ಬೆಳ್ತಂಗಡಿ ಬಳಿ‌ ದಿಢೀರ್ ಉಕ್ಕಿ ಹರಿದ ಸೋಮಾವತಿ ನದಿ!: ಪುದುವೆಟ್ಟು, ನೆರಿಯ, ತೋಟತ್ತಾಡಿ ಬಳಿ ತೋಟಗಳಿಗೆ ನುಗ್ಗಿದ ನೀರು: ಅಪಾಯದಲ್ಲಿ ಲಾಯಿಲಾ ಬಜಕ್ರೆಸಾಲು ಬಳಿಯ ಕಾಲು‌ಸಂಕ: ಭರ್ತಿ ಎರಡು‌ ವರ್ಷಗಳ ಹಿಂದಿನ ತಾಲೂಕಿನ ಪ್ರವಾಹ ಸದೃಶ ಪರಿಸ್ಥಿತಿ ಜ್ಞಾಪಿಸಿಕೊಂಡ ಸಾರ್ವಜನಿಕರು

ಬೆಳ್ತಂಗಡಿ: ಮಳೆ ಇಲ್ಲದಿದ್ದರೂ ಏಕಾಏಕಿ ಬೆಳ್ತಂಗಡಿ ಸೋಮಾವತಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಸ್ಥಳೀಯವಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ನೆರಿಯ ಪ್ರದೇಶದಲ್ಲೂ ಉತ್ತಮ ಮಳೆಯಾಗಿ ನೆರೆ ರೀತಿಯ ಪರಿಸ್ಥಿತಿ ಉಂಟಾಯಿತು.


ಬೆಳ್ತಂಗಡಿ ನಗರದ ಮೂಲಕ ಹರಿದು ಹೋಗುವ ಸೋಮಾವತಿ ನದಿಗೆ ಸೇರುವ ಎರಡು ಹಳ್ಳಗಳಲ್ಲಿ ಭಾರೀ ಪ್ರಮಾಣದಲ್ಲಿ ಭಾನುವಾರ ಸಂಜೆಯ ವೇಳೆಗೆ ನೀರು ಹರಿದು ಬಂದಿದ್ದು ಮಳೆ ಇಲ್ಲದಿದ್ದರೂ ಇಷ್ಟೊಂದು ನೀರು ಬಂದದ್ದನ್ನು ನೋಡಿ ಜನತೆಗೆ ಆತಂಕವಾಗಿದೆ.

ಲಾಯಿಲ ಗ್ರಾಮದ ಬಜಕ್ರೆಸಾಲು ಎಂಬಲ್ಲಿ ಹೊಸ ಸೇತುವೆಯ ಕಾಮಗಾರಿ ನಡೆಯುತ್ತಿದ್ದು,‌ ಜನತೆಗೆ ನದಿ ದಾಟಲು ಅನುಕೂಲವಾಗುವಂತೆ‌ ಕಾಲು ಸಂಕ‌ ನಿರ್ಮಿಸಲಾಗಿತ್ತು. ತಾತ್ಕಾಲಿಕ ಉದ್ದೇಶದಿಂದ ಸ್ಥಳೀಯರೆಲ್ಲರೂ ಸೇರಿ ಈ ಮರದಿಂದ ಮಾಡಿದ ಸೇತುವೆ ನಿರ್ಮಿಸಲಾಗಿದ್ದು, ಇದೀಗ ಪ್ರವಾಹ ಸದೃಶ ನೀರಿನಿಂದ ಅದು ಕುಸಿಯುವ ಭೀತಿಯಲ್ಲಿದೆ.

ಮಂಜೊಟ್ಟಿ, ನಡ, ಕೇಳ್ತಾಜೆ ಸುತ್ತಮುತ್ತ‌ ಉತ್ತಮ ಮಳೆಯಾದ ಪರಿಣಾಮ ನದಿಯಲ್ಲಿ‌‌ ನೀರಿನ ಪ್ರಮಾಣ ಹೆಚ್ಚಾಗಿದೆ ‌ಎಂಬ ಮಾತು ಕೇಳಿ ಬರುತ್ತಿದೆ. ಅದರೆ ಕಿಲ್ಲೂರು ದಿಡುಪೆ ಭಾಗಗಳಲ್ಲಿ ಮಳೆ ಬಾರದ ಕಾರಣ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇತ್ತು.

ಪುದುವೆಟ್ಟು ತೋಟತ್ತಾಡಿ, ನೆರಿಯ ಮೊದಲಾದ ಭಾಗಗಳಲ್ಲೂ ಭಾನುವಾರ ಸಂಜೆ ಸತತ 4 ಗಂಟೆ ಭಾರೀ ಮಳೆ ಸುರಿದಿದೆ. ಮಳೆ ಪರಿಣಾಮ ಸ್ಥಳೀಯ ತೋಟಗಳಿಗೆ ನೀರು ನುಗ್ಗಿದ್ದ ಕುರಿತು ‌ವರದಿಯಾಗಿದೆ.

ಕಳೆದ ಒಂದು ತಿಂಗಳಿಂದ ಮಳೆ ಸುರಿಯುತ್ತಿದ್ದರೂ, ಇಲ್ಲಿನ ಅಣಿಯೂರು, ನೆರಿಯ ಹೊಳೆ, ಹಾಗೂ ಬೆಂದ್ರಾಳದಲ್ಲಿರುವ ಹಳ್ಳದಲ್ಲಿ ಈ ಪ್ರಮಾಣದಲ್ಲಿ ನೀರು ಹರಿದಿರಲಿಲ್ಲ. ಬೆಳಿಗ್ಗೆಯಿಂದ ಉತ್ತಮ ಬಿಸಿಲಿನ ವಾತಾವರಣವಿದ್ದು ಮಧ್ಯಾಹ್ನದ ಬಳಿಕ ಈ ಪರಿಸರದಲ್ಲಿ ಭಾರೀ ಪ್ರಮಾಣದ ಮಳೆ ಸುರಿದು ನೆರೆ ರೀತಿಯ ಪರಿಸ್ಥಿತಿ ಉಂಟಾಯಿತು.


2019ರ ಆಗಸ್ಟ್ 9 ರಂದು ತಾಲೂಕಿನಲ್ಲಿ ಭಾರೀ ‌ಪ್ರಮಾಣದ ಮಳೆ ಸುರಿದು ನೆರೆ ಉಂಟಾಗಿ, ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ನೆರೆ ಗಮನಿಸಿದ ಸಾರ್ವಜನಿಕರು ಎರಡು ವರುಷಗಳ ಹಿಂದಿನ ನೆರೆಯ ಕಹಿ ಘಟನೆಯನ್ನು ನೆನಪಿಸಿಕೊಂಡು  ಮಾತಾಡಿಕೊಳ್ಳುತ್ತಿದ್ದುದು ಕಂಡುಬಂತು.

error: Content is protected !!