ವಾಹನಗಳ ಮೂಲಕ ಸಿರಿ ಬಟ್ಟೆಗಳು ಗ್ರಾಹಕರ ಬಳಿಗೆ: ಡಾ. ವೀರೇಂದ್ರ ಹೆಗ್ಗಡೆ ಅಭಿಮತ: ಬ್ಯಾಂಕ್‌ ಆಫ್ ಬರೋಡಾದಿಂದ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ವಾಹನ ಹಸ್ತಾಂತರ

ಧರ್ಮಸ್ಥಳ: ರಾಜ್ಯದಲ್ಲಿ ಸುಮಾರು ನಾಲ್ಕು ಸಾವಿರ ಮಹಿಳೆಯರು ‌ಸಿರಿ ಗ್ರಾಮೋದ್ಯೋಗದ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿ ‌1,500ಕ್ಕೂ ಹೆಚ್ಚು ಮಹಿಳೆಯರು ವಿವಿಧ ವಸ್ತುಗಳ ಉತ್ಪಾದನೆಯಲ್ಲಿ ‌ತೊಡಗಿಕೊಂಡಿದ್ದಾರೆ.‌ ವಿಶೇಷವಾಗಿ ಸಿರಿ ಗುಣಮಟ್ಟದ ಬಟ್ಟೆಗಳನ್ನು ಉತ್ಪಾದಿಸುತ್ತಿದ್ದು, ಜನಮೆಚ್ಚುಗೆಗೂ ಪಾತ್ರವಾಗಿದೆ. ಇವುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ವಾಹನಗಳ ಮೂಲಕ ನೇರವಾಗಿ ಗ್ರಾಹಕರನ್ನು ತಲುಪುವ ಉದ್ದೇಶ ಹೊಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು. ‌‌

ಅವರು ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ಬ್ಯಾಂಕ್‌ ಆಫ್ ಬರೋಡಾ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನ ಬಳಿ ಹಮ್ಮಿಕೊಂಡಿದ್ದ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಿರಿ ಮಹಿಳೆಯರಿಂದ ಮಹಿಳೆಯರಿಗಾಗಿ‌ ನಡೆಸಲ್ಪಡುತ್ತಿರುವ ಸಂಸ್ಥೆಯಾಗಿದೆ. ಮಹಿಳೆಯರಿಗೆ ‌ಉದ್ಯೋಗ ನೀಡುವ ದೃಷ್ಟಿಯಿಂದ ಕೊರೋನಾ ‌ಸಂಕಷ್ಟ ಕಾಲದಲ್ಲೂ ಉತ್ಪಾದನೆ ನಡೆದಿದ್ದು, ಉತ್ಪಾದನೆಯಾದ ವಸ್ತುಗಳನ್ನು ಪರಿಣಾಮಕಾರಿಯಾಗಿ ಗ್ರಾಹಕರಿಗೆ ತಲುಪಿಸುವ ಕಾರ್ಯ ನಡೆಯಲಿದೆ. ಮಾರುಕಟ್ಟೆಯಲ್ಲಿ ಸಿರಿ ವಸ್ತುಗಳಿಗೆ ವಿಶೇಷ ಬೇಡಿಕೆಯಿದ್ದು, ಗ್ರಾಹಕರನ್ನು ತಲುಪುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಹೇಮಾವತಿ ವೀ. ಹೆಗ್ಗಡೆ, ಬ್ಯಾಂಕ್ ಆಫ್ ಬರೋಡಾ ಮಂಗಳೂರು ಶಾಖೆಯ ಜನರಲ್ ಮ್ಯಾನೇಜರ್ ಗಾಯತ್ರಿ, ಡಿಜಿಎಂ ಗೋಪಾಲಕೃಷ್ಣ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಜನಾರ್ದನ, ಬ್ಯಾಂಕ್ ಆಫ್ ಬರೋಡಾ ಧರ್ಮಸ್ಥಳ ಶಾಖಾ ಪ್ರಬಂಧಕ ವಿಜಯ ಪಾಟೀಲ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ. ವೀರು ಶೆಟ್ಟಿ, ಸಿರಿ ಮಾರುಕಟ್ಟೆ ಪ್ರಬಂಧಕ ಜೀವನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!