ಬೆಳ್ತಂಗಡಿ: ಲಾಕ್ ಡೌನ್ ಅವಧಿಯಲ್ಲಿ ತಾಲೂಕಿನ ಸುಮಾರು 65ಕ್ಕೂ ಹೆಚ್ಚು ಮೊಬೈಲ್ ಅಂಗಡಿಗಳು ಸಂಪೂರ್ಣ ಬಂದ್ ಆಗಿವೆ. ಇದರಿಂದಾಗಿ ಗ್ರಾಹಕರು ಪರದಾಡುವಂತಾಗಿದೆ. ಕೆಲವರ ಮೊಬೈಲ್ ಕೆಟ್ಟು ಹೋಗಿ ಮಕ್ಕಳ ಆನ್ ಲೈನ್ ತರಗತಿಗೆ ಸಮಸ್ಯೆಯಾಗುತ್ತಿದೆ. ಹಳ್ಳಿಗಳಲ್ಲಿ ಸಣ್ಣ ರೀಚಾರ್ಜ್ ಗು ಮೊಬೈಲ್ ಅಂಗಡಿಯನ್ನು ಅವಲಂಬಿಸಿದ್ದು ಜನರು ತುಂಬಾ ಪರದಾಡುವಂತಾಗಿದೆ ಆದ್ದರಿಂದ ಮೊಬೈಲ್ ಸರ್ವಿಸ್ ಸೆಂಟರ್ ಗಳನ್ನೂ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಸಿ ಕನಿಷ್ಠ ಬೆಳಗ್ಗೆ 10 ಗಂಟೆಯವರೆಗಾದರೂ ತೆರೆಯಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಮೊಬೈಲ್ ರಿಟೈಲರ್ಸ್ ಪರವಾಗಿ ಬೆಳ್ತಂಗಡಿ ತಾಲೂಕು ಮೊಬೈಲ್ ರಿಟೈಲರ್ಸ್ ಯೂನಿಯನ್ ಅಧ್ಯಕ್ಷ ವೀರಚಂದ್ರ ಜೈನ್ ಅವರು ಶಾಸಕ ಹರೀಶ್ ಪೂಂಜ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಸರಕಾರ ಲಾಕ್ ಡೌನ್ ಅವಧಿಯಲ್ಲಿ ಇ ಕಾರ್ಟ್ ಗಳಿಗೆ ವ್ಯವಹಾರಕ್ಕೆ ಅವಕಾಶ ಕಲ್ಪಿಸಿರುವುದರಿಂದ ಸಮಸ್ಯೆಯಾಗುತ್ತಿದೆ. ತಾಲೂಕಿನ ಎಲ್ಲಾ ಮೊಬೈಲ್ ಅಂಗಡಿ ಮಾಲೀಕರು ಮತ್ತು ನೌಕರರಿಗೆ ವಾಕ್ಸಿನೇಷನ್ ಆದಷ್ಟು ಶೀಘ್ರವಾಗಿ ಒದಗಿಸಲು ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಶಾಸಕರಿಗೆ ಸಲ್ಲಿಸಿದರು.