ರಕ್ತಗತ ಗುಣದಿಂದ ಸಮಾಜದಲ್ಲಿ ಗೌರವ: ಸಮಾಜದಲ್ಲಿರುವ ಅಂತರ ದೂರವಾದಾಗ ಸರ್ವರ ಅಭಿವೃದ್ಧಿ: ಮುಂದಿನ ಸವಾಲುಗಳನ್ನು ಎದುರಿಸಲು ಸಿದ್ಧರಾಗುವುದು ಅವಶ್ಯಕ: ಡಾ. ಮೋಹನ್ ಆಳ್ವ ಅಭಿಮತ: ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ನೂತನ ಆಡಳಿತ ಕಚೇರಿ ಉದ್ಘಾಟನೆ

 

 

 

ಬೆಳ್ತಂಗಡಿ: ಶ್ರೇಷ್ಠವಾದ ಹಿಂದೂ ಧರ್ಮ, ಬಂಟ ಸಮುದಾಯದಲ್ಲಿ ಜನಿಸಿರುವುದು ದೇವರು ಕೊಟ್ಟ ವರವಾಗಿದೆ. ನಮ್ಮ ಹಿರಿಯರಿಂದಲೇ ರಕ್ತಗತವಾಗಿ ಹಲವು ಗುಣಗಳು ಬಂದಿವೆ. ಮುಖ್ಯವಾಗಿ ಎಲ್ಲರೊಂದಿಗೆ ಹೊಂದಿಕೊಂಡು ಬದುಕುವುದು, ನಾಯಕತ್ವ ಗುಣ, ಹೋರಾಟದ ಮನೋಭಾವ, ಧರ್ಮನಿಷ್ಠೆ, ಪ್ರಾಮಾಣಿಕತೆ ಮೊದಲಾದವು ಬಂದಿದೆ. ಇವುಗಳೊಂದಿಗೆ ನಾವು ಸಮಾಜದಲ್ಲಿ ಉನ್ನತಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ. ನಾವು ಬೆಳೆಯುವ ಜೊತೆಗೆ ಸಮಾಜದ ಇತರ ಸಮುದಾಯದವರನ್ನೂ ಜೊತೆಗೆ ಮುನ್ನಡೆಸುವ ಮೂಲಕ ಸಮಾಜದ ವಿಶ್ವಾಸ ಗಳಿಸಿರುವುದು ಹೆಮ್ಮೆಯ ವಿಚಾರ. ಸಮುದಾಯದ ಜನತೆ ಗೌರವಯುತವಾದ ಜೀವನ ಸಾಗಿಸುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ ಆಳ್ವ ತಿಳಿಸಿದರು.

 

ಅವರು ‌ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ನೂತನ ಆಡಳಿತ ಕಚೇರಿ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಐಶ್ವರ್ಯವಂತರೂ ಇದ್ದಾರೆ, ಒಂದು ಹೊತ್ತಿನ ಊಟಕ್ಕಾಗಿ ಕಷ್ಟ ಪಡುವವರೂ ಇದ್ದಾರೆ. ಉನ್ನತ ಶಿಕ್ಷಣ ಪಡೆದ ವಿದ್ಯಾವಂತರಿದ್ದಾರೆ. ಶಿಕ್ಷಣವೇ ಪಡೆದಯದ ಅನಕ್ಷರಸ್ಥರೂ ಇದ್ದಾರೆ. ನಮ್ಮ ಸಮಾಜದಲ್ಲಿ ಇದು ದೊಡ್ಡ ಕಂದಕದಂತೆ ಗೋಚರಿಸುತ್ತಿದೆ. ಪರಸ್ಪರ ಸಹಕಾರ, ಸಹಾಯ ಮನೋಭಾವನೆಯಿಂದ ಇದನ್ನು ದೂರಗೊಳಿಸಿ ಸಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವುದೂ ಅಗತ್ಯ. ಅದೇ ರೀತಿ ಜಾತಿ, ಧರ್ಮ, ಮತಗಳ ಹೆಸರಿನಲ್ಲಿ ಅಂತರ ಸೃಷ್ಟಿಯಾಗುತ್ತಿರುವುದು ಬೇಸರದ ಸಂಗತಿ. ಸಮಾಜವೆಂಬುದು ದೊಡ್ಡ ಪರಿಕಲ್ಪನೆ. ಜಾತಿ, ಮತಗಳೆಂಬುದು ಅರ್ಥಪೂರ್ಣ ಶಬ್ದವಾಗಿದ್ದು, ಇವುಗಳ ಕುರಿತು ಆಳವಾದ ತಿಳುವಳಿಕೆ ಪಡೆಯಬೇಕು. ಜಾತಿ ‌ಮಿತಿಗಳ ವಿಶಾಲತೆ ಅರಿತು ಜೀವನ ಸಾಗಿಸಬೇಕಾದ ಅಗತ್ಯತೆ ಇದೆ ಎಂದರು.

 

 

ಸಮಾಜ ನೀಡಿರುವ ಗೌರವಕ್ಕೆ ದಕ್ಕೆ ತರಬಾರದು. ಎಲ್ಲಾ ಜಾತಿಯವರೊಂದಿಗೆ ಪ್ರೀತಿಯಿಂದ ಬೆರೆಯುವುದು ಅಗತ್ಯ. ಬಂಟ ಸಮುದಾಯದ ಮಂದಿ ಇದೇ ರೀತಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಹಾಯ ಹಾಗೂ ಸೇವಾ ಮನೋಭಾವದಿಂದ ಗುರುತಿಸಿಕೊಳ್ಳುತ್ತಿದ್ದಾರೆ. ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ರಾಷ್ಟದಲ್ಲೇ ಖ್ಯಾತಿ ಪಡೆದಿದ್ದಾರೆ. ಅದೇ ರೀತಿ ರಾಜಕೀಯ, ಬ್ಯಾಂಕ್, ವಿದ್ಯಾವಂತಿಕೆ ಮೊದಲಾದ ವಿಚಾರಗಳಲ್ಲಿ ಖ್ಯಾತಿ ಪಡೆದು ದೊಡ್ಡ ಮಟ್ಟದ ಗೌರವ ಪಡೆಯುತ್ತಿರುವುದು ಸಂತಸದ ವಿಚಾರ. ನಾವು ಈಗಾಗಲೇ ಅತ್ಯುತ್ತಮ ಸಂತಸದ ದಿನಗಳನ್ನು ಕಳೆದಿದ್ದೇವೆ. ಪ್ರಸ್ತುತ ಕೊರೋನಾ ಕಾರಣದಿಂದ ಸವಾಲಿನ ದಿನಗಳನ್ನು ಕಳೆಯುತ್ತಿದ್ದೇವೆ. ಹಿಂದೆ ನಮ್ಮ ಆಳ್ವಾಸ್ ನುಡಿಸಿರಿ, ವಿರಾಸತ್ ನಂತಹಾ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಜನತೆಯನ್ನು ಸೇರಿಸುವ ಪ್ರಯತ್ನ ನಡೆಸಿದ್ದೆವು. ಮುಂದೆ ಇಂತಹ ಕಾರ್ಯಗಳನ್ನು ಆಯೋಜಿಸುವುದು ಬಹುದೊಡ್ಡ ಸವಾಲಿ‌ನ ಕೆಲಸ ಎಂಬಂತೆ ಗೋಚರಿಸುತ್ತಿದೆ. ಜನತೆಯೂ ಮುಂದಿನ ದಿನಗಳಲ್ಲಿ ಎದುರಾಗಲಿರುವ ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ಸನ್ನದ್ಧರಾಗಬೇಕಿದೆ ಎಂದರು.

 

 

ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಪಡಂಗಡಿ ಮಾತನಾಡಿ, ಉನ್ನತ ಕೆಲಸ ಮಾಡುವ ಸಂದರ್ಭ ಹಲವು ಸವಾಲುಗಳು ಎದುರಾಗುವುದು ಸಹಜ.‌ ಇದನ್ನು ಮೀರಿ ಮುನ್ನಡೆದಾಗ ಯಶಸ್ಸು ಲಭಿಸುತ್ತದೆ. ಸಂಸ್ಥೆ ಕಟ್ಟಲು ಹಿರಿಯರ ಶ್ರಮವಿದ್ದು, ಇಂದಿನ ಯುವ ನಾಯಕರು ಅದನ್ನು ಸಮರ್ಥವಾಗಿ ಮುನ್ನಡೆಸಬೇಕಾದ ಜವಾಬ್ದಾರಿ ಇದೆ. ಡಾ. ಮೋಹನ ಆಳ್ವ ಅವರು ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆ, ಸಾಮಾಜಿಕ ಕಾರ್ಯಗಳ ಮೂಲಕ ಸಮಾಜದಲ್ಲಿ ರತ್ನದಂತೆ ಹೊಳೆಯುತ್ತಿದ್ದಾರೆ. ಸಮಾಜದ ಗಣ್ಯರು ಅವರನ್ನು ಗುರುತಿಸಿ ಕನಿಷ್ಠ ಪದ್ಮ ಪುರಸ್ಕಾರ ನೀಡಿ ಗೌರವಿಸಬೇಕಿದೆ ಎಂದರು.

 

 

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ನಮ್ಮ ಸಮುದಾಯದ ಯುವ ನಾಯಕ ಸೂಪರ್ ಸ್ಟಾರ್ ಶಾಸಕರಿದ್ದಾರೆ. ಅವರು ತಮ್ಮ ನಿಸ್ವಾರ್ಥ ಸೇವೆ, ಬಡ ಜನತೆ ಹಾಗೂ ಸಮಾಜದ ಅಭಿವೃದ್ಧಿಗಾಗಿ ಅವಿರತ ಹಗಲಿರುಳು ದುಡಿಯುತ್ತಿದ್ದಾರೆ. ಅವರು ತಮ್ಮ ಚುರುಕು ನಡೆ, ಸೇವಾ ಕಾರ್ಯಗಳ ಮೂಲಕ ಜಿಲ್ಲೆ ಮಾತ್ರವಲ್ಲದೆ ರಾಜ್ಯದಲ್ಲಿಯೂ ಮನೆಮಾತಾಗಿದ್ದಾರೆ. ಇದು ಸಮಾಜಕ್ಕೆ ಸಿಕ್ಕಿರುವ ಗೌರವವಾಗಿದೆ.

 

 

ಸಂಘದ ಹೆಸರಿನಲ್ಲಿ ಪ್ರಸ್ತುತ ₹ 1 ಕೋಟಿ ಸಾಲವಿದ್ದು, ಕೊರೋನಾ ಕಾರಣದಿಂದ ಸಮಸ್ಯೆ ಎದುರಾಗಿದೆ. ಸಮುದಾಯದ ಉಳ್ಳವರು ಸಂಘಕ್ಕೆ ಬಡ್ಡಿ ರಹಿತ ಸಾಲ ನೀಡಿದಲ್ಲಿ ಸಂಘದ ಸಾಲವನ್ನು ಕಟ್ಟಲು ಸಹಕಾರಿಯಾಗಲಿದೆ. ಬಳಿಕ ಈ ಸಾಲವನ್ನು ನೀಡಿದವರಿಗೆ ಪಾವತಿ ಮಾಡುವ ಕಾರ್ಯ ನಡೆಸಲಾಗುತ್ತದೆ ಎಂದರು.

 

 

ಇತ್ತೀಚಿಗೆ ಸ್ವಚ್ಛತಾ ಕಾರ್ಯಕ್ಕೆ ಸ್ವಚ್ಛತಾ ಹಿ ಸೇವಾ ಪುರಸ್ಕಾರ ಪಡೆದ ಪಿ.ಡಿ.ಒ. ಪ್ರಕಾಶ್ ಶೆಟ್ಟಿ ನೊಚ್ಚ ಅವರನ್ನು ಗೌರವಿಸಲಾಯಿತು. ಸಮುದಾಯದಿಂದ ಆಯ್ಕೆಯಾದ ಜನಪ್ರತಿನಿಧಿಗಳನ್ನೂ ಗೌರವಿಸಲಾಯಿತು. ‌
ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಕಾರ್ಯದರ್ಶಿ ರಾಜು ಶೆಟ್ಟಿ ಬೇಂಗೆತ್ಯಾರ್, ಮಹಿಳಾ ವಿಭಾಗ ಅಧ್ಯಕ್ಷೆ ಸಾರೀಕ ಡಿ. ಶೆಟ್ಟಿ, ಯುವ ವಿಭಾಗ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ರಘುರಾಮ ಶೆಟ್ಟಿ ಸಾಧನ ಉಜಿರೆ ಕಾರ್ಯಕ್ರಮ ನಿರ್ವಹಿಸಿದರು .
ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಛ ಸ್ವಾಗತಿಸಿ, ಜತೆ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲಾ ವಂದಿಸಿದರು.

 

 

ಕಾರ್ಯಕ್ರಮದ ನಂತರ ಸಂಘದ ಮಹಾಸಭೆಯು ಪುಷ್ಪರಾಜ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ರಾಜು ಶೆಟ್ಟಿ ಬೆಂಗೆತ್ಯಾರ್ ಹಾಗೂ ಜಮಾ ಖರ್ಚಿನ ವಿವರವನ್ನು  ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಛ ಸಭೆಯ ಮುಂದಿಟ್ಟರು. ಸಭೆಯಲ್ಲಿ ಗ್ರಾಮ ಸಮಿತಿಗಳ ಪುನರ್ ರಚನೆಯ ಬಗ್ಗೆ ಚರ್ಚಿಸಲಾಯಿತು  ಈ ಸಂದರ್ಭದಲ್ಲಿ ಜಗನ್ನಾಥ ಶೆಟ್ಟಿ ಅಳದಂಗಡಿ  ಇವರು  ಮರುಪಾವತಿ ವಾಗ್ದನದಂತೆ ರೂ 1 ಲಕ್ಷವನ್ನು ಬಂಟರ ಭವನದ ಸಾಲ ಮರುಪಾವತಿಗಾಗಿ  ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿಯವರಿಗೆ  ಹಸ್ತಾಂತರಿಸಿದರು.ಸಭೆಯಲ್ಲಿ ಬಂಟರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

 

error: Content is protected !!