ಧರ್ಮಸ್ಥಳ: ಪ್ರಸ್ತುತ ಕೋವಿಡ್ ಪರಿಸ್ಥಿತಿಯಲ್ಲಿ ಅಗತ್ಯವಿರುವ ಚಿಕಿತ್ಸಾ ಉಪಕರಣಗಳನ್ನು ಗಮನದಲ್ಲಿಟ್ಟುಕೊಂಡು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ 100 ಆಕ್ಸಿಜನ್ ಕಾನ್ಸನ್ಟ್ರೇಟರ್‌ಗಳನ್ನು ಖರೀದಿಸಿದ್ದು, ಇವುಗಳನ್ನು ಅಗತ್ಯವಿರುವ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ತಿಳಿಸಿದ್ದಾರೆ.
ಈ ಪೈಕಿ 50 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಬೆಂಗಳೂರಿನಲ್ಲಿ ಗೃಹ ಚಿಕಿತ್ಸೆಯನ್ನು ಪಡೆಯುತ್ತಿರುವ ಆಮ್ಲಜನಕದ ಅಗತ್ಯವಿರುವ ರೋಗಿಗಳಿಗೆ ಒದಗಿಸಲು ಬೆಂಗಳೂರಿನ ಯೋಜನಾ ಕಛೇರಿಯಲ್ಲಿ ಕಾನ್ಸನ್ಟ್ರೇಟರ್ ಬ್ಯಾಂಕನ್ನು ಪ್ರಾರಂಭಿಸಲಾಗಿದೆ. ಬೆಂಗಳೂರಿನ ಯೋಜನಾ ಕಛೇರಿಯಲ್ಲಿ ಕಾನ್ಸನ್ಟ್ರೇಟರ್ ಬ್ಯಾಂಕನ್ನು ಮೊಬೈಲ್ ಸಂಖ್ಯೆ 9663521316/ 9449189041 ಸಂಪರ್ಕಿಸಬಹುದಾಗಿದೆ. ಅಗತ್ಯವಿದ್ದವರ ಮನೆಗಳಿಗೆ ಯಂತ್ರವನ್ನು ಉಚಿತವಾಗಿ ಒದಗಿಸಿ, ಪುನಃ ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ, ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆ ಮತ್ತು ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗಳಿಗೆ ಒಟ್ಟಾಗಿ 10 ಆಕ್ಸಿಜನ್ ಹೈಫ್ಲೋ ಯಂತ್ರಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ತೀವ್ರವಾಗಿ ಅನಾರೋಗ್ಯ ಪೀಡಿತರಾಗಿರುವ ರೋಗಿಗಳಿಗೆ ಅಗತ್ಯವಿರುವ ವೆಂಟಿಲೇಟರ್ ಸೌಲಭ್ಯವನ್ನು ಒದಗಿಸಲು ಆಯ್ದ ಆಸ್ಪತ್ರೆಗಳಿಗೆ ಉಚಿತ ವೆಂಟಿಲೇಟರ್ ಪೂರೈಕೆಗಾಗಿ ವೆಂಟಿಲೇಟರ್‌ಗಳನ್ನೂ ಖರೀದಿಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.