ವಿಶ್ವಶಾಂತಿ‌ ಸಾಧಿಸಲು ಧರ್ಮ ಸಹಕಾರಿ: ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಭಿಮತ: ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನ ಉದ್ಘಾಟನೆ:

 

ಧರ್ಮಸ್ಥಳ: ಧರ್ಮದ ತತ್ವ, ಸಿದ್ಧಾಂತಗಳನ್ನು ಅರಿತು ಬದುಕಿನಲ್ಲಿ ಪಾಲನೆ ಮಾಡಿದಾಗ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆದು ಸಾಮಾಜಿಕ ಸಾಮರಸ್ಯ ಉಂಟಾಗುತ್ತದೆ. ಈ ದಿಸೆಯಲ್ಲಿ ಧರ್ಮಸ್ಥಳದ ಸೇವೆ – ಸಾಧನೆ ಶ್ಲಾಘನೀಯವಾಗಿದೆ. ತಮ್ಮ ಧರ್ಮದ ಮರ್ಮವನ್ನರಿತು ಇತರ ಧರ್ಮಗಳನ್ನೂ ಗೌರವಿಸಿದಾಗ ಸಾಮಾಜಿಕ ಸಾಮರಸ್ಯದೊಂದಿಗೆ ವಿಶ್ವಶಾಂತಿ ಸಾಧ್ಯ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

 

 

ಅವರು ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಧರ್ಮಗಳೂ ಸಮಾನವಾಗಿದ್ದು ಧರ್ಮದ ಮೂಲಕ ವಿಶ್ವಶಾಂತಿ ಮತ್ತು ವಿಶ್ವಕಲ್ಯಾಣ ಸಾಧ್ಯ. ಎಲ್ಲರೂ ವಿಶ್ವಮಾನವರೆಂಬ ಚಿಂತನೆ ಹೊಂದಿದಾಗ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಭಾವನೆ ಮೂಡಿ ಬರುತ್ತದೆ ಎಂದರು.‌

 

 

ಲೋಕಸಭೆಯಲ್ಲಿ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಸರ್ವಧರ್ಮಗಳ ಸಮನ್ವಯದಿಂದ ಲೋಕ ಕಲ್ಯಾಣ ಸಾಧ್ಯ ಎಂಬ ಆಶಯ ವ್ಯಕ್ತಪಡಿಸಲಾಗಿದೆ. ಲೋಕ ಹಿತಕ್ಕಾಗಿ ಎಲ್ಲರನ್ನೂ ಉದ್ಧರಿಸುವುದೇ ಧರ್ಮದ ಮೂಲ ಉದ್ದೇಶ ಎಂದು ಕಿವಿ‌ಮಾತು ಹೇಳಿದರು.

 

 

ಅಧ್ಯಕ್ಷತೆ ವಹಿಸಿದ ಬೆಂಗಳೂರಿನ ಎಸ್. ವ್ಯಾಸ ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಜಿ. ಭಟ್ಟರು ಮಾತನಾಡಿ, ಸರ್ವರ ಸ್ವಾಸ್ಥ್ಯಕ್ಕಾಗಿ ನಾವು ಪ್ರಕೃತಿಗೆ ಪೂರಕವಾಗಿ ಬದುಕಬೇಕು. ಮಾನವನ ಅಪರಾಧಗಳು ಹಾಗೂ ಪ್ರಕೃತಿಗೆ ವಿರುದ್ಧವಾಗಿ ವರ್ತಿಸುವ ಸ್ವಭಾವವೇ ಇಂದಿನ ಪ್ರಾಕೃತಿಕ ವಿಕೋಪಗಳಿಗೆ ಕಾರಣ. ಸರ್ವವೂ ಧರ್ಮಮಯವಾಗಬೇಕು. ಧರ್ಮವು ಜಾತಿ-ಮತ, ಪಂಥಗಳ ಚೌಕಟ್ಟಿಗೆ ಸೀಮಿತವಾಗಬಾರದು. ಎಂದರು.
ಗುರುಕುಲ ಶಿಕ್ಷಣ ಪದ್ಧತಿಯ ಮೂಲಕ ಮಾತ್ರ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಬಹುದು. ಸಂಸ್ಕೃತ ಮೂಲಕ ಸಂಸ್ಕೃತಿ ಮತ್ತು ಸಂಸ್ಕಾರ ಉದ್ದೀಪನಗೊಳಿಸಬಹುದು. ಎಲ್ಲರೂ ಹೃದಯ ಶ್ರೀಮಂತಿಕೆಯೊಂದಿಗೆ ಜ್ಞಾನ, ಧ್ಯಾನ ಮತ್ತು ಕರ್ಮದಲ್ಲಿ ನಿರತರಾದಾಗ ವಿಶ್ವಶಾಂತಿಯೊಂದಿಗೆ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಉದಾರ ಭಾವನೆ ಮೂಡಿಬರಲು ಸಾಧ್ಯ ಎಂದರು.

 

 

ಧರ್ಮವು ನಮ್ಮ ಎಲ್ಲಾ ಪಾಪಕರ್ಮಗಳನ್ನು ಕಳೆಯುತ್ತದೆ. ಧರ್ಮದಲ್ಲಿ ಸರ್ವರ ಹಿತವಿದೆ. ಧರ್ಮದಲ್ಲಿ ಸರ್ವವೂ ಇದೆ, ಆದರೆ ಸರ್ವವೂ ಧರ್ಮವಲ್ಲ.‌ ಸರ್ವ ಧರ್ಮಗಳೂ ಪರಸ್ಪರ ಪೂರಕವಾಗಬೇಕು, ಮಾರಕವಾಗಬಾರದು‌ ಎಂದರು.
ಸಾಗರದ ಡಾ. ಸರ್ಫ್ರಾಜ್ ಚಂದ್ರಗುತ್ತಿ ಅವರು ‘ಭಾರತೀಯ ಧರ್ಮಗಳು’, ಮೈಸೂರು ವಿ.ವಿ. ನಿವೃತ್ತ ಪ್ರಾಧ್ಯಾಪಕಿ ಡಾ. ಎಂ.ಎಸ್. ಪದ್ಮ ಅವರು ‘ಜೈನಧರ್ಮದ ಮೌಲಿಕತೆ ಮತ್ತು ಮಹತ್ವ’, ಶಿವಮೊಗ್ಗದ ವೀರೇಶ್ ವಿ. ಮೊರಾಸ್ ಅವರು ‘ಧರ್ಮ ಮತ್ತು ಸಾಮಾಜಿಕ ಸ್ವಾಸ್ಥ್ಯ’ ವಿಚಾರದ ಕುರಿತು ಉಪನ್ಯಾಸ ನೀಡಿದರು.

 

 

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು‌ ಸ್ವಾಗತ ಭಾಷಣ ಮಾಡಿದರು. ‌
ಸ್ವಾಗತ ಸಮಿತಿ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.

 

 

ಧರ್ಮಸ್ಥಳದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಕುರ್ಮಾಣಿ ವಂದಿಸಿದರು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎ. ಕುಮಾರ ಹೆಗ್ಡೆ ನಿರೂಪಿಸಿದರು.

error: Content is protected !!