ಬೆಳ್ತಂಗಡಿ: ಇಂದಿನ ಈ ಬದಲಾವಣೆಯ ಹಿಂದೆ ನಾರಾಯಣ ಗುರುಗಳ 150 ವರ್ಷಗಳ ಹಿಂದಿನ ಶ್ರಮ ಇದೆ. ಹುಚ್ಚರ ಸಂತೆ ಎಂದ ನಾಡನ್ನು ದೇವರ ನಾಡಾಗಿ ಪರಿವರ್ತಿಸಿದವರು ನಾರಾಯಣ ಗುರುಗಳು’ ಎಂದು ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಹೇಳಿದರು.
ಅವರು ಸೋಮವಾರ ಬ್ರಹ್ಮ ಶ್ರೀ ನಾರಾಯಣ ಗುರುಗಳ 167ನೇ ಜನ್ಮ ದಿನಾಚರಣೆ ಪ್ರಯುಕ್ತ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆದ ‘ನಾವಿಕ’ ನಾರಾಯಣ ಗುರುಗಳ ವಿಚಾರ ಕಮ್ಮಟ ಉದ್ದೇಶಿಸಿ ಮಾತನಾಡಿದರು.
ನಾರಾಯಣ ಗುರುಗಳು ಧ್ವನಿ ಇಲ್ಲದವರಿಗೆ ಧ್ವನಿ ನೀಡಿದವರು. ದಲಿತರೂ ಕೂಡ ಪೂಜೆ ಮಾಡುವ ಜಗತ್ತಿನ ಮೊದಲ ದೇವಸ್ಥಾನ ನೀಡಿದವರು. ತನಗೆ ತಾನು ಅವರು ಮಂದಿರ, ಗುಡಿ ಕಟ್ಟಿಕೊಂಡಿಲ್ಲ. ಕೆಳ ವರ್ಗದವರಿಗೆ ಸಾಮಾಜಿಕ ಸ್ಥಾನಮಾನ ಒದಗಿಸಿದ ಕ್ರಾಂತಿಕಾರರಾಗಿದ್ದಾರೆ. ಇಂದು ನಾರಾಯಣ ಗುರುಗಳು ಹೇಳಿದ್ದನ್ನು ಪಾಲಿಸುತ್ತಿರುವ ಧೀಮಂತ ನಾಯಕರಲ್ಲಿ ಜನಾರ್ದನ ಪೂಜಾರಿಯವರು ಮುಂಚೂಣಿಯಲ್ಲಿದ್ದಾರೆ ಎಂದರು.
ಚಿಂತಕ ಅರವಿಂದ ಚೊಕ್ಕಾಡಿ ಮಾತನಾಡಿ, ‘ನಾರಾಯಣ ಗುರುಗಳು ಅಸಮಾನತೆಯನ್ನು ದೂರ ಮಾಡುವ ದೊಡ್ಡ ಪ್ರಯತ್ನ ಮಾಡಿದವರು. ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ತಂದವರು. ಬದುಕಿನಲ್ಲಿ ಮಿತವ್ಯಯದ ಅಗತ್ಯತೆಯನ್ನು ಹೇಳಿಕೊಟ್ಟವರು’ ಎಂದರು.
ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಮಾತನಾಡಿ, ‘ನಾರಾಯಣ ಗುರುಗಳು ಪ್ರಪಂಚ ಗುರುಗಳಾಗಿದ್ದಾರೆ. ಅವರು ಆಂತರಿಕ ಬದಲಾವಣೆಗೆ ವಿದ್ಯೆ ಅಗತ್ಯ ಎಂದವರು. ಸಾಮಾನ್ಯ ಜನರೊಂದಿಗೆ ಇದ್ದು ಧರ್ಮ ಸುಧಾರಣೆ ಮಾಡಿದವರು’ ಎಂದರು.
ವೇದಿಕೆಯಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ ಇದ್ದರು.
ಅನುಜ್ಞಾ ಸಾಲಿಯಾನ್ ಇಳಂತಿಲ ಪ್ರಾರ್ಥನೆ ನೆರವೇರಿಸಿದರು. ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಮನೋಹರ್ ಕುಮಾರ್ ಸ್ವಾಗತಿಸಿದರು. ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.