ಶಾಸಕ ಹರೀಶ್ ಪೂಂಜರ ಪ್ರಚಾರ ಬಯಕೆಯಿಂದ ತಾಲೂಕಿನಲ್ಲಿ ಹೆಚ್ಚಿದ ಕೊರೋನಾ ಪಾಸಿಟಿವ್ ಸಂಖ್ಯೆ: ಮಾಜಿ‌ ಶಾಸಕ ವಸಂತ ಬಂಗೇರ ವಾಗ್ದಾಳಿ: ಆಕ್ಸಿ ಮೀಟರ್, ಮಾಸ್ಕ್ ಹಂಚಿಕೆ: ಗೃಹರಕ್ಷಕ ದಳ, ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ: ಮನೆ ಮನೆಗೆ ತೆರಳಿ ಕಿಟ್ ನೀಡಿ ಪ್ರಚಾರ ಪಡೆಯಲ್ಲ ಎಂದ ಮಾಜಿ ಶಾಸಕರು

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರು‌ ಸಭೆ ಸಮಾರಂಭ ನಡೆಸಿ ಪ್ರಚಾರ ಪಡೆಯುವ ಮೂಲಕ ತಾಲೂಕಿನಲ್ಲಿ ವ್ಯಾಪಕವಾಗಿ ಕೊರೋನಾ ಹರಡಲು ಕಾರಣರಾಗಿದ್ದಾರೆ. ಬೆಂಗಳೂರಿಂದ ತಾಲೂಕಿನ ಜನತೆಯನ್ನು ಬಸ್ ಮೂಲಕ‌ ಕರೆತಂದರು. ಆದರೆ ಬಂದವರನ್ನು ವ್ಯವಸ್ಥಿತವಾಗಿ ಕ್ವಾರಂಟೈನ್ ಮಾಡುವ, ಟೆಸ್ಟ್ ಮಾಡಿಸುವ ವ್ಯವಸ್ಥೆ ಮಾಡಲಿಲ್ಲ. ಈ ಎಲ್ಲಾ ಶಾಸಕರ ಪ್ರಚಾರದ ಬಯಕೆಯಿಂದ ತಾಲೂಕಿನಲ್ಲಿ ಕೊರೋನಾ ಇನ್ನೂ‌ ಸಮರ್ಪಕವಾಗಿ ನಿಯಂತ್ರಣಕ್ಕೆ ಬಂದಿಲ್ಲ‌ ಎಂದು ಮಾಜಿ ಶಾಸಕ ವಸಂತ ಬಂಗೇರ ವಾಗ್ದಾಳಿ ನಡೆಸಿದರು.

ಅವರು ಬೆಳ್ತಂಗಡಿ ಆಶಾ ಸಾಲ್ಯಾನ್ ಸಭಾ ಭವನದಲ್ಲಿ ತಮ್ಮ ಕುಟುಂಬಸ್ಥರ ಪರವಾಗಿ ಆಕ್ಸಿ ಮೀಟರ್, ಮಾಸ್ಕ್ ಹಂಚಿಕೆ ಮಾಡಿ, ಗೃಹರಕ್ಷಕ ದಳ ಹಾಗೂ ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.

ತಾಲೂಕಿನಲ್ಲಿ ನನ್ನ ಅಣ್ಣನ‌ ಮಾರ್ಗದರ್ಶನದಲ್ಲಿ ರಾಜಕೀಯಕ್ಕೆ ಆಗಮಿಸಿದ್ದೇನೆ. ನಾನು, ನನ್ನ ಅಣ್ಣ, ತಮ್ಮ‌ ಸೇರಿ ನಮ್ಮ ಕುಟುಂಬದ ಸದಸ್ಯರು 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಪ್ರಚಾರಕ್ಕಾಗಿ ಮನೆ ಮನೆಗೆ ತೆರಳಿ ಅಗತ್ಯ ಇಲ್ಲದವರಿಗೂ ಆಹಾರ ಕಿಟ್ ನೀಡಿ ಪ್ರಚಾರ ಪಡೆಯುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಅಂತಹಾ ಪ್ರಚಾರ ಬೇಕಿಲ್ಲ. ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ಸಹಾಯ ಹಸ್ತ ಚಾಚಲಾಗಿದೆ. ಈ ಬಾರಿ ಮಕ್ಕಳು, ಅಳಿಯಂದಿರು ಸೇರಿ ಕುಟುಂಬಸ್ಥರ ಪರವಾಗಿ ಕಿಟ್ ಹಂಚಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಗೆ 50 ಆಕ್ಸೀಮೀಟರ್, 200 ಎನ್ 95 ಮಾಸ್ಕ್ ಮತ್ತು 70 ಮಂದಿ ಗೃಹರಕ್ಷಕ ಸಿಬ್ಬಂದಿಗಳಿಗೆ, 16 ಮಂದಿ ಪೌರಕಾರ್ಮಿಕರಿಗೆ, ಕೊರೊನಾ ವಾರಿಯರ್ಸ್‌ ಸೇರಿ ಒಟ್ಟು 125 ಮಂದಿಗೆ ಆಹಾರ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ರಂಜನ್ ಜಿ.‌ಗೌಡ, ನ.ಪಂ ಸದಸ್ಯರುಗಳಾದ ಜಗದೀಶ್ , ಜನಾರ್ದನ ಕುಲಾಲ್, ವಸಂತ ಬಿಕೆ, ಅನೂಪ್ ಜೆ. ಬಂಗೇರ, ಹಾಗೂ ವಸಂತ ಬಂಗೇರ ಕುಟುಂಬಿಕರು ಉಪಸ್ಥಿತರಿದ್ದರು. ವಕೀಲ ಮನೋಹರ್ ಇಳಂತಿಲ ಸ್ವಾಗತಿಸಿ, ವಿನೋದ್ ಅಳ್ವ ಸವಣಾಲು ವಂದಿಸಿದರು.

error: Content is protected !!