ಆಚರಣೆಯಲ್ಲಿದೆ ಧರ್ಮದ ಮರ್ಮ: ಧರ್ಮಾಧಿಕಾರಿ‌ ಡಾ. ವೀರೇಂದ್ರ ಹೆಗ್ಗಡೆ

 

 

 

 

ಧರ್ಮಸ್ಥಳ: ‘ಸತ್ಯಂ ವದ ಧರ್ಮಂ ಚರ’ ಎಂದು ಉಪನಿಷತ್ತಿನಲ್ಲಿ ತಿಳಿಸಲಾಗಿದೆ‌‌. ಅಂದರೆ ಧರ್ಮದ ಮರ್ಮವಿರುವುದು ಅದರ ಆಚರಣೆಯಲ್ಲಿ. ನಮ್ಮೆಲ್ಲರ ಜೀವನದಲ್ಲಿ ಪ್ರಕಾಶ ತುಂಬಿರಲಿ. ಪರಸ್ಪರ ಯಾವುದೇ ದ್ವೇಷ ಅಥವಾ ಅಸೂಯೆ ಇಲ್ಲದಿರಲಿ. ಸ್ವಾತಂತ್ರ್ಯ ದೊರಕಿದ ಬಳಿಕ 75 ವರ್ಷಗಳಲ್ಲಿ ನಮ್ಮ ಸಮಾಜದಲ್ಲಿ ಮೇಲು-ಕೀಳು ಎಂಬ ವ್ಯತ್ಯಾಸ ಮೊದಲಿಗಿಂತ ಕಡಿಮೆಯಾಗಿದೆ. ಒಬ್ಬರು ಇನ್ನೊಬ್ಬರ ಕಲ್ಯಾಣಕ್ಕಾಗಿ ಪ್ರಯತ್ನಿಸೋಣ ಎಂದು
ಎಂದು ಧರ್ಮಸ್ಥಳದ ಧರ್ಮಾಧಿಕಾರಿ‌ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.
ಅವರು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನದ ಸ್ವಾಗತ ಭಾಷಣ ಮಾಡಿದರು.
ನಾಗರಿಕ ಸಮಾಜದಲ್ಲಿ ಕಲೆ-ಸಂಸ್ಕೃತಿ , ಆಧ್ಯಾತ್ಮಿಕ, ಆರ್ಥಿಕ ಹೀಗೆ ಸಮಕಾಲೀನ ಸಮಾಜದ ಆಗುಹೋಗುಗಳಿಗೆ ಲಯಬದ್ಧವಾಗಿ ಸ್ಪಂದಿಸಿ, ಧಾರ್ಮಿಕ ವಿಚಾರಗಳ ವಿವರಗಳೊಂದಿಗೆ ವಿವೇಕ, ಕ್ಷಮೆ, ಸಹಾನುಭೂತಿ, ಶ್ರದ್ಧೆ, ಸತ್ಯಗಳನ್ನು ಒಳಗೊಂಡ ನಡತೆಯ ನಾಗರಿಕತೆಯು ಧರ್ಮದ ಮೂಲ ಜೀವದ್ರವ್ಯವಾಗಿದೆ. ಸ್ವಾಮಿ ವಿವೇಕಾನಂದರು ‘ಧರ್ಮ ಮತ್ತು ಸೇವೆಗಳು ಜೊತೆಜೊತೆಯಾಗಿ ಸಾಗಬೇಕು’ ಎಂಬುದಾಗಿ ತಿಳಿಸಿದ್ದರು. ಬಾಲ್ಯದಲ್ಲಿ ಇತರರ ಸಹಾಯದಿಂದ ಬೆಳೆಯುವ ಪ್ರತಿಯೊಬ್ಬರೂ ದೊಡ್ಡವರಾದ ಮೇಲೆ ಉಳಿದವರಿಗೆ ಸಹಕಾರಿಯಾಗಿ ಇತರರ ಬೆಳವಣಿಗೆಯಲ್ಲಿ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ತೊಡಗಬೇಕು ಎಂದರು.
ದೇಶದಲ್ಲಿನ ವಿವಿಧ ಧರ್ಮಗಳ ಮಹತ್ ಸಂದೇಶಗಳ ಸದ್‌ವಿಚಾರಗಳನ್ನು ತಿಳಿದು ನಮ್ಮ ಪರಂಪರೆಯನ್ನು ಪಾಲಿಸುತ್ತಾ, ಯಾವುದೇ ಸಂಕುಚಿತ ಭಾವನೆಗಳಿಗೆ ನಮ್ಮನ್ನು ನಿರ್ಬಂಧಿಸಿಕೊಳ್ಳದೆ, ಪ್ರಗತಿಪರ ಚಿಂತನೆಗಳೊಂದಿಗೆ, ಲೌಕಿಕ ಹಾಗೂ ಪಾರಮಾರ್ಥಿಕ ಎರಡೂ ದಿಕ್ಕುಗಳಲ್ಲಿ ಕ್ಷೇತ್ರವನ್ನು ಮುನ್ನಡೆಸಲಾಗಿದೆ ಎಂದರು.
ಕ್ಷೇತ್ರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯಾದ್ಯಂತ 5 ಲಕ್ಷದ 55 ಸಾವಿರ ಸ್ವ-ಸಹಾಯ ಸಂಘಗಳನ್ನು ರಚಿಸಿದ್ದು, ಇವುಗಳಲ್ಲಿ 50 ಲಕ್ಷ ಕುಟುಂಬಗಳು ಯೋಜನೆಗಳ ಲಾಭ ಪಡೆಯುತ್ತಿವೆ. 20 ಲಕ್ಷ ಮಂದಿ ‘ಜೀವನ ಮಧುರ’ ಪಾಲಿಸಿಯ ಮೂಲಕ ವಿಮಾರಕ್ಷೆ ಮಾಡಲಾಗಿದೆ. ಧರ್ಮೋತ್ಥಾನ ಟ್ರಸ್ಟ್ ಮೂಲಕ 259ಕ್ಕೂ ಹೆಚ್ಚು ದೇವಾಲಯ ಪುನರ್ ನಿರ್ಮಾಣವನ್ನು ಮಾಡಲಾಗಿದೆ. ಒಂದು ವರ್ಷದಲ್ಲಿಯೇ 843 ದೇವಾಲಯಗಳ ಜೀರ್ಣೋದ್ಧಾಕ್ಕೆ 14 ಕೋಟಿ ರೂಪಾಯಿ ಸಹಾಯಹಸ್ತ ನೀಡಲಾಗಿದೆ ಎಂದು ಸಮಾಜಿಕ‌ ಚಟುವಟಿಕೆಗಳ ‌ಮಾಹಿತಿ‌ ನೀಡಿದರು.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಧಿವೇಶನ ಉದ್ಘಾಟಿಸಿದರು.
ಬೆಂಗಳೂರು ಎಸ್.ವ್ಯಾಸಯೋಗ ವಿವಿ ವಿಶ್ರಾಂತ ಕುಲಪತಿ ಪ್ರೊ.ರಾಮಚಂದ್ರ ಜಿ.ಭಟ್ಟ ಅಧ್ಯಕ್ಷೀಯ ಭಾಷಣ ಮಾಡಿದರು.
ಸಾಹಿತಿ ಸಾಗರ ಡಾ.ಸರ್ಫಾಜ್ ಚಂದ್ರಗುತ್ತಿ ‘ಭಾರತೀಯ ಧರ್ಮಗಳು’, ಮಾನಸಗಂಗೋತ್ರಿ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಎಸ್.ಪದ್ಮ ಅವರು ‘ಜೈನ ಧರ್ಮದ ಮೌಲಿಕತೆ ಮತ್ತು ಮಹತ್ವ’, ಶಿವಮೊಗ್ಗ ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವೀರೇಶ್ ವಿ.ಮೋರಾಸ್ ಅವರು ‘ಧರ್ಮ ಮತ್ತು ಸಾಮಾಜಿಕ ಸ್ವಾಸ್ಥ್ಯ’ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಲಿದ್ದಾರೆ.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

error: Content is protected !!