ಬೆಳ್ತಂಗಡಿ: ಕೊರೋನಾ ಸಂಕಷ್ಟದ ನಡುವೆಯೂ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶದಲ್ಲಿ ಬೆಳ್ತಂಗಡಿ ತಾಲೂಕು ನೂರು ಫಲಿತಾಂಶದೊಂದಿಗೆ ಶೇ. 85.71 ಪಡೆದು ಸಾಧನೆ ಮಾಡುವ ಮೂಲಕ ದ.ಕ. ಜಿಲ್ಲೆಯಲ್ಲಿಯೇ ತಾಲೂಕು ಪ್ರಥಮ ಸ್ಥಾನ ಪಡೆದಿದೆ. ತಾಲೂಕಿನ ಎಲ್ಲ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಸಾಧನೆಗೆ ಕಾರಣೀಕರ್ತರಾದ ಶಿಕ್ಷಣ ಇಲಾಖೆಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ಅವರು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ತಾಲೂಕಿನಲ್ಲಿ 4235 ಮಂದಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಿದ್ದು ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತಾಲೂಕಿನ 70 ಪ್ರೌಢ ಶಾಲೆಗಳ ಪೈಕಿ 60 ಪ್ರೌಢ ಶಾಲೆಗಳು ‘ಎ’ ಗ್ರೇಡ್, 10 ಶಾಲೆಗಳು ‘ಬಿ’ ಗ್ರೇಡ್ ಪಡೆದಿದೆ. ಯಾವುದೇ ಪ್ರೌಢ ಶಾಲೆ ‘ಸಿ’ ಗ್ರೇಡ್ ದಾಖಲಿಸಿಲ್ಲ. ಶಿಕ್ಷಣ ಇಲಾಖೆಯ ಬಿಇಒ ಅವರ ತಂಡದ ಪ್ರಯತ್ನಕ್ಕೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
4235 ಮಂದಿ ವಿದ್ಯಾರ್ಥಿಗಳಲ್ಲಿ 325 ಮಂದಿ ‘ಎ’ ಪ್ಲಸ್ ಗ್ರೇಡ್, 657 ಮಂದಿ ಎ ಗ್ರೇಡ್, 1866 ಮಂದಿ ‘ಬಿ’ ಗ್ರೇಡ್ ಹಾಗೂ 1094 ಮಂದಿ ‘ಸಿ’ ಗ್ರೇಡ್ ನಲ್ಲಿ ಉತ್ತೀರ್ಣರಾಗಿದ್ದಾರೆ. ಬೆಳ್ತಂಗಡಿ ಸೈಂಟ್ ಮೇರಿಸ್ ಆಂ.ಮಾಧ್ಯಮ ಶಾಲೆಯ ಸಂಯುಕ್ತ ಡಿ. ಪ್ರಭು 625 ಪೂರ್ಣಾಂಕ ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದು, ಇದೇ ಶಾಲೆಯ ಜೀವನ್ ಆಶೀತ್ ಹಾಗೂ ಹಿಲ್ಡಾ ಮ್ಯಾಥ್ಯೂ 623 ಅಂಕ ಪಡೆದಿದ್ದಾರೆ. ಉಳಿದಂತೆ ಕಾಯರ್ತಡ್ಕ ಸರಕಾರಿ ಪ್ರೌಢ ಶಾಲೆಯ ಹರ್ಷಿತಾ, ಬೆಳ್ತಂಗಡಿ ಎಸ್‌ಡಿಎಂ ಆಂ.ಮಾಧ್ಯಮ ಶಾಲೆ ಅನಘ, ಕವನ ವಿ.ಎಸ್., ಸೈಂಟ್ ಮೇರಿಸ್ ಶಾಲೆಯ ಜ್ಞಾನಶ್ರೀ, ಧರ್ಮಸ್ಥಳ ಆಂ.ಮಾ.ಶಾಲೆಯ ಅಪೂರ್ವ, ಧರಿತ್ರಿ ಭಿಡೆ, ಬೆಳ್ತಂಗಡಿ ವಾಣಿ ಆಂ.ಮಾ. ಶಾಲೆಯ ಗೌರವ್ ವೈ., ಸಾತ್ವಿಕ್ ಎಲ್.ಕೆ. 621 ಅಂಕ ಪಡೆದು ಸಾಧನೆ ಮಾಡಿದ್ದಾರೆ ಎಂದರು.
ಕೊರೊನಾ ಸಂಕಷ್ಟದ ಸಮಯದಲ್ಲೂ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿದ್ದಾರೆ. ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನೀಡಿದ್ದಾರೆ. ಮನೆಮನೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿ, ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆ ಎದುರಿಸುವಂತೆ ಮಾಡಿದ್ದಾರೆ. ಮೂರು ಮಂದಿ ಕೋವಿಡ್ ಸೋಂಕಿತ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಸಿದ್ದು, ಅವರೂ ಉತ್ತೀರ್ಣರಾಗಿದ್ದಾರೆ. ಶಿಕ್ಷಕರ, ಪೋಷಕರ ಸಹಕಾರ, ಪ್ರೋತ್ಸಾಹದ ಫಲದಿಂದ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ವಿರೂಪಾಕ್ಷಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಶಂಭು ಶಂಕರ್, ಶಿಕ್ಷಣ ಸಂಯೋಜಕ ಸುಭಾಷ್ ಜಾಧವ್ ಉಪಸ್ಥಿತರಿದ್ದರು.