ಬೆಳ್ತಂಗಡಿ: ಪುತ್ತೂರು ತಾಲೂಕಿನ ಕಬಕದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಕಾರ್ಯಕ್ರಮ ಮೆರವಣಿಗೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸಾವರ್ಕರ್ ಅವರ ಭಾವಚಿತ್ರ ಇಟ್ಟದ್ದಕ್ಕಾಗಿ ಮತ್ತು ಟಿಪ್ಪು ಸುಲ್ತಾನ್ ಭಾವಚಿತ್ರ ಇಡಬೇಕು ಎಂದು ರಥಯಾತ್ರೆಗೆ ಅಡ್ಡಿಪಡಿಸಿರುವ ಎಸ್.ಡಿ.ಪಿ.ಐ ಕಾರ್ಯಕರ್ತರ ವರ್ತನೆ ಖಂಡಿಸುತ್ತೇನೆ. ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು ಅವರು ಸ್ವಾತಂತ್ರ್ಯ ಹೋರಾಟಗಾರರು ಎನ್ನುವುದಕ್ಕೆ ಇತಿಹಾಸದಲ್ಲಿ ದಾಖಲೆಯನ್ನು ಕೊಡಬೇಕಾದ ಅವಶ್ಯಕತೆ ಇಲ್ಲ. ಎಸ್.ಡಿ.ಪಿ.ಐ.ನವರ ನಿಜ ಬಣ್ಣ ಕಬಕದಲ್ಲಿ ನಡೆದ ಘಟನೆಯಲ್ಲಿ ಬಯಲಾಗಿದೆ. ಆಡಳಿತ ಮಾಡುವುದಕ್ಕಾಗಿ ಚುನಾವಣೆಗೆ ಅವರು ಸ್ಪರ್ಧೆ ಮಾಡಿಲ್ಲ, ಆಶಾಂತಿ ಸೃಷ್ಟಿ ಮಾಡಲು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಅವರ ವರ್ತನೆಯನ್ನು ಸಮಾಜ ಗಮನಿಸುತ್ತಿದೆ ಇಂತಹ ಕೃತ್ಯವನ್ನು ಇಡೀ ಸಮಾಜ ಖಂಡಿಸುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಸೋಮವಾರ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ “ಸ್ವಾತಂತ್ರ್ಯ ವೀರ ಸಾವರ್ಕರ್” ಎಂಬ ಬಿರುದು ಪಡೆದು ಬಲಿದಾನ ಆಗಿರುವ ಅವರು ಒಬ್ಬ ಶ್ರೇಷ್ಟ ವ್ಯಕ್ತಿ. ಅವರ ಭಾವಚಿತ್ರಕ್ಕೆ ಅಡ್ಡಿಪಡಿಸುವ ಅವರನ್ನು ಪ್ರಶ್ನೆ ಮಾಡಿರುವ ಎಸ್.ಡಿ.ಪಿ.ಐ. ದೇಶ ವಿರೋಧಿ ಕೃತ್ಯ ಮಾಡಿದೆ. ವೀರ ಸಾವರ್ಕರ್ ಕಪ್ಪು ನೀರಿನ ಜೈಲು ಶಿಕ್ಷೆಯನ್ನು ಅನುಭವಿಸಿರುವುದು ಯಾವುದೇ ಸ್ವಾರ್ಥಕ್ಕಾಗಿ ಅಲ್ಲ. ತನ್ನ ಅಣ್ಣ ಮನೆಯಲ್ಲಿ ಇರುವಂತಹ ಗಂಡಸರು ಪ್ಲೇಗ್ ನಿಂದ ಸತ್ತ ಸಂದರ್ಭದಲ್ಲೂ ತನ್ನ ಮನೆಯಲ್ಲಿ ಕೇವಲ ಹೆಂಗಸರು ಮಾತ್ರ ಇರುವುದನ್ನು ಯೋಚಿಸದೇ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದವರು ಅನೇಕ ಹೋರಾಟಗಳಿಗೆ ಸ್ಫೂರ್ತಿ ತುಂಬಿದವರು ವೀರ ಸಾವರ್ಕರ್. ಇಂತವರ ಬಗ್ಗೆ ಪ್ರಶ್ನೆ ಮಾಡುವ ಎಸ್.ಡಿ.ಪಿ.ಐ. ರಾಷ್ಟ್ರ ವಿರೋಧಿ ಕೃತ್ಯ ಮಾಡಲು ಬಂದಿದೆ ಎಂದರು.
ಬಹಿರಂಗ ಸವಾಲು:
ಬಹಿರಂಗವಾಗಿ ಎಸ್.ಡಿ.ಪಿ.ಐ ಅವರಿಗೆ ಸವಾಲು ಹಾಕುತಿದ್ದೇನೆ. ತಾಕತ್ತಿದ್ರೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದಲ್ಲಿ ಮುಸಲ್ಮಾನರ ಮೇಲೆ ಅಮಾನುಷ ಕೃತ್ಯಗಳನ್ನು, ಅಲ್ಲಿನ ಮಹಿಳೆಯರನ್ನು ಅತ್ಯಾಚಾರವೆಸಗಿ ಹಿಂಸಿಸುತ್ತಿರುವ ಈ ಬಗ್ಗೆ ಧ್ವನಿಯೆತ್ತುವ ಅದನ್ನು ಬಹಿರಂಗವಾಗಿ ಖಂಡಿಸುವ, ಅದರ ವಿರುದ್ಧ ಹೋರಾಟ ಮಾಡುವ ಧೈರ್ಯ ತಾಕತ್ತು ನಿಮಗಿಲ್ಲ. ಅದನ್ನು ಬಿಟ್ಟು ಈ ದೇಶದ ಗಾಳಿ ನೀರು ಆಹಾರ ಸೇವಿಸುತ್ತಿರುವಂತಹ ಎಸ್.ಡಿ.ಪಿ.ಐ ಅವರು ದೇಶ ವಿರೋಧಿ ಭಾವನೆ ಬಿತ್ತುತ್ತಿರುವ, ದೇಶ ವಿರೋಧಿಗಳಾಗಿ ಸಮಾಜದಲ್ಲಿ ನಡೆದುಕೊಂಡಿರುವುದನ್ನು ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿಯಿಂದ ಖಂಡಿಸುತ್ತೇವೆ ಎಂದರು.
ಘಟನೆ ವಿಚಾರವಾಗಿ 3 ಜನರನ್ನು ಈಗಾಗಲೇ ಬಂಧಿಸಿದ್ದಾರೆ. ಅವರ ವಿರುದ್ಧ ದೇಶ ವಿರೋಧಿ ಮೊಕದ್ದಮೆ ದಾಖಲು ಮಾಡಿ, ಸಮಾಜಘಾತುಕ ಶಕ್ತಿಯಾಗಿ ಈ ದೇಶದಲ್ಲಿ ಟಿಪ್ಪು ಸುಲ್ತಾನ್ ನಿಂದಾಗಿ ಅದೆಷ್ಟೋ ಮಾರಣ ಹೋಮಗಳಾಗಿವೆ. ಕೊಡಗಿನಲ್ಲಿ ಆಗಿರುವ ಕ್ರಿಶ್ಚಿಯನ್ ಸಮುದಾಯದ ಮೇಲೆ ನಡೆದಿರುವ ಮಾರಣಹೋಮಗೈದಂತಹ ವ್ಯಕ್ತಿಯ ಪೋಟೊವನ್ನು ಇಡುವಂತೆ ಒತ್ತಾಯಿಸುವ ನಿಮ್ಮ ಪ್ರತಿಭಟನೆಗೆ ನಾಚಿಕೆಯಾಗಬೇಕು ಎಂದರು.
ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟಣೆ ಸಂದರ್ಭದಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ ಎಸ್.ಡಿ.ಪಿ.ಐ. ಕಾರ್ಯಕರ್ತರನ್ನು ಬಂಧಿಸುವ ಕೆಲಸ ಆಗಿದೆ. ಒಂದಷ್ಟು ಸ್ಯಾಟಲೈಟ್ ಪೋನ್ ಮೂಲಕ ಹೊರ ದೇಶಗಳಿಂದ ಕರೆಗಳು ಸ್ವೀಕಾರ ಆಗಿರುವ ಬಗ್ಗೆ ಈಗಾಗಲೇ ಎ.ಎನ್.ಐ. ಅನೇಕ ತನಿಖೆಗಳನ್ನು ನಡೆಸಿದೆ. ಮಾಜಿ ಸಚಿವ ಇದಿನಬ್ಬ ಅವರ ಮೊಮ್ಮಗ ಹಾಗೂ ಕೊಡಗಿನಲ್ಲಿ ಮತಾಂತರ ನಡೆಸುತ್ತಿರುವುದು ಕಂಡುಬಂದಿದೆ. ಉಗ್ರ ನಂಟಿನ ಕುರಿತು ಬಂಧನವಾಗಿದೆ, ಈ ಬಗ್ಗೆ ಎನ್ಐಎ ತನಿಖೆ ಮಾಡುತ್ತಿದೆ. ದೇಶ ವಿರೋಧಿ ಚಟುವಟಿಕೆ ಮಾಡುತ್ತಿರುವವರನ್ನು ಹತ್ತಿಕ್ಕುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತದೆ ಎಂದರು.
ಎನ್ಐಎ ಘಟಕ ಮಂಗಳೂರಿನಲ್ಲಿ ಮಾಡಬೇಕು ಎಂಬ ಆಗ್ರಹವನ್ನು ಈ ಮೂಲಕ ಮಾಡುತ್ತೇನೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಗಣೇಶ್ ಗೌಡ ನಾವೂರು, ಸಹಕಾರ ಭಾರತಿಯ ರಾಜೇಶ್ ಪೆಂರ್ಬುಡ ಉಪಸ್ಥಿತರಿದ್ದರು.