ಹಳ್ಳಿಗಳಲ್ಲೂ ಕೊರೋನಾ, ಇರಲಿ ಎಚ್ಚರ:  ಬೆಳ್ತಂಗಡಿಯಲ್ಲೂ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ!: ಮಾಸ್ಕ್ ಧಾರಣೆಗೆ ತೋರದಿರಿ ಅಸಡ್ಡೆ, ಎಚ್ಚರ ತಪ್ಪಿದರೆ ಆಪತ್ತು ಖಚಿತ: “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ”, ಇದು ‘ಪ್ರಜಾಪ್ರಕಾಶ ನ್ಯೂಸ್’ ಕಾಳಜಿ

ಬೆಳ್ತಂಗಡಿ: ಮಹಾಮಾರಿ ಕೊರೊನಾ ಎರಡನೇ ಅಲೆ ಇಡೀ ದೇಶದಲ್ಲಿ ಅಟ್ಟಹಾಸ ಬೀರುತಿದ್ದು ಇದೇ ಮೊದಲ ಬಾರಿ ಭಾರತದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ ಎರಡು ಲಕ್ಷ ಕ್ಕಿಂತಲೂ ಅಧಿಕ ಕೊರೊನಾ ಪ್ರಕರಣಗಳು ವರದಿಯಾಗಿದೆ.

ಅದೇ ರೀತಿ ಬುಧವಾರದಿಂದ ಸಾವಿನ ಸಂಖ್ಯೆ ಸಾವಿರ ಗಡಿ ದಾಟುತ್ತಿದ್ದು, ಜನಸಾಮಾನ್ಯರು ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೆ ಕುತ್ತು ಬರಬಹುದು ಎಂಬುದು ಮರೆಯಬಾರದು.

ಕಳೆದ 24 ಗಂಟೆಗಳಲ್ಲಿ 2,00,739 ಸೋಂಕಿತರು ಪತ್ತೆಯಾಗಿದ್ದು, 1027 ಮಂದಿ ಬಲಿಯಾಗಿದ್ದಾರೆ. ದೇಶದಲ್ಲೀಗ ಸೋಂಕಿತರ ಸಂಖ್ಯೆ 1,40,74,564 ಏರಿಕೆಯಾಗಿದ್ದು, ಈವರೆಗೆ 1,73,123 ಜನರು ಮಹಾಮಾರಿಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿಂದು 14,738 ಮಂದಿಗೆ ಕೊರೊನಾ:

ರಾಜ್ಯದಲ್ಲಿಂದು 14,738 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು,‌ 66 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. 3,591 ಮಂದಿ ಗುಣಮುಖರಾಗಿದ್ದಾರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 96,561ಕ್ಕೆ ಏರಿಕೆಯಾಗಿದೆ.

ಈವರೆಗೆ ಒಟ್ಟು 9,99,958 ಮಂದಿ ಬಿಡುಗಡೆಯಾಗಿದ್ದು, ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 11,09,650ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 13,112ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 555 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೆಂಗಳೂರಿನಲ್ಲೇ ಸೋಂಕಿತರ ಸಂಖ್ಯೆ ಹತ್ತು ಸಾವಿರ ಮೀರಿದೆ. ಇಂದು 10,497 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, 30 ಮಂದಿ ಮೃತಪಟ್ಟಿದ್ದಾರೆ.ರಾಜ್ಯದಲ್ಲಿ ಮೃತಪಡುತ್ತಿರುವವರ ಪ್ರಮಾಣವೂ 0.44% ಇದ್ದು, ಸೋಂಕಿತರ ಪ್ರಮಾಣ 11.38 %ಗೆ ಏರಿಕೆಯಾಗಿದೆ.

ಬೆಳ್ತಂಗಡಿಯಲ್ಲೂ 71 ಸೋಂಕಿತರು!: 

ಕೊರೊನಾ ಅಬ್ಬರ ನಿಧಾನವಾಗಿ ಬೆಳ್ತಂಗಡಿಯಲ್ಲಿ ಸಕ್ರಿಯಾವಾಗುತ್ತಿದೆ. ಈಗಾಗಲೇ 71 ಪ್ರಕರಣಗಳಿದ್ದು ಇದರಲ್ಲಿ 49 ಮಂದಿ ಹೋಂ ಐಸೋಲೇಶನ್ ನಲ್ಲಿ ಇದ್ದಾರೆ. 22 ಮಂದಿ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಒಬ್ಬರು ಮಹಿಳೆ ಅಪಘಾತದಿಂದ ಮಂಗಳೂರಿನಲ್ಲಿ ಮೃತ ಪಟ್ಟಿದ್ದಾರೆ ಎಂದು ಬೆಳ್ತಂಗಡಿ ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.

ವ್ಯಾಕ್ಸಿನೇಷನ್‌ ಪಡೆದುಕೊಳ್ಳಿ: ಡಾ.‌ಕಲಾಮಧು ಶೆಟ್ಟಿ: 

ತಾಲೂಕು ಆರೋಗ್ಯಾಧಿಕಾರಿ ಡಾ. ಕೆ. ಕಲಾಮಧು ಶೆಟ್ಟಿ ಈ ಕುರಿತು ಮಾಹಿತಿ ನೀಡಿ ಈಗಾಗಲೇ ಕೊರೊನಾದ ಎರಡನೇ ಅಲೆ ಪ್ರಾರಂಭವಾಗಿದೆ. ಜನರು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಇದನ್ನು ತುಂಬಾ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಅಪಾಯ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು.

ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ ಹಾಗೂ 12 ಪ್ರಾಥಮಿಕ ಕೇಂದ್ರದಲ್ಲಿ, ಸುಮಾರು 75 ಉಪ ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್‌ ಲಸಿಕೆ ನೀಡಲಾಗುತ್ತಿದೆ. ತಾಲೂಕಿನಾದ್ಯಂತ ದಿನದಲ್ಲಿ 2000 ಜನರಿಗೆ ವ್ಯಾಕ್ಸಿನೇಷನ್‌ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಈಗಾಗಲೇ ದಿನಕ್ಕೆ ತಾಲೂಕು ಆಸ್ಪತ್ರೆ ಬೆಳ್ತಂಗಡಿಯಲ್ಲಿ 300, ಸಮುದಾಯ ಆರೋಗ್ಯ ಕೇಂದ್ರ ಕೊಕ್ಕಡದಲ್ಲಿ ಹಾಗೂ ತಾಲೂಕಿನ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 200 ಹಾಗೂ 75 ಉಪಕೇಂದ್ರಗಳಲ್ಲಿ 100 ಜನರಿಗೆ ಲಸಿಕೆ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ತಾಲೂಕಿನಲ್ಲಿ ಈವರೆಗೆ 9000ಕ್ಕೂ ಅಧಿಕ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಆರೋಗ್ಯ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ವ್ಯಾಕ್ಸಿನೇಷನ್‌ ಬಗ್ಗೆ ಎಷ್ಟು ತಿಳಿ ಹೇಳಿ ಮನವೊಲಿಸಿದರೂ ಜನರು ಲಸಿಕೆ ತೆಗೆದುಕೊಳ್ಳಲು ಅಸಡ್ಡೆ ತೋರುತಿದ್ದಾರೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆದುಕೊಳ್ಳಬೇಕು. ಅದ್ದರಿಂದ ಜನರಲ್ಲಿ ನನ್ನ ವಿನಂತಿ ಏನೆಂದರೆ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಲಸಿಕೆ ತೆಗೆದುಕೊಳ್ಳಬೇಕು. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಈಗಾಗಲೇ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಬೇಕಾದಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅದಲ್ಲದೆ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಧಾರ್ಮಿಕ ಕೇಂದ್ರಗಳ ಮುಖಂಡರುಗಳು ಎಲ್ಲರೂ ಸೇರಿ ವ್ಯಾಕ್ಸಿನೇಷನ್‌ ತೆಗದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿದರೆ ತಾಲೂಕಿನ ಎಲ್ಲಾ ಜನತೆ ವ್ಯಾಕ್ಸಿನೇಷನ್‌ ಪಡೆದುಕೊಳ್ಳಲು ಪ್ರೇರಣೆಯಾಗಬಹುದು. ಅದಲ್ಲದೆ ಬೆಳ್ತಂಗಡಿ ಶಾಸಕರು ನಮ್ಮ ಆರೋಗ್ಯ ಇಲಾಖೆಗೆ ಉತ್ತಮವಾದ ಸಹಕಾರವನ್ನು ನೀಡುತ್ತಾ ಬರುತಿದ್ದಾರೆ ಎಂದರು.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದು ‘ಪ್ರಜಾಪ್ರಕಾಶ ನ್ಯೂಸ್’ ಕಾಳಜಿ: 

ಕೊರೊನಾ ವ್ಯಾಕ್ಸಿನೇಷನ್‌ ಅಭಿಯಾನ ಕೂಡ ನಡೆಯುತ್ತಲೇ ಇದ್ದು, ಜನವರಿ 16 ರಿಂದ ಈವರೆಗೆ ಒಟ್ಟು 11,44,93,238 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮೊದಲ ಡೋಸ್​ ಪಡೆದವರು ಎರಡನೇ ಡೋಸ್​ ಪಡೆಯುವವರೆಗೂ ಹಾಗೂ ಪಡೆದ ಮೇಲೂ ಮಾಸ್ಕ್​​, ಸಾಮಾಜಿಕ ಅಂತರ ಹಾಗೂ ಕೋವಿಡ್​ ನಿಯಮಗಳನ್ನು ಸರಿಯಾಗಿ ಪಾಲಿಸಲೇಬೇಕಿದೆ. ಲಸಿಕೆ ಪಡೆಯದವರೂ ಕೂಡಾ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಧರಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ.

ಅದ್ದರಿಂದ ತಾಲೂಕಿನ ಜನತೆ ಎಚ್ಚರದಿಂದ ಇರಬೇಕು. ಸ್ವಲ್ಪ ಅಸಡ್ಡೆ ತೋರಿದರೂ ತೊಂದರೆ ತಪ್ಪಿದ್ದಲ್ಲ. ಅನಾವಶ್ಯಕವಾಗಿ ಎಲ್ಲೂ ಹೊರಗಡೆ ತಿರುಗಾಡಬೇಡಿ. ವಯಸ್ಸಾದವರ ಹಾಗೂ ಮಕ್ಕಳ ಬಗ್ಗೆ ಇರಲಿ ಎಚ್ಚರ. ಆರೋಗ್ಯದ ಕಡೆ ಇರಲಿ ಹೆಚ್ಚಿನ ಗಮನ. ಲಸಿಕೆಯ ಬಗ್ಗೆ ಭಯ ಬೇಡ. ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ. ಸರ್ಕಾರದ ಎಲ್ಲಾ ಸೂಚನೆಗಳನ್ನು ಪಾಲಿಸೋಣ ಕೊರೊನಾ ಮುಕ್ತ ಸಮಾಜ ನಿರ್ಮಿಸಲು ಪ್ರಯತ್ನಿಸೋಣ ಇದು ಪ್ರಜಾಪ್ರಕಾಶ ಕಾಳಜಿ.

error: Content is protected !!