ವಾರಾಂತ್ಯ ಕರ್ಪ್ಯೂ ಸಂದರ್ಭ ಮಧ್ಯಾಹ್ನ 2 ಗಂಟೆವರೆಗೆ ವ್ಯಾಪಾರ ನಡೆಸಲು ಅವಕಾಶ ನೀಡಿ:‌ ಸುದ್ದಿಗೋಷ್ಠಿಯಲ್ಲಿ ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ಆಗ್ರಹ

 

ಬೆಳ್ತಂಗಡಿ : ‘ಲಾಕ್‍ಡೌನ್ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಯಾಗಿ ಅಂಗಡಿ ಮಾಲಕರು ಸಾಕಷ್ಟು ಆರ್ಥಿಕ ನಷ್ಟವನ್ನು ಅನುಭವಿಸಿದ್ದು, ನೂರಾರು ನೌಕರರು ಕೆಲಸವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಹಾಗಾಗಿ ಆ.29 ರಿಂದ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಎಲ್ಲಾ ವ್ಯಾಪಾರಿಗಳಿಗೆ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಬೇಕು’ ಎಂದು ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ಅರವಿಂದ ಕಾರಂತ್ ಆಗ್ರಹಿಸಿದರು.
ಅವರು ಗುರುವಾರ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಉಜಿರೆ, ಮಡಂತ್ಯಾರು ಹಾಗೂ ಬೆಳ್ತಂಗಡಿ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ಲಾಕ್‍ಡೌನ್ ಅವಧಿಯಲ್ಲಿ ಸುಮಾರು 64 ರಿಂದ 65 ದಿನಗಳ ಕಾಲ ವರ್ತಕರು ಕಟ್ಟುನಿಟ್ಟಾಗಿ ಸರ್ಕಾರದ ಆದೇಶವನ್ನು ಪಾಲಿಸಿದ್ದೇವೆ. ವಾರಾಂತ್ಯದ ಕರ್ಫ್ಯೂ ಹಾಗೂ ಲಾಕ್‍ಡೌನ್ ಆದೇಶಗಳಿಗೆ ಸ್ಪಂದಿಸಿರುತ್ತೇವೆ. ಇದರಿಂದ ವರ್ತಕರು ಆರ್ಥಿಕ ಸಂಕಷ್ಟವನ್ನು ಅನುಭವಿಸಿದ್ದು, ನೂರಾರು ನೌಕರರು ಕೆಲಸವನ್ನು ಕಳೆದುಕೊಂಡಿದ್ದಾರೆ. ಮಧ್ಯಮ ವರ್ಗದಲ್ಲಿರುವ ನೌಕರರು ಹಲವಾರು ಮಂದಿ ಕೆಲಸವಿಲ್ಲದೆ ಜೀವನ ನಿರ್ವಹಣೆ ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ವಾರಾಂತ್ಯದ ಕರ್ಫ್ಯೂ ಸಂದರ್ಭ ವೈನ್‍ಶಾಪ್‍ಗಳಿಗೆ, ಸರ್ಕಾರಿ ಬಸ್, ರೈಲು, ವಿಮಾನ, ಅಗತ್ಯ ವಸ್ತುಗಳ ಅಂಗಡಿಗಳಿಗೆ ಪರವಾನಿಗೆ ಇದ್ದು, ಕೆಲವು ಅಂಗಡಿಗಳನ್ನು ಮಾತ್ರ ಮುಚ್ಚಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಈ ಸಂದರ್ಭದಲ್ಲಿ ಜನರ ಓಡಾಟಕ್ಕೂ ಯಾವುದೇ ರೀತಿಯ ನಿರ್ಬಂಧ ಇಲ್ಲ. ರಾಜಕೀಯ ರ್ಯಾಲಿ, ಅಭಿನಂದನಾ ಸಮಾರಂಭ ನಡೆಯುತ್ತದೆ. ಆದರೆ ಸರ್ಕಾರಕ್ಕೆ ಎಲ್ಲಾ ರೀತಿಯ ತೆರಿಗೆಯನ್ನು ನೀಡಿ ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಿರುವ ವರ್ತಕರ ಮೇಲೆ ನಿರ್ಭಂಧ ವಿಧಿಸಿರುವು ಯಾತಕ್ಕಾಗಿ? ಎಂದು ಪ್ರಶ್ನಿಸಿದರು.

ಸರ್ಕಾರದ ಇಬ್ಬಗೆಯ ಧೋರಣೆಯಿಂದಾಗಿ ಆನ್‍ಲೈನ್ ವಹಿವಾಟನ್ನು ಜನ ನೆಚ್ಚಿಕೊಂಡಿದ್ದಾರೆ. ಬಹು ರಾಷ್ಟ್ರೀಯ ಕಂಪೆನಿಗಳು ಜನರನ್ನು ಮೋಸ ಮಾಡಿ ಎಗ್ಗಿಲ್ಲದೆ ವ್ಯಾಪಾರ ನಡೆಸಿ ವರ್ತಕರಿಗೆ ತುಂಬಲಾರದ ನಷ್ಟವನ್ನು ಉಂಟು ಮಾಡುತ್ತಿದ್ದು, ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕು ಎಂದರು.

ವರ್ತಕರಾದ ನಾವು ಹಾಗೂ ಸಿಬ್ಬಂದಿಗಳು, ನೌಕರರು ವ್ಯಾಕ್ಸಿನ್ ಪಡೆದುಕೊಂಡಿದ್ದೇವೆ. ಕೊರೊನಾ ಮಾರ್ಗ ಸೂಚಿಯನ್ನು ಪಾಲಿಸಿಕೊಂಡು ವ್ಯಾಪಾರ ಮಾಡಲು ಬದ್ಧರಾಗಿದ್ದೇವೆ. ನೌಕರರರಿಗೆ ಸಂಬಳ, ವಿದ್ಯುತ್ ಶುಲ್ಕ, ಪಿ.ಎಫ್., ಇ.ಎಸ್.ಐ, ಜಿ.ಎಸ್.ಟಿ. ಎಲ್ಲವನ್ನೂ ವರ್ತಕರ ಮೇಲೆ ಹೇರಿದ್ದು ಲಾಕ್‍ಡೌನ್ ಮುಂದುವರಿದರೆ ಯಾವ ರೀತಿ ಈ ಮೇಲಿನ ಪಾವತಿಗಳನ್ನು ಮಾಡಲು ಸಾಧ್ಯ? ಹಾಗಾಗಿ ಜಿಲ್ಲಾಧಿಕಾರಿಗಳು ಎಲ್ಲಾ ವರ್ಗದ ವರ್ತಕರಿಗೂ ಲಾಕ್‍ಡೌನ್ ಮತ್ತು ವಾರಂತ್ಯ ಕರ್ಫ್ಯೂ ಸಂದರ್ಭದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಮಾಡಿಕೊಡಬೇಕು. ಒಂದು ವೇಳೆ ಆ.29ರ ಬಳಿಕವೂ ಕೆಲವು ವ್ಯಾಪಾರಕ್ಕೆ ನಿರ್ಬಂಧ ಹೇರಿದರೆ ಸಂಘದ ಪದಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಜಿರೆ ಸಂಘದ ಕಾರ್ಯದರ್ಶಿ ಲಕ್ಷ್ಮಣ ಗೌಡ, ಕೋಶಾಧಿಕಾರಿ ಅಬೂಬಕ್ಕರ್, ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ, ಕಿಶೋರ್ ಕುಮಾರ್, ಬೆಳ್ತಂಗಡಿಯ ಸಂಚಾಲಕ ಜಯರಾಮ ಗೌಡ, ರೊನಾಲ್ಡ್ ಲೋಬೋ ಉಪಸ್ಥಿತರಿದ್ದರು.

error: Content is protected !!