ಕೊರೋನಾ ನುಸುಳಲೂ ಜಾಗವಿಲ್ಲ!: ಬೆಳ್ತಂಗಡಿಯಲ್ಲಿ ಪಟ್ಟಣದಲ್ಲಿ ಜನವೋ ಜನ!: ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ: ಎಲ್ಲೆಲ್ಲೂ ಜಾಂ… ಜಾಂ… ಜಾಂ…!: ಕೊರೊನಾ ನಿಯಂತ್ರಣ ನಿಯಮಗಳು ಯಾರಿಗಾಗಿ…?

ಬೆಳ್ತಂಗಡಿ: ಕಠಿಣವಾದ ವೀಕೆಂಡ್ ಕರ್ಫ್ಯೂ ಜಾರಿ ಗೊಳಿಸಲಾಗಿದ್ದು, ಸೋಮವಾರ ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯಲ್ಲಿ ಕೊರೋನಾ ನುಸುಳಲೂ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಗುರುವಾಯನಕೆರೆ, ಸಂತೆಕಟ್ಟೆ, ಬೆಳ್ತಂಗಡಿಯಲ್ಲಿ ಪಟ್ಟಣದಲ್ಲಿ ಜನ ದಟ್ಟಣೆ ಕಂಡುಬಂದಿದ್ದು, ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರು, ಗೃಹರಕ್ಷಕ ದಳ ಸಿಬ್ಬಂದಿ ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂತು.‌ ಒಟ್ಟಿನಲ್ಲಿ ಬೆಳ್ತಂಗಡಿಯಲ್ಲಿ ಮಧ್ಯಾಹ್ನ 11 ಗಂಟೆಯಿಂದ 1.30_ರವರೆಗೆ ಎಲ್ಲೆಲ್ಲೂ ರಸ್ತೆಗಳು ಜಾಂ… ಆದಂತೆ ಗೋಚರಿಸಿತು.

ಕೊರೊನಾ ಸೋಂಕಿನ 2 ನೇ ಅಲೆಯಿಂದಾಗಿ ರಾಜ್ಯ ಎರಡು ತಿಂಗಳು ಲಾಕ್ ಡೌನ್ ನಿಂದ ಸ್ತಬ್ದವಾಗಿದ್ದಲ್ಲದೇ ಅದೆಷ್ಟೋ ಜನರನ್ನು ಬಲಿ ಪಡೆದಿದೆ. ಅನೇಕ ಕುಟುಂಬಗಳನ್ನು‌ ಅನಾಥವನ್ನಾಗಿಸಿದ ಈ ಮಾಹಾಮಾರಿ ಇದೀಗ ತಕ್ಕಮಟ್ಟಿಗೆ ನಿಯಂತ್ರಣದಲ್ಲಿತ್ತು. ಇದೀಗ ಕಠಿನ ಲಾಕ್ ಡೌನ್ ಸಡಿಲಿಕೆ ಮಾಡಿ ಸೆಮಿ‌ಲಾಕ್ ಡೌನ್ ಅಳವಡಿಸಲಾಗಿದೆ. ಅದರೆ ಕಠಿಣವಾದ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಅದರಂತೆ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 7 ರವರೆಗೆ ತುರ್ತು ಸೇವೆಗಳಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು.

ಆದರೆ ಸೋಮವಾರ ಬೆಳಗ್ಗೆಯಿಂದಲೇ ಬೆಳ್ತಂಗಡಿಯಲ್ಲಿ ಜನಸಂದಣಿ ಆರಂಭವಾಗಿದ್ದು, ಬಳಿಕ ಇನ್ನೂ ಹೆಚ್ಚಾಗಿದೆ. ಆದರೆ ಈ ರೀತಿಯಲ್ಲಿ ಜನತೆ ಓಡಾಡುತ್ತಿರುವುದನ್ನು ಕಂಡಾಗ ಕೊರೊನಾ ನಿಯಮಗಳು ಯಾರಿಗಾಗಿ ಎಂಬ ಸಂಶಯವೂ ಕಾಡುತ್ತಿದೆ. ಮುಂದೆ ಮತ್ತೆ ಪಾಸಿಟಿವ್ ಪ್ರಕರಣಗಳು ಪತ್ತೆಯಾದರೆ ಯಾರು ಹೊಣೆ ಎಂಬ ಮಾತುಗಳೂ ಕೇಳಿ ಬರುತ್ತಿವೆ…

error: Content is protected !!