ಬೆಳ್ತಂಗಡಿ, ಮೇ 9: ಕೋವಿಡ್ ಸಂಕಷ್ಟ ಸಮಯದಲ್ಲಿ ಪರಸ್ಪರ ಒಬ್ಬರಿಗೊಬ್ಬರು ನೆರವಾಗುವ ಮೂಲಕ ಮಾನವೀಯ ಮೌಲ್ಯವನ್ನು ಎತ್ತಿಹಿಡಿದಂತಾಗಿದೆ. ಮಾನವ ಸ್ಪಂದನ ತಂಡದಿಂದ ಪೊಲೀಸ್ ಕಾರ್ಯಕ್ಷಮತೆಯನ್ನು ಗೌರವಿಸಿ ಬೆನ್ನುತಟ್ಟಿರುವುದಕ್ಕೆ ಇಲಾಖೆ ಪರವಾಗಿ ಅಭಿನಂದನೆಗಳು ಎಂದು ಬೆಳ್ತಂಗಡಿ ಪೊಲೀಸ್ ಠಾಣೆ ಉಪನಿರೀಕ್ಷಕ ನಂದಕುಮಾರ್ ಎಂ.ಎಂ. ಹೇಳಿದರು.
ಬೆಳ್ತಂಗಡಿ ತಾಲೂಕಿನ ಮುಖ್ಯ ರಸ್ತೆಗಳಲ್ಲಿ ಚೆಕ್ ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ, ಸಾಮಾಜಿಕ ಜಾಗೃತಿ ಮೂಡಿಸಲು ಆಹೋರಾತ್ರಿ ಶ್ರಮಿಸುತ್ತಿರುವ ತಾಲೂಕಿನ ಎಲ್ಲ ಪತ್ರಕರ್ತರಿಗೆ ಭಾನುವಾರ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದಿಂದ ಒಂದು ಹೊತ್ತಿನ ಉಪಹಾರ, ನೀರು, ತಂಪು ಪಾನೀಯ, ಎನ್ 95 ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ.ಪಂ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್. ಸುಧಾಕರ್ ಮಾತನಾಡಿ, ಜೀವನದ ಹಂಗುತೊರೆದು ಒಂದೊತ್ತು ಸಮಯವನ್ನು ವ್ಯರ್ಥಮಾಡದೆ ನಿರಂತರವಾಗಿ ಸೇವೆ ಅಲ್ಲಿಸುತ್ತಿರುವ ಎಲ್ಲಾ ಕೋವಿಡ್ ವಾರಿಯರ್ಸ್ ಸೇವೆ ಅವಿಸ್ಮರಣೀಯ. ಅವರಿಗೆ ಸಂಘಸಂಸ್ಥೆಗಳು ನೆರವಾಗುವ ಮೂಲಕ ಅತ್ಮಸ್ಥೈರ್ಯ ತುಂಬುವ ಕೆಲಸವಾಗಿದೆ ಎಂದು ಶ್ಲಾಘಿಸಿದರು.
ಸಂಚಾರಿ ಠಾಣೆ ಉಪನಿರೀಕ್ಷಕ ಓಡಿಯಪ್ಪ ಗೌಡ, ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಅಚುಶ್ರೀ ಬಾಂಗೇರು ಮುಖ್ಯ ಅತಿಥಿಗಳಾಗಿ ಶುಭಹಾರೈಸಿದರು.
ಪ್ರಾಯೋಜಕರಾಗಿದ್ದ ಐಡಿಯಲ್ ವೆಫರ್ಸ್ ಬನಾನಾ ಚಿಪ್ಸ್ ಕಂಪೆನಿ ಮಾಲಕ ಜೈಶನ್ ಕೋಲಾಟ್‌ಕುಡಿ, ದಿನೇಶ್ ಪೂಜಾರಿ, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ದ.ಕ. ಜಿಲ್ಲಾಧ್ಯಕ್ಷ ವಿಜಯ ಕುಮಾರ್, ಮಾನವ ಸ್ಪಂದನ ತಂಡದ ಅಜಿತ್ ಪಿ.ಎಂ, ಶಶಿರಾಜ್ ಶೆಟ್ಟಿ, ದೀಪಕ್ ಜಿ. ಉಪಸ್ಥಿತರಿದ್ದರು.
ಕೋವಿಡ್ ಸೋಲ್ಜರ್ಸ್ ತಂಡದ ಮುಖ್ಯಸ್ಥ ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿ ಪ್ರಸ್ತಾವಿಸಿದರು. ಮಾನವ ಸ್ಪಂದನ ತಂಡದ ಚೇರ್ಮನ್ ಪಿ.ಸಿ.ಸೆಬಾಸ್ಟಿಯನ್ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಜೈಸನ್ ವೇಣೂರು ಧನ್ಯವಾದವಿತ್ತರು.
ಬೆಳ್ತಂಗಡಿ, ಉಜಿರೆ, ಪೂಂಜಾಲಕಟ್ಟೆ, ಗುರುವಾಯನಕೆರೆ, ಕನ್ಯಾಡಿ, ಅರಸಿನಮಕ್ಕಿ, ವೇಣೂರು, ಕೊಕ್ಕಡಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್, ಆಶಾಕಾರ್ಯಕರ್ತೆಯರು, ಪಂಚಾಯತ್ ಅಧಿಕಾರಿಗಳು ಸೇರಿದಂತೆ 100 ಕ್ಕೂ ಅಧಿಕ ಕಿಟ್ ಹಂಚಲಾಯಿತು.