ಹೊಳೆಯಲ್ಲ‌ ಹೆದ್ದಾರಿ!, ರಸ್ತೆಯಲ್ಲೇ ಹರಿದ ಮಳೆ ನೀರು, ಇದ್ದೂ ಇಲ್ಲದಂತಿರುವ ಚರಂಡಿ!: ಜನಪ್ರತಿನಿಧಿಗಳ ‌ಜಾಣ ಮೌನ: ಮಂಗಳವಾರ ಸಂಜೆಯೂ ತಾಲೂಕಿನಾದ್ಯಂತ ಮಳೆ‌ ಆರ್ಭಟ: ಗದ್ದೆ, ತೋಟಗಳಿಗೆ ನುಗ್ಗಿದ ನೀರು: ಕಚ್ಚಾ ರಸ್ತೆಗಿಂತಲೂ ದುಸ್ಥಿಯಲ್ಲಿರುವ ಗುರುವಾಯನಕೆರೆ- ಬೆಳ್ತಂಗಡಿ ಹೆದ್ದಾರಿ

 

 

 

ಬೆಳ್ತಂಗಡಿ: ಚಂಡಮಾರುತ ಪರಿಣಾಮ ಕರಾವಳಿಯಲ್ಲಿ ಮಳೆ‌ ಸುರಿಯಲಿದೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವಂತೆ ಮಂಗಳವಾರ ‌ಸಂಜೆಯೂ ತಾಲೂಕಿನಾದ್ಯಂತ ಮಳೆಯ ಆರ್ಭಟ ಜೋರಾಗಿತ್ತು. ಸಂಜೆ ನಾಲ್ಕು ಗಂಟೆ ಹಾಗೂ ಆರು ಮೂವತ್ತರ ಸುಮಾರಿಗೆ ಗುಡುಗು, ಮಿಂಚು, ಗಾಳಿ ಸಹಿತ ಜೋರಾಗಿ ಮಳೆ‌ ಸುರಿಯಿತು.

ಹೆದ್ದಾರಿಯಲ್ಲೇ ಹರಿದ ನೀರು:

ಬೆಳ್ತಂಗಡಿ ಬಸ್ ನಿಲ್ದಾಣ, ಗುರುವಾಯನಕೆರೆ, ಮದ್ದಡ್ಕ, ಉಜಿರೆಯ ವಿವಿಧೆಡೆ ಚರಂಡಿ ಇದ್ದರೂ ನೀರು ಸಮರ್ಪಕ ಹರಿಯದೆ ರಸ್ತೆಯಲ್ಲೇ ಹರಿದು ವಾಹನ ಸವಾರರು ಪರದಾಡುವಂತಾಯಿತು. ಹಲವು ವರ್ಷಗಳಿಂದ ಉಜಿರೆ ಜನಾರ್ದನ ‌ಶಾಲೆ ಮುಂಭಾಗ ನೀರು‌ ನಿಂತು ಸಮಸ್ಯೆಯಾಗುತ್ತಿದೆ. ಸೋಮವಾರ ಸಂಜೆಯೂ ಇಲ್ಲಿ ಕೃತಕ ನೆರೆ ಉಂಟಾಗಿದ್ದು, ಮಂಗಳವಾರ ಸಂಜೆಯೂ ವಾಹನ ಸವಾರರು ಪರದಾಡುವಂತಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ‌ನೀರು ನಿಂತಿದ್ದು, ವಾಹನ‌ ಸವಾರರು ಚರಂಡಿ, ರಸ್ತೆಯ ವ್ಯತ್ಯಾಸ ಅರಿಯದೆ ರಸ್ತೆಯಲ್ಲಿ ಸಾಗಲು ಪರದಾಡುವಂತಾಯಿತು.

 

 

 

ಸೋಮವಾರ ಸಂಜೆಯ‌ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗುರುವಾಯನಕೆರೆಯಲ್ಲಿ ರಸ್ತೆಯಲ್ಲಿ ಪ್ರವಾಹ ಎಂಬ ಹೆಸರಿನಡಿ ಉಜಿರೆಯ ಫೋಟೋಗಳು ಹರಿದಾಡಿದವು. ಗುರುವಾಯನಕೆರೆಯಲ್ಲೂ ರಸ್ತೆಯಲ್ಲೇ ನೀರು ಹರಿಯುತ್ತಿದೆ. ‌ಈ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಹೊಳೆ ಯಾವುದು…? ಹೆದ್ದಾರಿ ಯಾವುದು ಎಂದು ತಿಳಿಯುತ್ತಿಲ್ಲ ಎಂದು ಗೊಣಗಿಕೊಂಡು ಸಾಗಿದ್ದು ಕಂಡುಬಂತು.

ಮರಣಕೂಪವಾಗುತ್ತಿವೆ ಹೆದ್ದಾರಿಯ ಹೊಂಡಗಳು:

ಹೆದ್ದಾರಿಗಳು ಹೊಂಡಮಯವಾಗಿದ್ದು, ಮಳೆ ಸಂದರ್ಭದಲ್ಲಿ ಮಳೆ ನೀರಿನಿಂದ ಹೊಂಡ ಅರಿಯದೆ,  ಹೊಂಡ ತಪ್ಪಿಸಲು ಸಾಧ್ಯವಾಗದೆ ಹೊಂಡಗಳಿಗೆ ಬಿದ್ದು ಅಪಘಾತ ಸಂಭವಿಸಿದ ಘಟನೆಗಳು‌ ದಿನನಿತ್ಯ ನಡೆಯುತ್ತಿವೆ. ಮುಖ್ಯವಾಗಿ ಗುರುವಾಯನಕೆರೆ- ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಓಡಾಟ ಹೆಚ್ಚಾಗಿದ್ದು, ಹೊಂಡ ತಪ್ಪಿಸಲು ಸಾಧ್ಯವಾಗದೆ ದ್ವಿಚಕ್ರ ‌ವಾಹನ‌ ಸವಾರರು ಪರದಾಡುವಂತಾಗಿದೆ. ಕೆಲವರು ಬಿದ್ದು ಗಂಭೀರ ಗಾಯಗೊಂಡಿರುವ ಘಟನೆಯೂ ನಡೆದಿದೆ.ಹೊಂಡ ಮುಚ್ಚುವಂತಹ ಕೆಲಸ ಇಲಾಖೆ ಮಾಡಿದ್ದರೂ ಅದು ಕೇವಲ  ಬೆರಳೆಣಿಕೆ ದಿನಗಳಲ್ಲಿ ಎದ್ದು ಹೋಗಿ ಮತ್ತಷ್ಟು   ದೊಡ್ಡ ಹೊಂಡ ನಿರ್ಮಾಣವಾಗಿ ನಿತ್ಯ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ .    ಇಲಾಖೆಗಳ ಈ ನಿರ್ಲಕ್ಷ್ಯ ದಿಂದ ಮರಣ ಕೂಪವಾಗದಿರಲಿ ಈ ಹೊಂಡಗಳು ಎಂಬುವುದು ಸಾರ್ವಜನಿಕರ ಅಶಯವಾಗಿದೆ.

 

 

 

ಜನಪ್ರತಿನಿಧಿಗಳು ಮೌನ:

ರಸ್ತೆ ಸಾರ್ವಜನಿಕರು ‌ನಿಯಮ ಉಲ್ಲಂಘಿಸಿದ ಸಂದರ್ಭ ದಂಡದ ಬರೆ ಎಳೆಯುವ ಅಧಿಕಾರಿಗಳು ಮೌನವಾಗಿದ್ದಾರೆ. ಪ್ರತಿವರ್ಷ ರಸ್ತೆ ಹೊಂಡ ಬೀಳುತ್ತಿದೆ. ಅಲ್ಲೇ ಪ್ಯಾಚ್ ವರ್ಕ್ ಹಾಕಿದರೂ‌ ಮಳೆಗಾಲದಲ್ಲಿ ಹೊಂಡ ಬೀಳುವುದು‌‌ ಸಂಪ್ರದಾಯ ಎಂಬಂತಾಗಿದೆ. ಸರಕಾರಿ ಸಂಬಳ ಪಡೆದು ರಸ್ತೆ ‌ಸಮರ್ಪಕವಾಗಿ‌ ನಿರ್ವಹಿಸದ ಅಧಿಕಾರಿಗಳಿಗೆ ದಂಡ ಹಾಕುವ ನಿಯಮ ಇಲ್ಲವೇ…? ಸಾರ್ವಜನಿಕರು ‌ಸಮಸ್ಯೆ ಸಹಿಸಿಕೊಂಡೂ ಸುಮ್ಮನಿರಬೇಕೇ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ‌ ಬರುತ್ತಿದೆ. ಇನ್ನು ವಿವಿಧ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ದಿನನಿತ್ಯ ಓಡಾಡುತ್ತಿದ್ದರೂ ಜಾಣ ಮೌನ ಅನುಸರಿಸಿದ್ದಾರೆ. ರಸ್ತೆಯಲ್ಲಿ ನೀರು ಹರಿಯಲಿ, ರಸ್ತೆ ಹೊಂಡದಿಂದ ಸಾರ್ವಜನಿಕರು ಗಾಯ ಮಾಡಿಕೊಳ್ಳಲಿ. ನಮಗೂ‌ ಅದಕ್ಕೂ‌ ಸಂಬಂಧವಿಲ್ಲ ಎಂಬಂತೆ ಸುಮ್ಮನಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡುವಂತೆ ಮಾಡಿದೆ.

ಉಕ್ಕಿ ಹರಿದ ನದಿ, ತೊರೆಗಳು:

ಮಂಗಳವಾರವೂ ತಾಲೂಕಿನ ‌ವಿವಿಧೆಡೆ ಹೆಚ್ಚಿನ ಮಳೆಯಾಗಿದ್ದು ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳ ನೀರಿನ ಹರಿವು ಹೆಚ್ಚಾಗಿತ್ತು.
ಸೋಮವಾರ ಸಂಜೆ ಮದ್ದಡ್ಕ ಸಬರಬೈಲು ಒಳರಸ್ತೆಯಲ್ಲಿ ನೀರು ರಸ್ತೆಯಲ್ಲಿ ಹರಿದು
ಮುಂಗಟ್ಟುಗಳಿಗೆ ನುಗ್ಗಿದೆ. ಪ್ರತಿವರ್ಷವೂ ಇಲ್ಲಿ ಸಮಸ್ಯೆ ಎದುರಾಗುತ್ತಿದ್ದು, ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ‌.

ಮರದ ಕಾಲು ಸಂಕ ನೀರು ಪಾಲು

ಮಿತ್ತಬಾಗಿಲು ಗ್ರಾಮದ ಕುಕ್ಕಾವು ಸೇತುವೆ ಸಮೀಪದ  ಏಳೂವರೆ ಹಳ್ಳಗಳಲ್ಲಿ ಭಾರಿ ಪ್ರಮಾಣದ ನೀರಿನ ಹರಿವು ಕಂಡುಬಂದಿತು. ಕೂಡಬೆಟ್ಟು, ಕಕ್ಕೆನೇಜಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸಂಪರ್ಕವಾಗಿರುವ ಇಲ್ಲಿನ ಬಿದಿರಿನ ಕಾಲುಸಂಕ ನೀರಿನ ಪಾಲಾಗಿದೆ. ಇದರಿಂದ ಕುಕ್ಕಾವಿನಿಂದ ಕೂಡಬೆಟ್ಟು ಕಡೆ ಹೋಗುವ ನಾಗರಿಕರು ನೀರು ಇಳಿಯುವ ತನಕ ಕಾಯಬೇಕಾಯಿತು. ಕೂಡಬೆಟ್ಟು ಕಕ್ಕೆನೇಜಿ ಪರಿಸರಗಳಲ್ಲಿ ಹಳ್ಳಗಳ ನೀರು ಕೃಷಿ ಭೂಮಿಗಳಿಗೂ ನುಗ್ಗಿತು.

error: Content is protected !!