ಬೆಳ್ತಂಗಡಿ: ತಾಲೂಕಿನಲ್ಲಿ ಮಹಾಮಾರಿ ಕೊರೊನಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಟಾಸ್ಕ್ ಫೋರ್ಸ್ ಸಭೆಗಳನ್ನು ಮಾಡಿ ಗ್ರಾಮ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಎ.ಎನ್.ಎಮ್., ಅಂಗನವಾಡಿ ಕಾರ್ಯಕರ್ತೆಯರ ಜೊತೆ ಸಕ್ರಿಯವಾಗಿ ತಮ್ಮ ವಾರ್ಡ್ ಗಳಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ಅವರು ಪತ್ರಕರ್ತರ ಜೊತೆ ತಾಲೂಕಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಸದಸ್ಯರುಗಳು ಅತ್ಯಂತ ಕ್ರಿಯಶೀಲರಾಗಿ ಕೊರೊನಾ ಮಹಾಮಾರಿಯನ್ನು ದೂರ ಮಾಡಲು ಸಹಕಾರ ನೀಡಲು ವಿನಂತಿಸಲಾಗಿದೆ. ಈ ಬಗ್ಗೆ ಎಲ್ಲಾ ಸಮುದಾಯದ ಮುಖಂಡರುಗಳು, ವಿವಿಧ ಸಂಘ ಸಂಸ್ಥೆಗಳು, ದಾನಿಗಳು, ಮಹಾಮಾರಿಯ ವಿರುದ್ಧ ಹೋರಾಟ ಮಾಡಲು ಸಾಮೂಹಿಕವಾಗಿ ಪ್ರಯತ್ನ ಪಟ್ಟರೆ ಮಾತ್ರ ಇದನ್ನು ನಿಯಂತ್ರಣಕ್ಕೆ ತರಲು ಸಾಧ್ಯ ಅಲ್ಲದೆ ತಾಲೂಕಿನ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದರು.
50 ಆಕ್ಸೀಜನ್ ಬೆಡ್ ಗಳ ವ್ಯವಸ್ಥೆ:
ತಾಲೂಕಿನಲ್ಲಿ ಕೊರೊನಾ ಮಹಾಮಾರಿಯನ್ನು ದೂರ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದಿಂದ ಲಾಯಿಲದ ಟಿಬಿ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಅಲ್ಲಿ ಅತ್ಯಂತ ವ್ಯವಸ್ಥಿತವಾಗಿ ಆರೋಗ್ಯ ಸೇವೆಯನ್ನು ನೀಡುವಂತಹ ಕಾರ್ಯ ಪ್ರಾರಂಭವಾಗಿದೆ.ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ 50 ಆಕ್ಸೀಜನ್ ಬೆಡ್ ಗಳಿದ್ದು ಅದನ್ನು ರೋಗಿಗಳಿಗೆ ಬಳಕೆಗೆ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ 34 ಜಂಬೊ ಆಕ್ಸೀಜನ್ ಸಿಲಿಂಡರ್ ಗಳಿದ್ದು 10 ಸಿಲಿಂಡರ್ ಖಾಲಿಯಾದ ತಕ್ಷಣ ಮಂಗಳೂರಿಗೆ ಕಳುಹಿಸಿ ಆಕ್ಸೀಜನ್ ತುಂಬಿಸಿಕೊಂಡು ಬರಲಾಗುತ್ತಿದೆ.
ತಾಲೂಕಿನ ಎಲ್ಲಾ ಕಡೆಗಳಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಎಎನ್ ಎಮ್ ಗಳು ಅತ್ಯಂತ ಕಷ್ಟಪಟ್ಟು ತಮ್ಮನ್ನು ತಾವೂ ತೊಡಗಿಸಿಕೊಂಡಿದ್ದಾರೆ ಅವರೊಟ್ಟಿಗೆ ನಾವೆಲ್ಲರೂ ಒಟ್ಟು ಸೇರಿ ಈ ಕಾರ್ಯವನ್ನು ಮುಂದುವರಿಸಬೇಕು ಎಂಬ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಸಮುದಾಯದ ಗಣ್ಯರು, ಧಾರ್ಮಿಕ ಮುಖಂಡರುಗಳನ್ನು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಸಂಪರ್ಕ ಮಾಡಿ ಕೊರೊನಾ ಮುಕ್ತ ಬೆಳ್ತಂಗಡಿಗೆ ಕೈಜೋಡಿಸುವಂತೆ ಸಹಕಾರ ನೀಡಲು ಮನವಿ ಮಾಡಲಾಗಿದೆ. ಅದಲ್ಲದೆ ಈ ಸಂದರ್ಭದಲ್ಲಿ ಮಾದ್ಯಮ ಮುಖಾಂತರ ಎಲ್ಲರಲ್ಲೂ ಮನವಿ ಏನೆಂದರೆ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಿ ನಮ್ಮ ಸುರಕ್ಷತೆಯನ್ನು ನಾವೇ ಮಾಡಿಕೊಂಡು ಕೊರೊನಾ ಮುಕ್ತ ತಾಲೂಕನ್ನಾಗಿಸುವಲ್ಲಿ ಸಂಪೂರ್ಣ ಸಹಕರಿಸಿ ಉತ್ತಮ ಸಮಾಜ ನಿರ್ಮಿಸುವ ಎಂದರು.
‘ಶ್ರಮಿಕಾ ಸ್ಪಂದನ ವಾರ್ ರೂಂ’ ಕಾರ್ಯನಿರ್ವಹಣೆ:
ಬೆಳ್ತಂಗಡಿಯಲ್ಲಿ ಶ್ರಮಿಕಾ ಸ್ಪಂದನ ವಾರ್ ರೂಂ ಈಗಾಗಲೇ ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸುತಿದ್ದು ಉತ್ತಮ ರೀತಿಯಲ್ಲಿ ಜನರೊಂದಿಗೆ ಸ್ಪಂದಿಸುತ್ತಿದೆ ಅಂಬುಲೆನ್ಸ್ ಸೇವೆಗಾಗಿ ಕೊಟ್ಟಿರುವ ನಂಬರಿನ ಮೂಲಕ ತಾಲೂಕಿನ ಅನೇಕ ಜನರಿಗೆ ತುರ್ತು ಅಂಬುಲೆನ್ಸ್ ಸೇವೆಗಳನ್ನು ನೀಡುವ ಕಾರ್ಯ ನಡೆಯುತ್ತಿದೆ ಅದಲ್ಲದೆ ಇನ್ನಿತರ ಸೇವೆಗಳಾದ ಆಸ್ಪತ್ರೆಗಳ ಮಾಹಿತಿ, ವ್ಯಾಕ್ಸಿನೇಷನ್ ಮಾಹಿತಿ, ವೆಂಟಿಲೇಟರ್ ಮಾಹಿತಿ, ಆಯುಷ್ಮಾನ್ ಮಾಹಿತಿ, ಅಭಿಯಾನ ಮಾಹಿತಿ, ಶವಸಂಸ್ಕಾರ ಮಾಹಿತಿಗಳ ಬಗ್ಗೆ ವಾರ್ ರೂಂ ನಲ್ಲಿ ಕೊಟ್ಟಿರುವ ಪೋನ್ ನಂಬರ್ ಗಳಿಗೆ ಜನ ಕಾಲ್ ಮಾಡಿದಾಗ ಅದಕ್ಕೆ ಸರಿಯಾದ ರೀತಿಯಲ್ಲಿ ಸ್ಪಂದಸುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಸಹಾಯವಾಣಿ ಮೂಲಕ ಎಲ್ಲಾ ರೀತಿಯ ಮಾಹಿತಿಗಳನ್ನೂ ಜನರಿಗೆ ತಿಳಿದುಕೊಳ್ಳುವ ವ್ಯವಸ್ಥೆಗಳ ಮೂಲಕ ಉತ್ತಮ ರೀತಿಯಲ್ಲಿ ಜನರಿಗೆ ತಕ್ಷಣ ಸ್ಪಂದಿಸುವ ಕಾರ್ಯಗಳು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ.ಅದಲ್ಲದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾ ಭಾರತಿಯ ಜೊತೆ ಸೇರಿ ಶಾರದಾ ಮಂಟಪದಲ್ಲಿ ವಾರ್ ರೂಂ ನ ಕೆಲಸ ಕಾರ್ಯಗಳನ್ನು ಸಂಘದ ಸ್ವಯಂಸೇವಕರು ಹಾಗೂ ಇನ್ನಿತರರು ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.