ಟೋಕಿಯೋ: ಜಾವಲಿನ್ ಥ್ರೋನಲ್ಲಿ ಭಾರತದ ನೀರಜ್ ಚೋಪ್ರಾ ಭಾರತಕ್ಕೆ ಅಥ್ಲೀಟ್ಸ್ನಲ್ಲಿ ಪ್ರಪ್ರಥಮ ಚಿನ್ನದ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಸ್ವತಂತ್ರ ಭಾರತಕ್ಕೆ ಸಿಕ್ಕಿರುವ ಪ್ರಪ್ರಥಮ ಅಥ್ಲೀಟ್ಸ್ ಪದಕ ಇದಾಗಿದೆ.
ಸ್ವತಂತ್ರ್ಯ ಪೂರ್ವದಲ್ಲಿ 1900ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬ್ರಿಟಿಷ್ ಭಾರತವನ್ನು ಪ್ರತಿನಿಧಿಸಿದ್ದ ನಾರ್ಮನ್ ಪ್ರಿಚಾರ್ಡ್ 200 ಮೀ. ಹರ್ಡಲ್ಸ್ ಮತ್ತು 200 ಸ್ಪ್ರಿಂಟ್‌ನಲ್ಲಿ ಎರಡು ಬೆಳ್ಳಿ ಪದಕ ಗೆದ್ದಿದ್ದರು ಎನ್ನಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ 120 ವರ್ಷದಲ್ಲಿ ಪ್ರಪ್ರಥಮ ಬಾರಿಗೆ ಚಿನ್ನದ ಪದಕ ಗೆಲ್ಲುವ ಮೂಲಕ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ಈ ಹಿಂದೆ 88.07 ಮೀಟರ್ ದೂರ ಎಸೆಯುವ ಮೂಲಕ ನೀರಜ್ ಚೋಪ್ರಾ ಹೊಸ ದಾಖಲೆ ಬರೆದಿದ್ದರು. 2018ರ ಏಷ್ಯನ್ ಗೇಮ್ಸ್ನಲ್ಲೂ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು.
ಎಸೆತದಲ್ಲೂ ದಾಖಲೆ:
23 ವರ್ಷ ವಯಸ್ಸಿನ ನೀರಜ್ ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಹಾಗೂ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಎಸೆದರು. ಆದರೆ ಮೂರನೇ ಪ್ರಯತ್ನ 76.79 ಮೀ.ಗಿಂತ ಕಡಿಮೆ ಎಸೆದಿದ್ದರು. ತಮ್ಮ ಎರಡನೇ ಪ್ರಯತ್ನದಲ್ಲಿ ಎಲ್ಲರಿಗಿಂತ ಹೆಚ್ಚು ದೂರ ಭರ್ಚಿಯನ್ನು ಎಸೆದು ದಾಖಲೆ ಬರೆಯುವ ಜೊತೆಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಗಣ್ಯರಿಂದ ಹಾರೈಕೆ:
ಇತಿಹಾಸ ನಿರ್ಮಿಸಿರುವ ನೀರಜ್ ಚೋಪ್ರಾ ಅವರನ್ನು ದೇಶದ ಗಣ್ಯಾತಿಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳ ಗಣ್ಯರು ಈಗಾಗಲೇ ಅಭಿನಂದನೆ ಸಲ್ಲಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದು, “ನೀರಜ್ ಚೋಪ್ರಾ ಅಭೂತಪೂರ್ವ ಗೆಲುವು! ನಿಮ್ಮ ಜಾವೆಲಿನ್ ಚಿನ್ನವು ಅಡೆತಡೆಗಳನ್ನು ಮುರಿದು ಇತಿಹಾಸ ಸೃಷ್ಟಿಸಿದೆ. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಮೊದಲ ಪದಕವನ್ನು ನೀವು ಮನೆಗೆ ತರುತ್ತೀರಿ. ನಿಮ್ಮ ಸಾಧನೆ ನಮ್ಮ ಯುವಕರಿಗೆ ಸ್ಫೂರ್ತಿ ನೀಡುತ್ತದೆ. ಭಾರತ ಸಂಭ್ರಮಿಸಿದೆ. ಹೃತ್ಪೂರ್ವಕ ಅಭಿನಂದನೆಗಳು” ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, “ಟೋಕಿಯೊದಲ್ಲಿ ಇತಿಹಾಸವನ್ನು ಸೃಷ್ಟಿಸಲಾಗಿದೆ. ಇಂದು ನೀರಜ್ ಚೋಪ್ರಾ ಸಾಧಿಸಿರುವುದು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಯುವಕ ನೀರಜ್ ಅಸಾಧಾರಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಗಮನಾರ್ಹ ಉತ್ಸಾಹದಿಂದ ಆಡಿದರು. ಅಪ್ರತಿಮ ಮನೋಭಾವ ತೋರಿಸಿದರು. ಚಿನ್ನ ಗೆದ್ದ ಅವರಿಗೆ ಅಭಿನಂದನೆಗಳು” ಎಂದಿದ್ದಾರೆ.