ಸುಮಾರು ‌₹1.5 ಕೋಟಿ ವೆಚ್ಚದಲ್ಲಿ ಸವಣಾಲು ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಗಳ ದೈವಸ್ಥಾನದ ಜೀರ್ಣೋದ್ಧಾರ: ಸೇವಾ ಟ್ರಸ್ಟ್ ಮೂಲಕ ಭೈರವ ಕಲ್ಲು ಬಂಡೆ ಮೇಲಿನ ಐತಿಹಾಸಿಕ ‌ಕ್ಷೇತ್ರಕ್ಕೆ ಹೊಸರೂಪ: ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಚಿನ್ನಯ್ಯ ಮಲೆಕುಡಿಯ ಹೇಳಿಕೆ

ಸವಣಾಲು: ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಬೈರವ ಕಲ್ಲು ಬಳಿ ಎತ್ತರದ ಬಂಡೆಯ ಮೇಲೆ ನೆಲೆ ನಿಂತಿರುವುದ ಶ್ರೀ ಕ್ಷೇತ್ರ ಬೈರವ ಕ್ಷೇತ್ರವಾಗಿದ್ದು, ಸುಮಾರು ಸುಮಾರು 700 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಇಲ್ಲಿನ ಎತ್ತರದ ಬಂಡೆ ಕಲ್ಲಿನ ಮೇಲೆ ಹಿಂದಿನ ಕಾಲದಲ್ಲಿ ಶತ್ರುಗಳ ದಾಳಿ, ರೋಗ ಬಾಧೆಯಿಂದ ತಪ್ಪಿಸಲು ಮಲೆಕುಡಿಯ ಸಮುದಾಯದವರು ಈ ಬಂಡೆಯ ಮೇಲೆ ಬೈರವ ದೈವವನ್ನು ನಂಬಿ ಆರಾಧಿಸಿಕೊಂಡು ಬಂದಿರುವ ಬಗ್ಗೆ ಪುರಾವೆಗಳು ಇವೆ. ಅದಕ್ಕಾಗಿ ಈ ಬಂಡೆಕಲ್ಲು ಬೈರವ ಕಲ್ಲು ಎಂದು ಪ್ರಸಿದ್ಧವಾಗಿದೆ. ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಗಳ ಸೇವಾ ಟ್ರಸ್ಟ್‌ನ ಮೂಲಕ ಬೈರವಕಲ್ಲು ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಬೈರವ ಮೂಜಿಲ್ನಾಯ ಪುರುಷರಾಯ ದೈವಗಳ ಸೇವಾ ಟ್ರಸ್ಟ್ ಅಧ್ಯಕ್ಷ ಚಿನ್ನಯ್ಯ ಮಲೆಕುಡಿಯ ಹೇಳಿದರು.

ಅವರು ಸವಣಾಲು ಬೈರವ ಕಲ್ಲು ಬೈರವ ಕ್ಷೇತ್ರದ ಜೀರ್ಣೋದ್ಧಾರ ಕುರಿತು ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸವಣಾಲು ಗ್ರಾಮದ ಗ್ರಾಮಸ್ಥರು ಜಾತಿ ಬೇಧವಿಲ್ಲದೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಬೆಳೆ ರಕ್ಷಣೆಗೆ ಮತ್ತು ರೋಗಬಾಧೆ ತಡೆಯಲು ಹರಕೆ‌ ಹೊತ್ತುಕೊಳ್ಳುವ ವಾಡಿಕೆಯಿದೆ. ಈ ಬೈರವ ಕ್ಷೇತ್ರ ಮಲೆಕುಡಿಯ ಸಮುದಾಯದ ನೇತೃತ್ವದಲ್ಲಿ ವೈಭವಯುತವಾಗಿ ದೈವದ ಕಾರ್ಯ ನಡೆಯುತ್ತಾ ಬಂದಿದೆ. ಈ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಪರ್ವ ಸೇವೆ‌ ಮಾತ್ರ ನಡೆಸಲಾಗುತ್ತಿತ್ತು. ಐದು ವರ್ಷಗಳಿಂದ ಈ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಬೇಕು ಎಂಬ ಸಂಕಲ್ಪದಿಂದ ಈ ದೈವಸ್ಥಾನಕ್ಕೆ ಸಂಬಂಧಿಸಿದ ಮಲೆಕುಡಿಯ ಸಮುದಾಯಕ್ಕೆ ಸೇರಿದ 28 ಮನೆಯವರು ಮುಂದಡಿ ಇಟ್ಟಿದ್ದಾರೆ. ಈ 28 ಮನೆಗಳ ಸದಸ್ಯರನ್ನೊಳಗೊಂಡ ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಗಳ ಸೇವಾ ಟ್ರಸ್ಟ್ ರಚಿಸಲಾಗಿದೆ.

ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಮಾಡಲು ಅಂದಾಜಿಸಲಾಗಿದೆ ಎಂದರು.

ಬೈರವ ಮೂಜಿಲ್ನಾಯ ಪುರುಷರಾಯ ದೈವಗಳ ಸೇವಾ ಟ್ರಸ್ಟ್ ಕಾರ್ಯದರ್ಶಿ‌ ಜಯಾನಂದ ಪಿ. ಪಿಲಕಲ ಮಾತನಾಡಿ, ಈ ಜೀರ್ಣೋದ್ಧಾರ ಕಾರ್ಯಕ್ಕೆ ಜನಪ್ರತಿನಿಧಿಗಳು, ಊರಿನ ಸಮಾಜ ಬಾಂಧವರು, ಸಂಘ ಸಂಸ್ಥೆಗಳು, ಇಲಾಖಾ ವತಿಯಿಂದ ಸಹಕಾರ ಅತ್ಯಗತ್ಯವಾಗಿದೆ‌ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಸಾಂತಪ್ಪ ಮಲೆಕುಡಿಯ, ಗೌರವಾಧ್ಯಕ್ಷ ಮಹಾಬಲ ಮಲೆಕುಡಿಯ, ಕೋಶಾಧಿಕಾರಿ ಸುಂದರ ಮಲೆಕುಡಿಯ, ಗುತ್ತು ಮನೆಯ ಮಾಲಕ ರಾಮಣ್ಣ ಮಲೆಕುಡಿಯ, ಜೊತೆ ಕಾರ್ಯದರ್ಶಿ ಕುಸುಮಾಧರ ಮೊದಲಾದವರು ಹಾಜರಿದ್ದರು.

error: Content is protected !!