ಮಾಜಿ‌ ಶಾಸಕ ವಸಂತ ಬಂಗೇರರಿಂದ ಮಾನವೀಯ ಸ್ಪಂದನೆ: ಟರ್ಪಾಲ್ ಛಾವಣಿಯ ಮನೆಯಲ್ಲಿ ವಾಸಿಸುತ್ತಿದ್ದ ಕುಟುಂಬ: ಗುರುವಾರದೊಳಗೆ ₹ 50 ಸಾವಿರ ವೆಚ್ಚದಲ್ಲಿ ಶೆಡ್ ನಿರ್ಮಿಸುವ ಭರವಸೆ

ಬೆಳ್ತಂಗಡಿ: ಊರ್ಲ‌ ನಿವಾಸಿ, ಪರಿಶಿಷ್ಟ ಜಾತಿಯ ಕೂಲಿ ಕಾರ್ಮಿಕರಾಗಿರುವ ಕಾಣದು ಮತ್ತು ಅವರ ಪುತ್ರ ರಾಧಾಕೃಷ್ಣ ಅವರು ನೆಲೆಸಿರುವ ಮನೆಯ ಮೇಲ್ಛಾವಣಿ ಪ್ಲಾಸ್ಟಿಕ್ ಟಾರ್ಪಲ್ ನಿಂದ ಮುಚ್ಚಿದ್ದು ಕುಟುಂಬ ಸಂಕಷ್ಟಕ್ಕೆ ಸಿಲುಕಿದ ವಿಚಾರ ತಿಳಿದ ಮಾಜಿ‌ ಶಾಸಕ ಕೆ. ವಸಂತ ಬಂಗೇರ ಸ್ಥಳಕ್ಕೆ ಭೇಟಿ ನೀಡಿ, ಗುರುವಾರದೊಳಗೆ 50 ಸಾವಿರ ರೂ. ವೆಚ್ಚದಲ್ಲಿ ಶೆಡ್ ನಿರ್ಮಿಸುವ ಭರವಸೆ ನೀಡುವ ಜೊತೆಗೆ ಆಹಾರದ ಕಿಟ್ ವಿತರಿಸಿ ಮಾನವೀಯ‌ ಸ್ಪಂದನೆ ನೀಡಿದರು.

ಇಂದಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಬಂಗಾಡಿ ಊರ್ಲ ಎಂಬಲ್ಲಿ ಈ ದಲಿತ ಕುಟುಂಬ ವಾಸವಾಗಿದ್ದು, ಮನೆಯ ಮೇಲ್ಛಾವಣಿ ಸಂಪೂರ್ಣ ನಾದುರಸ್ತಿಯಲ್ಲಿತ್ತು.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ವಸಂತ‌ ಬಂಗೇರ‌, ಸದ್ರಿ ಕುಟುಂಬಕ್ಕೆ 1984 ರಲ್ಲಿ ನಾನೇ ಶಾಸಕನಾಗಿದ್ದಾಗ 9 ಸೆಂಟ್ಸ್ ಭೂಮಿಯನ್ನು ಭೂ ನ್ಯಾಯ ಮಂಡಳಿಯಲ್ಲಿ ಮಂಜೂರು ಮಾಡಿಸಿದ್ದೆ. ಇದೀಗ ಮನೆ ಕೂಡ ಮಂಜೂರಾಗಿದೆ. ಆದರೆ ಕುಟುಂಬ ಈಗ ಸಂಕಷ್ಟದಲ್ಲಿರುವ ಬಗ್ಗೆ ಗಮನಕ್ಕೆ ಬಂದಾಗ ಭೇಟಿ ನೀಡಿದ್ದೇನೆ ಎಂದರು. ‌

ಬಂಗಾಡಿ‌ ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಊರ್ಲ, ಕಾಂಗ್ರೆಸ್ ಇಂಟೆಕ್ ಅಧ್ಯಕ್ಷ ಅನೂಪ್‌ ಎಂ. ಬಂಗೇರ, ಆಲ್ವಿನ್ ಅಪ್ಪೂಸ್ ಅವರು ಉಪಸ್ಥಿತರಿದ್ದರು.

error: Content is protected !!