ಬೆಳ್ತಂಗಡಿ: ಕೋವಿಡ್ ಸೋಂಕು ತೀವ್ರ ಸ್ವರೂಪದಲ್ಲಿ ಹಡಿರುವುದರಿಂದ ಬೆಳ್ತಂಗಡಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆ, ಧರ್ಮಸ್ಥಳ ರಜತಾದ್ರಿ ಕೋವಿಡ್ ಸೆಂಟರ್ ಹಾಗೂ ಗಂಡಿಬಾಗಿಲು ಸಿಯೋನ್ ಆಶ್ರಮಕ್ಕೆ ಬುಧವಾರ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ನೇತೃತ್ವದ ಅಧಿಕಾರಿಗಳ ತಂಡ ಹಾಗೂ ಶಾಸಕ ಹರೀಶ್ ಪೂಂಜ ಬುಧವಾರ ಭೇಟಿ ನೀಡಿ, ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.
ಬೆಳ್ತಂಗಡಿ ತಾಲೂಕಿಗೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ.ಸಿಇಒ ಡಾ.ಕುಮಾರ್ ಹಾಗೂ ಶಾಸಕ ಹರೀಶ್ ಪೂಂಜ ಅವರು ಧರ್ಮಸ್ಥಳ ರಜತಾದ್ರಿ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದರು.
ಅಲ್ಲಿ ಕ್ವಾರೆಂಟೈನ್ ಒಳಗಾಗಿರುವ ಸಿಯೋನ್ ಆಶ್ರಮದ 128 ಮಂದಿಯ ಆರೋಗ್ಯ ವಿಚಾರಣೆ ಮಾಡುತ್ತಿರುವ ವೈದ್ಯರು, ವ್ಯವಸ್ಥಾಪಕರಲ್ಲಿ ವ್ಯವಸ್ಥೆ ಕುರಿತು ವಿಚಾರಿಸಿದರು.
ಉಜಿರೆ ಎಸ್ ಡಿ ಎಂ ವ್ಯಸನಮುಕ್ತಿ ಹಾಗೂ ಸಂಶೋಧನಾ ಕೇಂದ್ರ ಹಾಗೂ ಧರ್ಮಸ್ಥಳದ ರಜತಾದ್ರಿ ಕಟ್ಟಡವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸರಕಾರದ ಕೋರಿಕೆಯಂತೆ ನೀಡಿದ್ದರು. ಊಟೋಪಚಾರದಿಂದ ಹಿಡಿದು ಇಲ್ಲಿನ ಎಲ್ಲಾ ವ್ಯವಸ್ಥೆಯನ್ನು ಧರ್ಮಸ್ಥಳ ಕ್ಷೇತ್ರದಿಂದಲೇ ನಿರ್ವಹಣೆ ಮಾಡಲಾಗುತ್ತಿದೆ.
ಜಿಲ್ಲಾಧಿಕಾರಿಯವರು ಭೇಟಿ ನೀಡಿದ ಸಂದರ್ಭ ಸೋಂಕಿತರ ಬಳಿ ವ್ಯವಸ್ಥೆಯ ಕುರಿತು ವಿಚಾರಿಸಿದಾಗ ಸೋಂಕಿತರು ಇಲ್ಲಿನ ವ್ಯವಸ್ಥೆ, ಚಿಕಿತ್ಸೆ ಹಾಗೂ ಉಟೋಪಚಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಉಜಿರೆ ಕೋವಿಡ್ ಸೆಂಟರ್ ನಲ್ಲಿ 4 ಮಂದಿ ವೈದ್ಯರು, 2 ದಾದಿಯರು, ವಿಪತ್ತು ನಿರ್ವಹಣ ಸ್ವಯಂ ಸೇವಕರು, ವ್ಯಸನಮುಕ್ತಿ ಕೇಂದ್ರದ ಯೋಜನಾಧಿಕಾರಿಗಳು, ಶಿಬಿರಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ರಜತಾದ್ರಿಯಲ್ಲಿ 4 ಮಂದಿ ವೈದ್ಯರುಗಳು, 8 ಮಂದಿ ಶಿಕ್ಷಕರು, 2 ಮಂದಿ ದಾದಿಯರು, ಗ್ರೂಫ್ ಡಿ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣ ಸ್ವಯಂ ಸೇವಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೋವಿಡ್ ಸೆಂಟರ್ ನಲ್ಲಿ ಕರ್ತವ್ಯ ನಿರ್ವಹಿಸುವವರು ಸುರಕ್ಷತೆ ದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು. ಪಿಪಿಇ ಕಿಟ್ ಪೂರೈಕೆ ಇದೆಯೇ ವಿಚಾರಿಸಿದಾದ 80 ಪಿಪಿ ಕಿಟ್ ಇರುವುದಾಗಿ ರಜತಾದ್ರಿ ಕೇರ್ ಸೆಂಟರ್ ನೋಡೆಲ್ ಅಧಿಕಾರಿ ಡಾ. ಜಯಕೀರ್ತಿ ಜೈನ್ ತಿಳಿಸಿದರು. ಸೋಂಕಿತರ ಆರೈಕೆ ಸಂದರ್ಭ ಪಿಪಿ ಕಿಟ್ ಬಳಸುವಂತೆ ಡಿಸಿಯವರು ಸೂಚಿಸಿದರು.
ಸಿಯೋನ್ ಆಶ್ರಮದ ಸಿಬ್ಬಂದಿಗಳಿಂದ ಸೋಂಕಿತರ ಕುರಿತು ವಿವರ ಪಡೆದರು. ಅವರಿಗೆ ನೀಡಲಾಗುವ ಔಷಧಿಗಳ ಹಾಗೂ ಸಿಯೋನ್ ಆಶ್ರಮದ ಸೋಂಕಿತರಿಗೆ ಮನೋತಜ್ಞರಿಂದ ತಪಾಸಣೆಯ ಕುರಿತು ಮಾಹಿತಿ ಪಡೆದು, ಸೂಕ್ತ ಸಲಹೆಗಳನ್ನು ಸಂಬಂದಪಟ್ಟವರಿಗೆ ನೀಡಿದರು.
ಬಳಿಕ ಧರ್ಮಸ್ಥಳ ಗ್ರಾಮದ ಪೊಸೊಳಿಕೆ ಎಂಬಲ್ಲಿ ಭೇಟಿ ಹೋಂ ಐಸೋಲೇಶನ್ ನಲ್ಲಿರುವ ಸೋಂಕಿತ ಕುಟುಂಬದ ಜತೆ ಮಾತನಾಡಿ ಯೋಗ್ಯಕ್ಷೇಮ ವಿಚಾರಿಸಿದರು. ನಂತರ ನೆರಿಯ ಗಂಡಿಬಾಗಿಲು ಸಿಯೋನ್ ಆಶ್ರಮಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
ದ.ಕ. ಜಿ.ಪಂ. ಸಿಇಒ ಡಾ. ಕುಮಾರ್, ಕೋವಿಡ್-19 ನೋಡೆಲ್ ಅಧಿಕಾರಿ ವೆಂಕಟೇಶ್, ತಹಸೀಲ್ದಾರ್ ಮಹೇಶ್ ಜೆ., ಇಒ ಕುಸುಮಾಧರ್, ಪ್ಲಾಯಿಂಗ್ ಸ್ಕಾಡ್ ಅಧಿಕಾರಿ ಶಿವಪ್ರಸಾದ್ ಅಜಿಲ, ತಾಲೂಕು ವೈದಾಧಿಕಾರಿ ಡಾ. ಕಲಾಮಧು, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಸಿಡಿಪಿಒ ಪ್ರಿಯಾ ಆಗ್ನೇಸ್, ರಜತಾದ್ರಿ ಕೋವಿಡ್ ಸೆಂಟರ್ ನೋಡೆಲ್ ಅಧಿಕಾರಿ ಡಾ.ಜಯಕೀರ್ತಿ ಜೈನ್, ಧರ್ಮಸ್ಥಳ ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯಸ್, ವಿಪತ್ತು ನಿರ್ವಹಣ ಘಟಕ ಯೋಜನಾಧಿಕಾರಿ ಯಶವಂತ ಪಟಗಾರ್, ಧರ್ಮಸ್ಥಳ ಗ್ರಾ.ಪಂ.ಸದಸ್ಯರುಗಳು, ಕಂದಾಯ ಇಲಾಖೆಗಳ ಸಿಬ್ಬಂದಿಗಳು, ಪಿಡಿಒಗಳು ಹಾಗೂ ವಿಪತ್ತು ನಿರ್ವಹಣ ಘಟಕ ಸ್ವಯಂ ಸೇವಕರು ಮೊದಲಾದವರು ಇದ್ದರು.