಿಸಬೇಕಿದೆ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.
ಅವರು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಹಮ್ಮಿಕೊಂಡಿರುವ ಸಾಹಿತ್ಯ ಸಮ್ಮೇಳನದ 89ನೇ ಅಧಿವೇಶನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸ್ವಾಗತ ಭಾಷಣ ನೆರವೇರಿಸಿದರು.
ಚೆನ್ನಾಭೈರದೇವಿ ಯಶೋಗಾಧೆ ಹೊರ ಜಗತ್ತಿಗೆ ತಿಳಿದಿಲ್ಲ. ಆಕೆ ಕಾಳುಮೆಣಸಿನ ರಾಣಿ ಎಂದೇ ಖ್ಯಾತರಾಗಿದ್ದರು. ಅವರ ನೆನಪಿಗಾಗಿ ಸ್ಥಳೀಯ ಶಾಸಕ ಸುನಿಲ್ ಅವರ ಜತೆ ಮಾತನಾಡಿ ಹೊನ್ನಾವರದಲ್ಲಿ ‘ಚೆನ್ನಾಭೈರ ದೇವಿ ಹೆಸರಿನಲ್ಲಿ ಥೀಮ್ ಪಾರ್ಕ್’ ರಚನೆ ಮಾಡಲಾಗುವುದು. ಈ ಮೂಲಕ ಅವರ ಹೆಸರು ಚಿರಸ್ಥಾಯಿಯಾಗುವಂತೆ ಮಾಡಲಾಗುವುದು. ಕೊರೋನಾ ಸಂದರ್ಭ ಗಮನಾರ್ಹ ಪರಿವರ್ತನೆಗಳು ಸಮಾಜದಲ್ಲಿ ನಡೆದಿವೆ. ಕೃಷಿ, ವ್ಯಾಪಾರ, ಉದ್ಯೋಗ, ಶಿಕ್ಷಣ ಚಟುವಟಿಕೆಗಳಲ್ಲಿ ವ್ಯತ್ಯಾಸವಾದರೂ ಓದುವ ಹವ್ಯಾಸ ಹೆಚ್ಚಾದಂತೆ ಕಂಡುಬಂದಿದೆ. ಬಹುತೇಕರು ಪುಸ್ತಕ ಹಾಗೂ ಪತ್ರಿಕೆಗಳನ್ನು ಮತ್ತೆ ಓದಲಾರಂಭಿಸಿದ್ದಾರೆ. ಇದರ ಅರ್ಥ ಲಾಕ್ ಡೌನ್ ವೇಳೆ ಸಾಹಿತ್ಯಾಭಿರುಚಿ ಹೆಚ್ಚಿನವರಲ್ಲಿ ಕಂಡುಬಂದಿದೆ. ಈ ಎರಡು ವರ್ಷಗಳ ಅವಧಿಯಲ್ಲಿ ಅನೇಕ ಸಾಹಿತಿಗಳು ಹಾಗೂ ಪ್ರಕಾಶಕರು ತಮ್ಮ ಹೊಸ ಪುಸ್ತಕಗಳನ್ನು ಕಳುಹಿಸಿದ್ದರು. ನಾನು ಹಾಗೂ ನನ್ನ ಪತ್ನಿ ಹೇಮಾವತಿ ಹೆಗ್ಗಡೆಯವರು ಅವುಗಳನ್ನು ಓದಿ ಆನಂದಿಸಿದ್ದೇವೆ. ಪುಸ್ತಕಗಳ ಓದು, ಬರಹ, ಪ್ರಕಾಶನ ನಿರಂತರ ನಡೆದಿದ್ದು, ಎಲ್ಲಾ ವಿಧದ ಸಾಹಿತ್ಯಕ್ಕೆ ಪ್ರೇರಣೆ ನೀಡಿವೆ ಎಂದರು.
ಕಿರು ಹೊತ್ತಿಗೆಗಳಾಗಿವೆ ಪತ್ರಿಕೆಗಳು:
ಕೊರೋನಾ ಸಂದರ್ಭದಲ್ಲಿ ಪತ್ರಿಕೆ ಹಾಗೂ ಮಾಧ್ಯಮಗಳು ಸಮಾಜಮುಖಿ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ ಮಿತ್ರರು ಜನಸಾಮಾನ್ಯರಿಗೆ ಹತ್ತಿರವಾಗುವ ಜೊತೆಗೆ ಮೌಲಿಕ ಸಮಾಜ ಕಟ್ಟುವ ಕಾರ್ಯ ಮಾಡಿರುವುದು ಶ್ಲಾಘನೀಯ ವಿಚಾರವಾಗಿದೆ. ಪತ್ರಿಕೆಗಳು ಜಾಹೀರಾತು ಕೊರತೆಯಿಂದ ನಷ್ಟ ಅನುಭವಿಸಿದ್ದರೂ ಪ್ರಸಾರ ಹಾಗೂ ವಿತರಣೆಯಲ್ಲಿ ಕೊರತೆಯಾಗದಂತೆ ಶ್ರಮವಹಿಸಿವೆ. ಪ್ರಸ್ತುತ ಪತ್ರಿಕೆಗಳೂ ಸಾಹಿತ್ಯ ಸೇವೆಯಲ್ಲಿ ತೊಡಗಿವೆ. ಕೇವಲ ಸುದ್ದಿ-ಸಮಾಚಾರಗಳ ಜೊತೆಗೆ ಮೌಲಿಕ ಲೇಖನಗಳು, ಚಿಂತನೆಗಳು, ಸಾಹಿತಿಗಳ ಪುಸ್ತಕ ಹಾಗೂ ಕೃತಿಗಳ ವಿಮರ್ಶೆ ಮುಂತಾದ ಸಕಾಲಿಕ ಬರೆಹಗಳ ಮೂಲಕ ಜ್ಞಾನಾರ್ಜನೆಗೆ ಸಹಕಾರಿಯಾಗಿದೆ. ಪತ್ರಿಕೆಗಳು ಒಂದು ದಿನಕ್ಕೆ ಸೀಮಿತವಾಗದೆ, ಎಲ್ಲಾ ಕಾಲದಲ್ಲೂ ತೆಗೆದು ಓದುವ ಮೂಲಕ ಚಿಂತನಧಾರೆಗಳಾಗಿ, ವಿಚಾರ-ವಿಮರ್ಶೆಗಳಿಗೆ ಬಹು ಉಪಯುಕ್ತ ಕಿರು ಹೊತ್ತಿಗೆಗಳಾಗಿ ಪರಿವರ್ತನೆಗೊಂಡಿವೆ. ರೇಡಿಯೋ ಹಾಗೂ ದೂರದರ್ಶನದಲ್ಲೂ ಯೋಗ, ಆಹಾರ, ಆರೋಗ್ಯ, ಸಾಹಿತಿಗಳ ಸಂವಾದ, ಮೊದಲಾದ ಸಮಾಜಮುಖಿ ಕಾರ್ಯಕ್ರಮಗಳಿಂದ ಜನರಿಗೆ ಉಪಯೋಗವಾಗಿದೆ ಎಂದರು.
ಜ್ಞಾನಪೀಠ ಪುರಸ್ಕೃತರ ಸಾಹಿತ್ಯ ಸೇವೆ ಮಾರ್ಗದರ್ಶಿ:
ಮಾನವೀಯತೆ, ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸಿ, ನಾಡು-ನುಡಿಯನ್ನು ಸಂರಕ್ಷಿಸಿ, ನಮ್ಮತನದೊಂದಿಗೆ ಕುಟುಂಬ, ಸಮಾಜ ನೆಮ್ಮದಿಯಿಂದ ಬಾಳುವಂತಾಗಬೇಕು ಎಂಬುದೇ ಧರ್ಮ ಹಾಗೂ ಸಾಹಿತ್ಯದ ಮೂಲ ಉದ್ದೇಶವಾಗಿದೆ. ಧರ್ಮ, ಅರ್ಥ, ಕಾಮಗಳ ಸಮತೋಲನ ಹಾಗೂ ಅದರ ನಿಯಂತ್ರಣವೇ ಸಾರ್ಥಕ ಬದುಕಿನ ಗುಟ್ಟು. ರತ್ನಾಕರವರ್ಣಿಯ ಭರತೇಶ ವೈಭವದಲ್ಲಿ ಇದರ ಉಲ್ಲೇಖ ಕಾಣಬಹುದು. ಉತ್ತಮರು ಧರ್ಮದಿಂದಲೇ ಸಂಪತ್ತು ಬಂದಿದ್ದು ಎಂದು ತಿಳಿದು ಅದನ್ನು ಒಳಿತಿಗಾಗಿಯೇ ಬಳಸುವರು. ಆದರೆ ಕರ್ಮಿಗಳು ಭೋಗ ಜೀವನವೆ ಮೇಲು ಎಂದು ಜೀವಿಸುವರು ಎಂದು ಅವರು ತಿಳಿಸಿದ್ದಾರೆ. ಧರ್ಮ ಮತ್ತು ಸಾಹಿತ್ಯ ಮಾನವರ ಏಳಿಗೆಗೆ ಪೂರಕ ಮತ್ತು ಪ್ರೇರಕವಾಗಿದೆ. ಕನ್ನಡ ನಾಡಿನಲ್ಲಿ ಎಂಟು ಮಂದಿ ಜ್ಞಾನಪೀಠ ಪುರಸ್ಕೃತರ ಸಾಹಿತ್ಯ ಸೇವೆ ಇತರರಿಗೆ ಮಾರ್ಗದರ್ಶಿಯಾಗಿದೆ ಎಂದರು.
ಗಾಂಧೀಜಿಯವರ ಸಾಹಿತ್ಯ ಸಂಗ್ರಹಣೆ:
ಕೀರ್ತಿಶೇಷ ಡಿ. ಮಂಜಯ್ಯ ಹೆಗ್ಗಡೆ, ಕೀರ್ತಿಶೇಷ ಡಿ. ರತ್ನವರ್ಮ ಹೆಗ್ಗಡೆಯವರ ಕಾಲದಿಂದಲೂ ಕ್ಷೇತ್ರದಲ್ಲಿ ಸಾಹಿತ್ಯಕ್ಕೆ ವಿಶೇಷ ಮನ್ನಣೆ ನೀಡುತ್ತಾ ಬರಲಾಗಿದೆ. ಸಾಹಿತಿಗಳು, ವಿದ್ವಾಂಸರನ್ನು ಕರೆಸಿ ಉಪನ್ಯಾಸಗಳನ್ನು ಕ್ಷೇತ್ರದಲ್ಲಿ ಏರ್ಪಡಿಸುವ ಮೂಲಕ ಸಾಹಿತ್ಯ ಪರಿಚಯವನ್ನು ಹಾಗೂ ಆಸಕ್ತಿಯನ್ನು ಭಕ್ತರು ಹಾಗೂ ಸಾಹಿತ್ಯಾಸಕ್ತರಲ್ಲಿ ಮೂಡಿಸುವ ಕಾರ್ಯ ನಡೆಸಲಾಗಿದೆ. ಸಾಹಿತಿಗಳ ಹಾಗೂ ಅವರ ಸಾಹಿತ್ಯ ಪರಿಚಯವನ್ನು ಜನಸಾಮಾನ್ಯರಿಗೆ ಮಾಡುವ ಮೂಲಕ ಸಾಹಿತ್ಯಾಭಿರುಚಿ ಮೂಡಿಸಲು ಸಾಧ್ಯ. ಶ್ರೀ ಕ್ಷೇತ್ರ ಧರ್ಮಸ್ಥಳವು ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ಮೂಲಕ ಪುರಾತನ ಹಸ್ತಪ್ರತಿ, ಗ್ರಂಥಗಳು, ಸುಪ್ರಸಿದ್ಧ ಸಾಹಿತಿಗಳ ಕೃತಿಗಳ ಸಂರಕ್ಷಣೆ ನಡೆಯುತ್ತಿದೆ. ಮುಖ್ಯವಾಗಿ ಮಹಾತ್ಮಾ ಗಾಂಧೀಜಿಯವರು ಬರೆದಿರುವ ಎಲ್ಲಾ ಅಮೂಲ್ಯ ಪುಸ್ತಕಗಳ ಸಂಗ್ರಹವನ್ನು ಇಲ್ಲಿ ಮಾಡಲಾಗಿದೆ. ಭಾರತೀಯ ಭಾಷೆಗಳ ಗ್ರಂಥಗಳ ಅನುವಾದಿತ ಕೃತಿಗಳು, ಸಂಪಾದಕೀಯಗಳನ್ನು ಸಂರಕ್ಷಿಸಿ ಸಂಶೋಧಕರು, ವಿದ್ವಾಂಸರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಭಿಮಾನಿಗಳ ಬಳಕೆಗೆ ನೀಡಲಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಪುಸ್ತಕ ಪ್ರಕಾಶನ ಮಾಲೆ ಮೂಲಕ ಓದುವ ಸಂಸ್ಕೃತಿ ಹೆಚ್ಚಿಸುವ ಕಾರ್ಯ ಮಾಡಲಾಗಿದೆ. ಕ್ಷೇತ್ರದಿಂದ ‘ಮಂಜುವಾಣಿ’ ಮಾಸಪತ್ರಿಕೆ ಪ್ರಕಟವಾಗುತ್ತಿದ್ದು, ಓದುಗರಲ್ಲಿ ಧರ್ಮ ಹಾಗೂ ಸಾಹಿತ್ಯದ ಅಭಿರುಚಿ ಮೂಡಿಸುತ್ತಿದೆ. ‘ನಿರಂತರ’ ಮಾಸಪತ್ರಿಕೆ 8.50 ಲಕ್ಷಕ್ಕೂ ಹೆಚ್ಚು ಪ್ರಸಾರ ಹೊಂದಿದ್ದು, ಗ್ರಾಮೀಣ ಬದುಕಿನ ಕೃಷಿ ಹಾಗೂ ಅಲ್ಲಿಯ ಜನರನ್ನು ಬಲಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದರು.
ಜನಕಲ್ಯಾಣ ಕಾರ್ಯ:
ಹೇಮಾವತಿ ಹೆಗ್ಗಡೆಯವರು ಸಾಹಿತ್ಯ ಹಾಗೂ ಬದುಕನ್ನು ಒಂದೇ ಎಂದು ಭಾವಿಸಿದ್ದಾರೆ. ದುರ್ಬಲರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ‘ವಾತ್ಸಲ್ಯ’ ಎಂಬ ಯೋಜನೆ ಮೂಲಕ 11,820 ಅಶಕ್ತರಿಗೆ 9.23 ಕೋಟಿ ರೂ. ಮಾಸಾಶನ ನೀಡಲಾಗುತ್ತಿದೆ. ಕಡುಬಡವರಿಗೆ ಜೀವನಾವಶ್ಯಕ ವಸ್ತುಗಳನ್ನು ನೀಡಲಾಗಿದೆ. ಜಲಸಂಪನ್ಮೂಲಗಳ ರಕ್ಷಣೆಗಾಗಿ ಪ್ರಸಕ್ತ ವರ್ಷ 101ಕ್ಕೂ ಹೆಚ್ಚು ಕೆರೆಗಳ ಹೂಳೆತ್ತಿ ದುರಸ್ಥಿ ಮಾಡಲಾಗಿದೆ. ಗ್ರಾಮೀಣ ಬಡ ವಿದ್ಯಾರ್ಥಿಗಳ ನೆರವಿಗೆ ‘ಜ್ಞಾನತಾಣ’ ಕಾರ್ಯಕ್ರಮದಡಿಯಲ್ಲಿ 11 ಸಾವಿರ ಟ್ಯಾಬ್ ಹಾಗೂ 7 ಸಾವಿರ ಲ್ಯಾಪ್‌ಟಾಪ್ ವಿತರಿಸಲಾಗಿದೆ. ‘ಸುಜ್ಞಾನ ನಿಧಿ’ ಯೋಜನೆಯಡಿ 37,194 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗಿದೆ. 60 ಲಕ್ಷ ಗ್ರಾಮೀಣ ಮಹಿಳೆಯರಿಗೆ ಸ್ವ-ಉದ್ಯೋಗ, ಪರಿಸರ ಪ್ರಜ್ಞೆ, ವ್ಯವಹಾರ ಜ್ಞಾನ, ಮಕ್ಕಳ ಶಿಕ್ಷಣ ಹಾಗೂ ನಾಗರಿಕ ಸೌಲಭ್ಯಗಳ ಕುರಿತು ತರಬೇತಿ ನೀಡಲಾಗಿದೆ ಎಂದರು.
ಭಕ್ತರಿಂದ ಸೇವೆ:
ಲಕ್ಷದೀಪೋತ್ಸವಕ್ಕೆ ಭಕ್ತರು ವಿವಿಧ ರೀತಿಯ ಕೊಡುಗೆಗಳನ್ನು ಸೇವಾ ರೂಪದಲ್ಲಿ ನೀಡುತ್ತಿದ್ದಾರೆ. 2,500 ಮಂದಿಗೂ ಹೆಚ್ಚು ಕಲಾವಿದರು ಡೊಳ್ಳು, ವೀರಗಾಸೆ, ಮೊದಲಾದ ಕಲಾಪ್ರಕಾರಗಳ ಮೂಲಕ ಕಲಾಸೇವೆ ಮಾಡುತ್ತಿದ್ದಾರೆ. ಅದೇ ರೀತಿ ಜಿಲ್ಲೆಯ ವಿವಿಧೆಡೆಯ ಭಕ್ತರು 2 ಲಕ್ಷಕ್ಕೂ ಹೆಚ್ಚು ಮಂದಿಗೆ ಭಕ್ತರೇ ವಿವಿಧ ರೀತಿಯ ಭಕ್ಷ್ಯ,ಭೋಜನಗಳ ಮೂಲಕ ಅನ್ನದಾನ ಮಾಡುತ್ತಿದ್ದಾರೆ, 1.5 ಲಕ್ಷಕ್ಕೂ ಹೆಚ್ಚಿನ ನೀರಿನ ಬಾಟಲ್ ನೀಡಲಾಗಿದೆ. ಎರಡು ದಿನಗಳಲ್ಲಿ 5 ಲೋಡ್ ಅಕ್ಕಿ ದಾನವಾಗಿ ಲಭಿಸಿದೆ. ಅದೇ ರೀತಿ ಹೂವಿನ ಅಲಂಕಾರವೂ ಸೇವಾ ರೂಪದಲ್ಲಿ ಲಭಿಸಿದೆ. ಎಲ್ಲವೂ ಭಕ್ತಿಯನ್ನು ಪ್ರಕಟಿಸುವ ರೂಪವಾಗಿದೆ. ಎಲ್ಲಾ ಭಕ್ತರಿಗೂ ಮಂಜುನಾಥ ಸ್ವಾಮಿ ಸನ್ಮಂಗಲವನ್ನು ಉಂಟು ಮಾಡಲಿ ಎಂದು ಹಾರೈಸಿದರು.
ಸರ್ಕಾರದ ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಸಾಹಿತ್ಯ ಸಮ್ಮೇಳನದ 49ನೇ ಅಧಿವೇಶನ ಉದ್ಘಾಟಿಸಿದರು. ವಿದ್ವಾಂಸ, ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಶಿಕ್ಷಣ ತಜ್ಞ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳನ್ನು ಧರ್ಮಸ್ಥಳದ ಬೀಡಿನಿಂದ ಮೆರವಣಿಗೆ ಮೂಲಕ ವೇದಿಕೆ ಬಳಿಗೆ ಕರೆತರಲಾಯಿತು.
ಕೆ.ಪಿ.ಟಿ.ಸಿ.ಎಲ್.ನಲ್ಲಿ ಇಂಜಿನಿಯರ್ ಡಾ. ಗಜಾನನ ಶರ್ಮ ಅವರು ‘ಐತಿಹಾಸಿಕ ಸಾಹಿತ್ಯ ಸೃಷ್ಟಿಯಲ್ಲಿ ಎದುರಾಗುವ ಸವಾಲುಗಳು’ ವಿಚಾರದ ಕುರಿತು, ಲೇಖಕಿ, ಕಿರುತೆರೆ, ಸಿನಿಮಾ ಕಥಾ ರಚನಾಕಾರರು, ಕಿರುಚಿತ್ರ ನಿರ್ಮಾಪಕರು, ನಿರ್ದೇಶಕಿ ಡಾ. ಪಿ. ಚಂದ್ರಿಕಾ ಅವರು ‘ಸಾಹಿತ್ಯ ಸಂವೇದನೆ, ಮಹಿಳಾ ಅಭಿವ್ಯಕ್ತಿ’ ವಿಚಾರದ ಕುರಿತು, ಕಿರುತೆರೆ ಹಾಸ್ಯ ಕಲಾವಿದ, ವಾಗ್ಮಿ, ಅಂಕಣಕಾರ, ಲೇಖಕ ಡಾ. ಕೆ. ಪಿ. ಪುತ್ತೂರಾಯ ಅವರು ‘ಶಿಕ್ಷಣ ಮತ್ತು ಸಂಸ್ಕೃತಿಯ ರಕ್ಷಣೆಯಲ್ಲಿ ಸಾಹಿತ್ಯದ ಪಾತ್ರ’ ಕುರಿತು ಉಪನ್ಯಾಸ ನೀಡಲಿದ್ದಾರೆ. ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಖಜಾಂಚಿ ಡಿ. ಹರ್ಷೇಂದ್ರ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕ ಡಾ. ಬಿ. ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.