ಬೆಂಗಳೂರು: ಯುವರತ್ನ ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ “ಕರ್ನಾಟಕ ರತ್ನ ” ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಘೋಷಿಸಿದರು. ಅವರು ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರ ಅಂಗಣದಲ್ಲಿ ನಡೆಯುತ್ತಿರುವ “ಗೀತ ನಮನ” ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ಪ್ರಶಸ್ತಿ ನೀಡುವುದಾಗಿ ಘೋಷಿಸಿದ್ದಾರೆ. ಅಪ್ಪುಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿರುವ ಸಿಎಂ, ಸ್ಮಾರಕ ನಿರ್ಮಾಣ ಮಾಡುವುದಾಗಿಯೂ ಇದೇ ವೇಳೆ ಘೋಷಿಸಿದರು.ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ ಪುನೀತ್ ರಾಜ್ಕುಮಾರ್ ನಮ್ಮೆಲ್ಲರಿಗೂ ಅತೀ ಆತ್ಮೀಯ. ಅವನನ್ನು ನಾನು ಬಾಲ್ಯದಿಂದಲೂ ಬಲ್ಲೆ. ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವ ಕರ್ನಾಟಕದ ಏಕೈಕ ಬಾಲ ನಟ ಪುನೀತ್ ಆಗಿದ್ದರು. ಅಷ್ಟೊಂದು ಸಣ್ಣ ವಯಸ್ಸಿನಲ್ಲಿ ನಟನೆ ಮಾಡುವುದು ಸುಲಭದ ಮಾತಲ್ಲ ಎಂದರು.ಕಂಠೀರವ ಸ್ಟೇಡಿಯಂನಲ್ಲಿ ಡಾ. ರಾಜ್ಕುಮಾರ್ ಅವರಿಗೆ ನಿರ್ಮಾಣ ಮಾಡಿರುವ ಸ್ಮಾರಕದಂತೆ ಪುನೀತ್ ರಾಜ್ಕುಮಾರ್ ಅವರಿಗೂ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ತಿಳಿಸಿದರು. ಉಳಿದಂತೆ ಕೇಂದ್ರ ಸರ್ಕಾರದಿಂದ ನೀಡಲಾಗುವ ಪದ್ಮಶ್ರೀ ಪ್ರಶಸ್ತಿಗೂ ದಿವಂಗತ ಪುನೀತ್ ರಾಜ್ಕುಮಾರ್ ಅವರ ಹೆಸರು ಶಿಫಾರಸು ಮಾಡಲಾಗುವುದು ಎಂದು ಸಿಎಂ ತಿಳಿಸಿದರು.
ಇದೇ ವೇಳೆ ಮಾತನಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದ್ದು, ಅದಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.