ಬೆಳ್ತಂಗಡಿ : ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಒ ರವೀಂದ್ರನ್‌ರವರ ಅಸಹಜ ಸಾವಿನ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಗುರುವಾರ ಮನವಿ ನೀಡಿತು.
ಶ್ರೀ ನಾರಾಯಣಗುರು ಧರ್ಮ ಪರಿಪಾಲನಂ ಸಮಿತಿಯ ಧರ್ಮಸ್ಥಳ ಘಟಕದ ಅಧ್ಯಕ್ಷ ರವೀಂದ್ರನ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಪ್ರಕರಣ ದಾಖಲಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರವೀಂದ್ರನ್ ಸಾವಿನ ಹಿಂದೆ ಅನೇಕ ಸಂಶಯಗಳಿದ್ದು ಎಲ್ಲವನ್ನು ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಕೈಗೊಂಡು ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿಯನ್ನು ಸ್ವೀಕರಿಸಿದ ಧರ್ಮಸ್ಥಳ ಠಾಣಾ ಎಸ್.ಐ ಪವನ್ ನಾಯಕ್ ಮಾತನಾಡಿ, ದೂರಿನ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿ ಸಾಕ್ಷಗಳನ್ನು ಸಂಗ್ರಹಿಸುತ್ತಿದ್ದೇವೆ. ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮನವಿ ನೀಡುವ ಸಂದರ್ಭ ಸಂಘದ ಗೌರವಾಧ್ಯಕ್ಷ ಕೆ.ವಸಂತ ಬಂಗೇರ, ಉಪಾಧ್ಯಕ್ಷ ಮನೋಹರ್ ಇಳಂತಿಲ, ಕಾರ್ಯದರ್ಶಿ ನಾರಾಯಣ ಸುವರ್ಣ, ಕೋಶಾಧಿಕಾರಿ ಚಿದಾನಂದ ಪೂಜಾರಿ ಎಲ್ದಕ್ಕ, ನಿರ್ದೇಶಕ ಡಿ. ಪ್ರಭಾಕರ ಪೂಜಾರಿ, ಯುವವಾಹಿನಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಕೆ.ಪ್ರಸಾದ್, ಗ್ರಾ.ಪಂ. ಸದಸ್ಯ ಹರೀಶ್ ಕನ್ಯಾಡಿ, ಯುವ ಬಿಲ್ಲವ ವೇದಿಕೆ ಕಾರ್ಯದರ್ಶಿ ರೂಪೇಶ್ ಕೆ., ಧರ್ಮಸ್ಥಳ ನಾ.ಗು.ಸ್ವಾ.ಸೇ. ಸಂಘದ ಅಧ್ಯಕ್ಷ ಪ್ರಕಾಶ್ ಪೂಜಾರಿ, ಉಪಾಧ್ಯಕ್ಷ ಶ್ರೀಧರ ಪೂಜಾರಿ, ಪದಾಧಿಕಾರಿಗಳಾದ ಪುರುಷೋತ್ತಮ ಪೂಜಾರಿ, ಆನಂದ ಜೋಡುಸ್ಥಾನ, ಗೋಪಾಲ ಪೂಜಾರಿ ನೇತ್ರಾವತಿ, ಶಶಿಧರ ಧರ್ಮಸ್ಥಳ, ಮಹಿಳಾ ಮುಂದಾಳು ಸಿಂಧೂದೇವಿ, ಯಶೋಧರ ಚಾರ್ಮಾಡಿ, ಎಸ್.ಎನ್.ಡಿ.ಪಿ ಧರ್ಮಸ್ಥಳ ಘಟಕದ ಉಪಾಧ್ಯಕ್ಷ ಸಚ್ಚಿದಾನಂದ, ಮಾಜಿ ಅಧ್ಯಕ್ಷ ಕೆ. ಗೋವಿಂದನ್, ಸೋಮನಾಥನ್ ಕೆ.ವಿ, ರಾಜೀವ, ಶಶಿಧರನ್, ಬಾಬು ಎಂ.ಕೆ, ಉಜಿರೆ, ತೋಟತ್ತಾಡಿ, ಮಿಯ್ಯಾರು ಎಸ್‌ಎನ್‌ಡಿಪಿ ಸಮಿತಿ ಪದಾಧಿಕಾರಿಗಳು ಇದ್ದರು.
ಬಳಿಕ ಸಂಘದ ನಿಯೋಗ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರನ್ನು ಭೇಟಿ ಮಾಡಿ ರವೀಂದ್ರನ್ ಅಸಹಜ ಸಾವಿಗೆ ಕಾರಣರಾದವರನ್ನು ಸಂಸ್ಥೆಯಿಂದ ವಜಾಗೊಳಿಸುವಂತೆ ಮನವಿ ನೀಡಿತು.
ಮೃತರ ಮನೆಗೆ ಭೇಟಿ
ರವೀಂದ್ರನ್ ಮನೆಗೆ ನಾರಾಯಣ ಗುರು ಸೇವಾ ಸಂಘ ಹಾಗೂ ಎಸ್‌ಎನ್‌ಡಿಪಿ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಮೃತರ ಪತ್ನಿ ಹಾಗೂ ಮನೆಯವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ರವೀಂದ್ರನ್‌ರವರ ಪತ್ನಿ ಉಷಾ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಘ ಹಾಗೂ ಬೆಳ್ತಂಗಡಿ ಯುವವಾಹಿನಿ ಘಟಕಕ್ಕೆ ಮನವಿ ನೀಡಿ ಪತಿಯ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಿ ನ್ಯಾಯ ಒದಗಿಸಿ ಕೊಡಲು ಸಹಕಾರ ನೀಡುವಂತೆ ವಿನಂತಿಸಿದರು. ಸಂಘದ ಉಪಾಧ್ಯಕ್ಷ ಮನೋಹರ್ ಇಳಂತಿಲ ಹಾಗೂ ಯುವವಾಹಿನಿ ಅಧ್ಯಕ್ಷ ಪ್ರಸಾದ್ ಎಂ.ಕೆ. ಮನವಿಯನ್ನು ಸ್ವೀಕರಿಸಿ ಸಹಕಾರದ ಭರವಸೆ ನೀಡಿದರು.