ಧರ್ಮಸ್ಥಳ: ಲಕ್ಷದೀಪೋತ್ಸವ ಅಂಗವಾಗಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಡಿ.2ರಂದು ಗುರುವಾರ ಸಂಜೆ 5 ಗಂಟೆಯಿಂದ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನ ನಡೆಯಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧಿವೇಶನ ಉದ್ಘಾಟಿಸಲಿದ್ದಾರೆ. ಬೆಂಗಳೂರು ಎಸ್.ವ್ಯಾಸಯೋಗ ವಿವಿ ವಿಶ್ರಾಂತ ಕುಲಪತಿ ಪ್ರೊ.ರಾಮಚಂದ್ರ ಜಿ.ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಸಾಗರ ಡಾ.ಸರ್ಫ್ರಾಜ್ ಚಂದ್ರಗುತ್ತಿ, ಮಾನಸಗಂಗೋತ್ರಿಯ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಎಸ್.ಪದ್ಮ, ಶಿವಮೊಗ್ಗ ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವೀರೇಶ್ ವಿ.ಮೋರಾಸ್ ಉಪನ್ಯಾಸ ನೀಡಲಿದ್ದಾರೆ. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸ್ವಾಗತ ಭಾಷಣ ಮಾಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8 ಗಂಟೆಯಿಂದ 9.30 ಗಂಟೆವರೆಗೆ ಶ್ರೀಕೃಷ್ಣ ಮೋಹನ್ ಮತ್ತು ರಾಮ್ ಕುಮಾರ್ ಮೋಹನ್ ತ್ರಿಶೂರ್ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9.30ರಿಂದ 11 ಗಂಟೆಯವರೆಗೆ ರಾಷ್ಟ್ರದೇವೋಭವ ಖ್ಯಾತಿಯ ಮಂಗಳೂರು ಸನಾತನ ನಾಟ್ಯಾಲಯದಿಂದ ‘ಪುಣ್ಯಭೂಮಿ ಭಾರತ’ ನುಡಿ, ನಾದ, ನಾಟ್ಯಾಮೃತ ಕಾರ್ಯಕ್ರಮ ನಡೆಯಲಿದೆ.
ಉತ್ಸವ:
ಡಿ.2ರಂದು ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಲಿದೆ. ಶ್ರೀ ಸ್ವಾಮಿಯ ಭವ್ಯ ಮೆರವಣಿಗೆ ಸಾಗಿ ಉತ್ಸವ ಅದ್ದೂರಿಯಾಗಿ ನೆರವೇರುತ್ತದೆ. ಉತ್ಸವದ ಸಂದರ್ಭದಲ್ಲಿ ಸಹಸ್ರಾರು ಭಕ್ತರು, ಪಂಜು, ವಾದ್ಯಗಳು, ಬಿರುದಾವಳಿಗಳ ಜೊತೆಗೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆದು ಕಟ್ಟೆಯಲ್ಲಿ ಉತ್ಸವ ನಡೆಯುತ್ತದೆ. ಉತ್ಸವದ ಸಂದರ್ಭ ಅಷ್ಟವಿಧಾನ ಸೇವೆ ನಡೆಯುತ್ತದೆ, ಬಳಿಕ ದೇವಾಲಯ ಬಳಿಗೆ ಬಂದು ಬೆಳ್ಳಿ ರಥದಲ್ಲಿ ದೇವಾಲಯಕ್ಕೆ ಪ್ರದಕ್ಷಿಣೆ ಬರಲಾಗುತ್ತದೆ. ದೇವರ ಮೂರ್ತಿಗೆ ಮಂಗಳಾರತಿ ಮಾಡಿ ದೇವಾಲಯದೊಳಕ್ಕೆ ಕೊಂಡೊಯ್ಯುವುದರೊಂದಿಗೆ ಉತ್ಸವ ಕೊನೆಗೊಳ್ಳುತ್ತದೆ. ವರ್ಷ ಪೂರ್ತಿ ದೇವಾಲಯದೊಳಗೆ ಸ್ವಾಮಿಯ ದರ್ಶನ ಲಭಿಸಿದರೆ, ವಿಶೇಷ ಉತ್ಸವ ನಡೆಯುವ ದಿನಗಳಂದು ಶ್ರೀ ಮಂಜುನಾಥ ಸ್ವಾಮಿಯೇ ದೇಗುಲದಿಂದ ಹೊರಗೆ ಬಂದು ವಿಹಾರ ಮಾಡುವ ಮೂಲಕ ಭಕ್ತರಿಗೆ ದರ್ಶನ ನೀಡುತ್ತಾರೆ ಎಂಬ ನಂಬಿಕೆ ಭಕ್ತರದ್ದು.