ಬೆಳ್ತಂಗಡಿ: “ಎಲ್ಲರಿಗೂ ಲಸಿಕೆ, ಎಲ್ಲರಿಗೂ ಉಚಿತ” ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದು ವಿಶ್ವದ ಅತಿ ದೊಡ್ಡ ಉಚಿತ ಲಸಿಕಾ ಅಭಿಯಾನ ಇಂದು ದೇಶದಾದ್ಯಂತ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಿಳಿಸಿದರು.
ಅವರು ಸೋಮವಾರ ಬೆಳ್ತಂಗಡಿ ಶ್ರೀ ಮಂಜುನಾಥಸ್ವಾಮಿ ಕಲಾಭವನದಲ್ಲಿ ಬೆಳ್ತಂಗಡಿ ತಾಲೂಕು ಆರೋಗ್ಯ ಕೇಂದ್ರದ ವತಿಯಿಂದ ಕೇಂದ್ರ ಸರಕಾರದ ಯೋಜನೆಯಾದ “ಎಲ್ಲರಿಗೂ ಲಸಿಕೆ, ಎಲ್ಲರಿಗೂ ಉಚಿತ” ಮೆಗಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
60 ವರ್ಷ ಹಾಗೂ 45 ವರ್ಷಕ್ಕೆ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿತ್ತು. ವಿಶ್ವಯೋಗ ದಿನದಂದು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುತ್ತಿದೆ. ಇದೀಗ ಆದ್ಯತೆಯ ನೆಲೆಯಲ್ಲಿ ಲಸಿಕೆ ಅಭಿಯಾನ ಆರಂಭವಾಗಿದ್ದು, ಮುಂದಿನ ದಿನದಲ್ಲಿ ಎಲ್ಲರಿಗೂ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಾಗಲಿದೆ ಎಂದರು.
ತಾಲೂಕು ವೈದಾಧಿಕಾರಿ ಡಾ. ಕಲಾಮಧು, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದಾಧಿಕಾರಿ ಡಾ. ವಿದ್ಯಾವತಿ, ಶಿಕ್ಷಣ ಇಲಾಖೆಯ ಸುಭಾಸ್ ಜಾಧವ್, ಎಎಸ್‌ಐ ರಾಮಯ್ಯ ಹೆಗ್ಡೆ ಮೊದಲಾದವರು ಇದ್ದರು.