ಬೆಳ್ತಂಗಡಿ: ಇತರ ಮಕ್ಕಳಂತೆ ಆಟ, ಪಾಠದಲ್ಲಿ ಮಗ್ನನಾಗಿ ಭವಿಷ್ಯದ ಕಲ್ಪನೆಯಲ್ಲಿ ಕನಸು ಕಟ್ಟಬೇಕಾದ 8 ನೇ ತರಗತಿಯ ಬಾಲಕನೋರ್ವ ಕಾಲಿನ ಎಲುಬು ಕ್ಯಾನ್ಸರ್ ನಿಂದ ನೋವು ಅನುಭವಿಸುತ್ತಿದ್ದು, ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಪೋಷಕರು ಕಣ್ಣೀರು ಸುರಿಸುತ್ತಿದ್ದಾರೆ. ಮುಂದೇನು ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಇದು ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಅಶ್ವಥನಗರ ನಿವಾಸಿ ಸುರೇಶ್ ಚೌಟ ಮತ್ತು ಭಾರತಿ ದಂಪತಿಗಳ ಪುತ್ರ ಸುಪ್ರಿತ್ ಎಸ್. ಚೌಟ ಎಂಬ ಬಾಲಕನ ಕಥೆ.
ಗೇರುಕಟ್ಟೆಯ ಕೊರಂಜ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 8 ನೇ ತರಗತಿ ಯಲ್ಲಿ ಕಲಿಯುತ್ತಿರುವ ಸುಪ್ರಿತ್ ಎಲ್ಲಾ ಮಕ್ಕಳಂತೆ ಆಟ, ಪಾಠಗಳಲ್ಲಿ ಚುರುಕಾಗಿದ್ದು, ಕ್ಯಾನ್ಸರ್ ಎಂಬ ಮಾರಿ ಈತನ ಭವಿಷ್ಯಕ್ಕೆ ಮುಳ್ಳಾಗಿದೆ. ಲಾಕ್ ಡೌನ್ ಮುಗಿದು ಶಾಲೆಗೆ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದಂತೆ ಕಾಲಿನ ನೋವು ಕಾಡತೊಡಗಿದಾಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಲಿನಲ್ಲಿ ಎಲುಬಿನ ಕ್ಯಾನ್ಸರ್ ಪತ್ತೆಯಾಗಿದೆ. ವಿಷಯ ತಿಳಿದ ಪೋಷಕರು ಕಂಗಲಾಗಿದ್ದಾರೆ.
ಈಗಾಗಲೇ ಪ್ರಾಥಮಿಕ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಇನ್ನು ಮುಂದಿನ ಚಿಕಿತ್ಸೆಗಳು, ಶಸ್ತ್ರ ಚಿಕಿತ್ಸೆ ಹಾಗೂ ನಂತರ ಚಿಕಿತ್ಸೆಗಳಿಗಾಗಿ ಅಂದಾಜು 13 ಲಕ್ಷ ರೂ. ವೆಚ್ಚವಾಗಬಹುದು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಕೇವಲ 5 ಸೆನ್ಸ್ ಜಾಗದಲ್ಲಿ ಮನೆ ಮಾಡಿಕೊಂಡು, ಮಂಗಳೂರಿನ ಹೊಟೇಲ್ ಕಾರ್ಮಿಕನಾಗಿರುವ ಸುರೇಶ್ ಚೌಟ ದಂಪತಿಗೆ ಇಬ್ಬರು ಮಕ್ಕಳು. ಹಿರಿಯಾಕೆ ಕಾಲೇಜು ವ್ಯಾಸಾಂಗ ಮಾಡುತ್ತಿದ್ದು, ಅವರಿಗೆ ಜೀವನ ನಿರ್ವಹಣೆಯೇ ಒಂದು ಸವಾಲು ಆಗಿದೆ. ಇದರ ನಡುವೆ ಮಗನ ಆರೋಗ್ಯ ಕಂಗೆಡುವಂತೆ ಮಾಡಿದೆ. ತಾಯಿ ಬೀಡಿ ಕಟ್ಟಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಸುಪ್ರೀತ್ ನ ಪ್ರಾಥಮಿಕ ಚಿಕಿತ್ಸೆ ನಡೆಯುತ್ತಿದ್ದು, ಈಗಾಗಲೇ ಒಂದು ಲಕ್ಷದಷ್ಟು ಹಣ ಖರ್ಚಾಗಿದೆ. ಲಾಕ್ ಡೌನ್ ನಂತರ ಸರಿಯಾಗಿ ಕೆಲಸವಿಲ್ಲದೆ ಒತ್ತಡದಲ್ಲಿದ್ದ ಸುರೇಶ್ ಚೌಟ ಅವರು ಮಗನ ಚಿಕಿತ್ಸೆಗೆ ಮೊತ್ತ ಹೊಂದಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.
ಸುಪ್ರೀತ್ ನ ಭವಿಷ್ಯದ ದೃಷ್ಟಿಯಿಂದ ಇನ್ನು 20 ದಿನದೊಳಗೆ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ.
ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕಾದ ಬಾಲಕ ದಯನೀಯ ಸ್ಥಿತಿಯಲ್ಲಿ ಮಲಗಿದ್ದಾನೆ. ಮಗನಿಗೆ ಚಿಕಿತ್ಸೆ ಹೇಗೆ ಕೊಡಿಸುವುದು ಎಂಬ ಚಿಂತೆಯಲ್ಲಿ ಇದ್ದಾರೆ ಪೋಷಕರು.
ಸುಪ್ರಿತ್ ಮತ್ತೆ ಶಾಲೆಗೆ ಹೋಗಿ ಮೊದಲಿನಂತಾಗಬೇಕಾದರೆ ಸಮಾಜದ ಸಹೃದಯಿ ದಾನಿಗಳ ಸಹಕಾರ ಬೇಕಾಗಿದೆ. ದಾನಿಗಳು ತಮ್ಮ ಕೈಲಾದ ಸಹಕಾರವನ್ನು ನೀಡಿದರೆ ಮಗನಿಗೆ ಚಿಕಿತ್ಸೆ ನೀಡಬಹುದೇನೋ ಎಂಬ ಭರವಸೆಯಲ್ಲಿ ಪೋಷಕರಿದ್ದಾರೆ.
ಸಹೃದಯಿ ದಾನಿಗಳು ಕೆನರಾ ಬ್ಯಾಂಕ್ ಕಳಿಯ ಶಾಖೆಯ ಸುಪ್ರಿತ್ ಅವರ ಖಾತೆ ಹಣವನ್ನು ಹಾಕಿ ಸಹಕರಿಸಬಹುದಾಗಿದೆ.
ಸಹಾಯಹಸ್ತ ನೀಡಲು ಬಯಸುವ ದಾನಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಬಹುದು.
ಸುಪ್ರಿತ್ ಎಸ್. ಚೌಟ ಕೆನರಾ ಬ್ಯಾಂಕ್ ಕಳಿಯ ಶಾಖೆ
ಖಾತೆ ಸಂ.
02142200054492
IFSC code CNRB0010214 ಅಥವಾ phone pay 8088639616 ಈ ಸಂಖ್ಯೆಗೆ ಕಳುಹಿಸಬಹುದು