ಎಲ್ಲರಿಗೂ ಕಾನೂನು ಅನ್ವಯವಾಗುವುದಿಲ್ಲವೇ ಅಧಿಕಾರಿಗಳೇ…!?: ಪ್ರಭಾವಿಗಳ ಬೃಹತ್ ಸಭೆಗಳಿಗೆ ಅಧಿಕಾರಿಗಳು, ವೈದ್ಯಾಧಿಕಾರಿಗಳ ಜಾಣ ಮೌನ: ಜನಸಾಮಾನ್ಯರ ಕಾರ್ಯಕ್ರಮಗಳಿಗಷ್ಟೇ ದಂಡದ ಬರೆ: ವೀಕೆಂಡ್ ಕರ್ಪ್ಯೂ ಕಟ್ಟುನಿಟ್ಟಿನ ಅನುಷ್ಠಾನದಲ್ಲೂ ನಿರ್ಲಕ್ಷ್ಯ: ಕೋವಿಡ್ ನಿಯಂತ್ರಣ ನಿಯಮ ಯಾರಿಗಾಗಿ…??

 

 

ಬೆಳ್ತಂಗಡಿ: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ, ಅಳದಂಗಡಿ ಬಳಿ ಸಭಾಭವನವೊಂದರಲ್ಲಿ ವಿವಾಹ ಸಮಾರಂಭ ನಡೆದಿದ್ದು, ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದ್ದಾರೆ.
ತಹಶೀಲ್ದಾರ್ ಮಹೇಶ್ ಜೆ, ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು, ಪ್ರೊಬೆಷನರಿ ತಹಶಿಲ್ದಾರ್ ಮಹಮ್ಮದ್ ಅಲಿ ಅಕ್ರಂ ಷಾ, ಅಳದಂಗಡಿ ಗ್ರಾ.ಪಂ. ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮ ಕರಣಿಕ ನಿತೇಶ್ ಜೈನ್ ಅವರನ್ನೊಳಗೊಂಡ ತಂಡ ಸಭಾ ಭವನಕ್ಕೆ ದಾಳಿ ನಡೆಸಿದೆ. ಅಳದಂಗಡಿ ಗ್ರಾಮ ಪಂಚಾಯತ್ 50 ಜನರಿಗೆ ವಿವಾಹದಲ್ಲಿ ಪಾಲ್ಗೊಳ್ಳಲು ಅನುಮತಿ ಪಡೆದು, ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ಮೀರಿ 50 ಕ್ಕಿಂತಲೂ ಅಧಿಕ ಜನರು ನೆರೆದಿರುವುದನ್ನು ಗಮನಿಸಿ ಮಾಲಕರಿಗೆ ರೂ. 7,500 ಹಾಗೂ ಮದುವೆ ಮನೆಯವರಿಗೆ ರೂ.5 ಸಾವಿರ ರೂ. ಸೇರಿದಂತೆ ಒಟ್ಟು 12,500 ರೂ. ದಂಡ ವಿಧಿಸಿ, ಮುನ್ನೆಚ್ಚರಿಕೆ ನೀಡಿದ್ದಾರೆ.

 

ಪ್ರಭಾವಿಗಳಿಗಿಲ್ಲ‌ ದಂಡ…?:

ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಭೇಟಿ‌‌ ನೀಡಿ ದಂಡ ಹಾಕಿರುವುದು ಉತ್ತಮ ವಿಚಾರ. ಆದರೆ ಇದೇ ರೀತಿಯ ಕಠಿಣ ಕ್ರಮಗಳು ತಾಲೂಕಿನಲ್ಲಿ ನಡೆಯುವ ಇತರೆ ಸಭೆ ಸಮಾರಂಭಗಳು, ಪ್ರಭಾವಿಗಳ ಕಾರ್ಯಕ್ರಮಗಳಿಗೆ‌ ಇದು ಅನ್ವಯಿಸುವುದಿಲ್ಲವೇ…? ಕೇವಲ ಬಡವರ ಕಾರ್ಯಕ್ರಮಗಳಿಗೆ ಮಾತ್ರ ದಂಡದ ಬರೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

 

ಸಭೆಗಳಿಗಿಲ್ಲವೇ ನಿಯಮ…?:

ವೀಕೆಂಡ್ ಕರ್ಪ್ಯೂ ನೆಪದಲ್ಲಿ ಕೆಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗುತ್ತದೆ, ಆದರೆ ಜನಸಂಚಾರ ಎಂದಿನಂತೆ ಇರುತ್ತದೆ, ಅಲ್ಲಿ ಅಧಿಕಾರಿಗಳು ಏಕೆ ಜಾಣ ಮೌನ‌ ವಹಿಸುತ್ತಾರೆ…? ಕೆಲ‌ ಸಂದರ್ಭದಲ್ಲಿ ಸಾಮಾಜಿಕ ಅಂತರ ಪಾಲಿಸದೆ, ಮಾಸ್ಕ್ ಸಮರ್ಪಕ ಧರಿಸದೆ ಜನಪ್ರತಿನಿಧಿಗಳು ಪಾಲ್ಗೊಂಡ ಕೆಲವು‌ ತಾಲೂಕು ಮಟ್ಟದ ಕಾರ್ಯಕ್ರಮಗಳು‌ ನಡೆದಿವೆ ಆಗ ಅಧಿಕಾರಿಗಳು ಏಕೆ ದಂಡ ವಿಧಿಸಲು ಮುಂದೆ ಬಂದಿಲ್ಲ… ಇದೀಗ ಬಡವರಿಗಷ್ಟೇ ಕೋವಿಡ್ ನಿಯಮ ಪಾಲನೆ ಹೊರೆ ಅನ್ವಯವಾಗುತ್ತದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ವಾಹನಗಳಲ್ಲಿ‌‌ ಇಲ್ಲ‌ ಕೊರೋನಾ…?:

ಜಿಲ್ಲೆ ಹಾಗೂ‌ ತಾಲೂಕಿನಲ್ಲಿ ‌ಇನ್ನೂ‌‌ ಕೊರೋನಾ ಸೋಂಕು ಸಮರ್ಪಕ ನಿಯಂತ್ರಣಕ್ಕೆ ಬಂದಿಲ್ಲ. ರಾಜ್ಯ ಸಚಿವರು ಮುಖ್ಯಮಂತ್ರಿಗಳು ಸೋಂಕು ನಿಯಂತ್ರಣದ ಬಳಿಕವೇ ಶಾಲಾರಂಭದ ಮಾಹಿತಿ ನೀಡಿದ್ದಾರೆ. ಆದರೆ ಅಧಿಕಾರಿಗಳಿಗೆ ಇದರ ಪರಿವೆಯೇ ಇಲ್ಲದಂತೆ ಕಾಣುತ್ತದೆ. ಬೆಳ್ತಂಗಡಿಯಿಂದ ಸಂಜೆ ವಿವಿಧೆಡೆ ತೆರಳುವ ಸರಕಾರಿ, ಖಾಸಗಿ ಬಸ್ ಹಾಗೂ ಇತರೆ ವಾಹನಗಳಲ್ಲಿ ಜನರು ಜಾಮ್ ಪ್ಯಾಕ್ ಆಗಿ ಸಂಚರಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಿಯಮಗಳು ಎಲ್ಲಾ ಕಡೆ ಅನ್ವಯವಾಗಿ ವೈರಸ್‌ ನಿಯಂತ್ರಣವಾದರೆ ಎಲ್ಲರಿಗೂ ಉತ್ತಮ.‌ ಆದರೆ ನಿಯಮಗಳನ್ನು ಕೆಲವರು ಮಾತ್ರ, ಅದರಲ್ಲೂ ಜನಸಾಮಾನ್ಯರಷ್ಟೇ ಪಾಲನೆ ಮಾಡಬೇಕೆನ್ನುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ‌.

error: Content is protected !!