ಬೆಳ್ತಂಗಡಿ : ಮನುಷ್ಯನ ಪರಿಪೂರ್ಣ ವ್ಯಕ್ತಿತ್ವಕ್ಕೆ ಸಂಸ್ಕೃತ ಭಾಷೆ ಸಹಕಾರಿಯಾಗಿದೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪ್ರಾಚೀನ ಭಾಷೆಯಾದ ಸಂಸ್ಕೃತ ಜ್ಞಾಣವಿದ್ದರೆ ಆಧುನಿಕ ವಿಜ್ಞಾನವನ್ನು ಅರ್ಥೈಸಿಕೊಂಡು ಅದರಲ್ಲಿ ಪರಿಪೂರ್ಣತೆ ಪಡೆಯಲು ಸಾಧ್ಯ. ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ ಮುಂತಾದ ಅಧ್ಯಯನಗಳಿಗೆ ಸಂಸ್ಕೃತ ಅತಿ ಮುಖ್ಯ. ಒಟ್ಟಾರೆ ಜೀವನ ಶ್ರೇಷ್ಠತೆಗೆ ಸಂಸ್ಕೃತ ಜ್ಞಾನ ಅತಿ ಅಗತ್ಯ ಎಂದು ಕೊಪ್ಪದ ಸರಕಾರಿ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ಉಪನ್ಯಾಸಕ ವಿದ್ವಾನ್ ಡಾ. ಮಹೇಶ ಕಾಕತ್ಕರ್ ಅವರು ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗವು ಆಯೋಜಿಸಿದ ವಿಶ್ವ ಸಂಸ್ಕೃತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನರ್ಥಾ ಪದಗಳು ಸಂಸ್ಕೃತ ಭಾಷೆಯ ಹಿರಿಮೆಯಾಗಿದೆ. ಖಗೋಳ, ಜೋತಿಷ ಇತ್ಯಾದಿಗಳ ಅಧ್ಯಯನಕ್ಕೆ ಸಂಸ್ಕೃತವು ಬುನಾದಿಯಾಗಿದೆ. ಸಂಸ್ಕೃತದ ಎಲ್ಲಾ ಗ್ರಂಥಗಳು ನಮ್ಮ ಜೀವನಕ್ಕೆ ಅತಿ ಮುಖ್ಯವೇ ಆಗಿವೆ. ಪಂಚತಂತ್ರ ಗ್ರಂಥದಿಂದ ವ್ಯವಹಾರ ಜ್ಞಾನ, ಕೌಟಿಲ್ಯನ ಅರ್ಥಶಾಸ್ತ್ರದಿಂದ ಆಡಳಿತಾತ್ಮಕ ಜ್ಞಾನವೂ ಲಭಿಸುತ್ತದೆ. ಇಂತಹ ಗ್ರಂಥಗಳಿರುವ ಸಂಸ್ಕೃತ ಭಾಷೆಯೇ ಧನ್ಯ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ದಿನೇಶ್ ಚೌಟ ಅವರು ಸಂಸ್ಕೃತ ಮಹತ್ವದೊಂದಿಗೆ ವಿದೇಶಗಳಲ್ಲಿ ಆಗುತ್ತಿರುವ ಸಂಸ್ಕೃತ ಅಧ್ಯಯನ ಹಾಗೂ ಸಂಶೋಧನೆ ಬಗ್ಗೆ ಮಾತನಾಡಿದರು.
ವಿದ್ಯಾರ್ಥಿನಿ ಇಂಚರಾ ಎಂ.ಡಿ ಸಂಸ್ಕೃತ ಗೀತಾ ಗಾಯನ ನಡೆಸಿಕೊಟ್ಟರು.
ಭಾರವಿ ಸಿ. ಪ್ರಾರ್ಥಿಸಿದರು. ಅಂಕಿತಾ ಸ್ವಾಗತಿಸಿ, ಧನ್ಯಾ ಹೆಬ್ಬಾರ್ ವಂದಿಸಿದರು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಕಾರ್ಯಕ್ರಮ ನಿರೂಪಿಸಿದರು.