ಪರಿಸರದೊಂದಿಗೆ ‘ಪತ್ರಿಕಾ ದಿನಾಚರಣೆ’ ಮಾದರಿ ಕಾರ್ಯ: ವಿಧಾನ ಪರಿಷತ್ ಸದಸ್ಯ‌ ಪ್ರತಾಪ್ ಸಿಂಹ ನಾಯಕ್ ಅಭಿಮತ:  ಮೀಡಿಯಾ ಕ್ಲಬ್ ನಿಂದ‌ ಕಳೆಂಜ ನಂದಗೋಕುಲ ಗೋಶಾಲೆಯಲ್ಲಿ ಶ್ರಮದಾನ

 

 

 

 

ಬೆಳ್ತಂಗಡಿ: ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ನವ ಮಾಧ್ಯಮಗಳು ಪರಿಣಾಮಕಾರಿಯಾಗಿ ಸುದ್ದಿ ಪ್ರಸಾರ ಮಾಡುತ್ತಿವೆ. ಈ ಮೂಲಕ ಜಗತ್ತಿನ ಮೂಲೆ ಮೂಲೆಯನ್ನು ಸುದ್ದಿ ತಲುಪಲು ಸಾಧ್ಯ. ಸಮಾಜಮುಖಿ‌ ಕಾರ್ಯವಾದ ಗಿಡನಾಟಿ ಕಾರ್ಯ ಹಮ್ಮಿಕೊಂಡು ಪತ್ರಿಕಾ ದಿನಾಚರಣೆ ನಡೆಸಿರುವುದು ಮೀಡಿಯಾ ಕ್ಲಬ್ ನ ಪರಿಸರ ಪರವಾದ ನಡೆಯನ್ನು ಬಿಂಬಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ಅವರು ಕಳೆಂಜ ನಂದಗೋಕುಲ ಗೋ ಶಾಲೆಯಲ್ಲಿ ಬೆಳ್ತಂಗಡಿ ಕ್ಲಬ್ ಹಮ್ಮಿಕೊಂಡಿದ್ದ ಶ್ರಮದಾನದೊಂದಿಗೆ ‘ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

 

 

 

 

ನವ ಮಾಧ್ಯಮಗಳಲ್ಲಿ ಇರುವ ವಿಚಾರಗಳು ಅದೇ ರೀತಿ ನೇರವಾಗಿ ವೀಕ್ಷಕರನ್ನು ತಲುಪಲು ಸಾಧ್ಯ. ದೃಶ್ಯ ಮಾಧ್ಯಮಗಳಲ್ಲಿ ಕೆಲವು ‌ಪ್ರಕಟವಾಗುವ ಸಣ್ಣ ಸ್ಥಳಗಳ ವಿಸ್ತೃತ ವರದಿಗಳಿಂದ ಧನಾತ್ಮಕ ಬದಲಾವಣೆಗಳು ಉಂಟಾದ ಹಲವು ಸಂದರ್ಭಗಳನ್ನು ನಾವು ಕಾಣಬಹುದು. ಕೆಲವೇ ಕ್ಷಣಗಳಲ್ಲಿ ನವ ಮಾಧ್ಯಮಗಳ ಮೂಲಕ ಪ್ರಪಂಚದ ಮೂಲೆ‌ಮೂಲೆಯನ್ನು ಸುದ್ದಿಗಳು ತಲುವಂತಹಾ ಕ್ರಾಂತಿ ಉಂಟಾಗಿದೆ‌. ಕೊರೋನಾದಂತಹಾ ಸಂಕಷ್ಟ ಕಾಲದಲ್ಲೂ ಹೋರಾಡಿದರೂ, ಮೀಡಿಯಾ ಕ್ಲಬ್ ಸದಸ್ಯರು ಉತ್ತಮ ರೀತಿಯಲ್ಲಿ ಸಮಾಜಕ್ಕೆ ‌ಸಂದೇಶ ಸಾರುವಲ್ಲಿ ಸಫಲರಾಗಿದ್ದಾರೆ ಎಂದರು.

ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ಮಾತನಾಡಿ, ಮಾಧ್ಯಮಗಳು ಸಮಾಜದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುತ್ತಿರುವ ಪರಿಣಾಮ, ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಿದೆ. ರೋಟರಿ ಸೇರಿದಂತೆ ತಾಲೂಕಿನ ಸಂಘ ಸಂಸ್ಥೆಗಳ ವಿಚಾರಗಳು ಹೊರಜಗತ್ತನ್ನು ತಲುಪುವಂತಾಗಿದೆ ಎಂದರು.

ಮೀಡಿಯಾ ಕ್ಲಬ್ ಸಲಹೆಗಾರರಾದ ಸುಬ್ರಹ್ಮಣ್ಯ ಅಗರ್ತ ಮಾತನಾಡಿ, ಸಮಾಜ ಸದೃಢವಾಗಬೇಕಾದರೆ ಸಮಾಜದ ನಾಲ್ಕನೇ ಅಂಗದಂತಿರುವ ಮಾಧ್ಯಮಗಳು ಸುದ್ದಿಯನ್ನು ‌ಪರಿಣಾಮಕಾರಿಯಾಗಿ‌ ತಲುಪಿಸುವ ಪ್ರಯತ್ನ ಮಾಡಬೇಕು. ‌ಪರಿಸರ ಉಳಿಸುವ ಯತ್ನದಲ್ಲಿ ಗಿಡನಾಟಿ ಮೂಲಕ ಪತ್ರಕರ್ತರು ಕೈಜೋಡಿಸಿರುವುದು ಮಾದರಿಯಾಗಿದೆ. ಈ ಮೂಲಕ ಮುಂದೆ ತಲೆದೋರಲಿರುವ ಜಾಗತಿಕ ತಾಪಮಾನ‌ ಏರಿಕೆಯಂತಹಾ ಅಪಾಯ ತಪ್ಪಿಸಲು ಸಹಕಾರಿಯಾಗಲಿದೆ ಎಂದರು.

ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮದ ಟ್ರಸ್ಟ್ ನ‌ ಅಧ್ಯಕ್ಷ ಡಾ. ಎಂ.ಎಂ. ದಯಾಕರ್ ಮಾತನಾಡಿ, ಗೋ ಪಾಲನೆ ಮಾಡುವ ಉದ್ದೇಶದಿಂದ ನಂದಗೋಕುಲ ಗೋಶಾಲೆ ಆರಂಭಿಸಲಾಗಿದ್ದು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದೆ ಗೋವುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವೂ ನಡೆಯಲಿದೆ. ತಾಲೂಕು ಕೇಂದ್ರದಿಂದ ಕಳೆಂಜ ಬಹುದೂರವಿದ್ದರೂ ಪತ್ರಿಕಾ ದಿನಾಚರಣೆ ಇಲ್ಲಿ ಆಚರಿಸಿರುವುದು ಪತ್ರಕರ್ತರಿಗೆ ಪರಿಸರ ಮೇಲಿರುವ ಪ್ರೀತಿ ಹಾಗೂ ಕಾಳಜಿಯನ್ನು ಬಿಂಬಿಸುತ್ತದೆ ಎಂದರು.

ಸುಮಾರು 75ಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಲಾಯಿತು. ಮೀಡಿಯಾ ಕ್ಲಬ್ ನ‌ 15 ಸದಸ್ಯರು ಭಾಗವಹಿಸಿದ್ದರು.

ಪ್ರಭಾಕರ ಹೆಗ್ಡೆ ಮಹಾವೀರ ಗ್ರೂಪ್, ರೋಟರಿ ಕ್ಲಬ್ ಕಾರ್ಯದರ್ಶಿ ಅಬುಬಕ್ಕರ್, ಉದ್ಯಮಿ ಮೋಹನ್ ಛೌದರಿ, ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮದ ಟ್ರಸ್ಟಿ ಭಾಸ್ಕರ ಧರ್ಮಸ್ಥಳ ಹಾಗೂ ನವೀನ್ ನೆರಿಯ, ಕಳೆಂಜ ಗ್ರಾ.ಪಂ. ಅಧ್ಯಕ್ಷ ಪ್ರಸನ್ನ ಎ.ಪಿ., ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷ ಯಶವಂತ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಮೀಡಿಯಾ ಕ್ಲಬ್ ಅಧ್ಯಕ್ಷ ಸತೀಶ್ ಪೆರ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಲಬ್ ನ ಕೋಶಾಧಿಕಾರಿ ಶರತ್ ಸ್ವಾಗತಿಸಿ, ಕಾರ್ಯದರ್ಶಿ ಉಮೇಶ್ ಕುಲಾಲ್ ವಂದಿಸಿದರು. ಹರ್ಷಿತ್ ಪಿಂಡಿವನ ನಿರೂಪಿಸಿದರು.

error: Content is protected !!