ದೆಹಲಿ: ಕೊರೊನಾ ಮಹಾಮಾರಿ ಅವಾಂತರ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಭಾನುವಾರ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಮಹತ್ವದ ಆದೇಶ ಹೊರಡಿಸಿದ್ದು, ಎರಡನೇ ಸಲ ಮಾಸ್ಕ್ ನಿಯಮ ಉಲ್ಲಂಘನೆ ಮಾಡಿದ್ದೆ ಆದಲ್ಲಿ 10 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಸೂಚನೆ ನೀಡಲಾಗಿದೆ.ನಿನ್ನೆ ಒಂದೇ ದಿನ ಉತ್ತರ ಪ್ರದೇಶದಲ್ಲಿ 22,439 ಹೊಸ ಕೋವಿಡ್ ಸೋಂಕಿತ ಪ್ರಕರಣ ದಾಖಲಾಗಿದ್ದು, 104 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಈಗಾಗಲೇ ಉತ್ತರ ಪ್ರದೇಶದ 10 ಜಿಲ್ಲೆಗಳಲ್ಲಿ ರಾತ್ರಿ 8ರಿಂದ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಲಾಗಿದೆ.ಲಖನೌ, ಪ್ರಯಾಗರಾಜ್, ವಾರಣಾಸಿ, ಕಾನ್ಪುರ್ ನಗರ,ಗೌತಮ್ ಬುದ್ಧ ನಗರ, ಗಾಜಿಯಾಬಾದ್, ಮಿರತ್, ಗೋರಖ್ಪುರ್ದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಪ್ರಮುಖವಾಗಿ ಲಖನೌ, ವಾರಾಣಸಿ, ಪ್ರಯಾಗ್ರಾಜ್ದಲ್ಲಿ ಪ್ರತಿದಿನ ಸಾವಿರಾರು ಕೋವಿಡ್ ಪ್ರಕರಣ ದಾಖಲಾಗುತ್ತಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.