ಬೆಳ್ತಂಗಡಿ: ‘ಜಗತ್ತು ಕಂಡ ಅದ್ಭುತ ಮೇಧಾವಿ ಡಾ. ಬಿ.ಆರ್. ಅಂಬೇಡ್ಕರ್ ರವರು ಭಾರತದ ಬಹು ದೊಡ್ಡ ಆಸ್ತಿಯಾಗಿದ್ದಾರೆ. ತನ್ನ ಅನುಭವದ ನೆಲೆಯಿಂದ ವೈಚಾರಿಕ ಚಿಂತನೆಯೊಂದಿಗೆ ಸಾರ್ವಕಾಲಿಕ ಮಹಾನ್ ನಾಯಕರೆನಿಸಿಕೊಂಡಿದ್ದಾರೆ. ಅವರು ಜಗತ್ತಿಗೆ ನೀಡಿದ ಸಂದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ನೀಡಿದ ನಿಜವಾದ ಗೌರವವಾಗುವುದು’ ಎಂದು ಕರ್ನಾಟಕ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದರು.
ಬುಧವಾರ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ ಬಿ. ಆರ್. ಅಂಬೇಡ್ಕರ್ ರವರ 130ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ‘ಬೆಳ್ತಂಗಡಿಯಲ್ಲಿನ ಅಂಬೇಡ್ಕರ್ ಜಯಂತಿ ಆಚರಣೆ ರಾಜ್ಯಕ್ಕೆ ಮಾದರಿ. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಿಂದಾಗಿ ನಾವೆಲ್ಲ ಜನಪ್ರತಿನಿಧಿಗಳಾಗಿ ಆಯ್ಕೆಯಾಗಲು ಸಾಧ್ಯವಾಗಿರುವುದು. ಇಂತಹ ಮಹಾನ್ ನಾಯಕನ ಜಯಂತಿಯಲ್ಲಿ ಜನಪ್ರತಿನಿಧಿಗಳು ರಾಜಕೀಯ ಮರೆತು ಭಾಗವಹಿಸಬೇಕು ಎಂದ ಅವರು, ತಾಲ್ಲೂಕಿನಲ್ಲಿ 15 ಕೊರಗ ಸಮುದಾಯದ ವಸತಿ ನಿರ್ಮಾಣದ ಕಾಮಗಾರಿ ಆರಂಭವಾಗಿದೆ. ಬೆಳ್ತಂಗಡಿಯಲ್ಲಿ ಸುಸಜ್ಜಿತವಾದ ಅಂಬೇಡ್ಕರ್ ಭವನ ಮುಂದಿನ ದಿನಗಳಲ್ಲಿ ತಲೆಯೆತ್ತಲಿದೆ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ. ವಿ. ವಸಂತ ಕುಮಾರ್ ಅವರು, ಅಂಬೇಡ್ಕರ್ ಹಿಂದೂ ಸಮಾಜದ ವಿರೋಧಿ ಅಲ್ಲ. ಹಿಂದೂ ಸಮಾಜದ ಉದ್ಧಾರಕರಾಗಿದ್ದರು. ಕೋಮುವಾದವನ್ನು ಅವರು ಕಾಡ್ಗಿಚ್ಚು ಎಂದಿದ್ದರು. ಅಂಬೇಡ್ಕರ್ ವೈಯಕ್ತಿಕ ಜೀವನವನ್ನು ಸಂಪೂರ್ಣ ನಿರಾಕರಿಸಿ ಸಾಮಾಜಿಕ ಬದುಕನ್ನು ಕಂಡವರು. ಮಾನಸಿಕವಾದ, ಸಾಂಸ್ಕೃತಿಕವಾದ, ವೈಚಾರಿಕವಾದ ಭಾರತವನ್ನು ಕಟ್ಟುವ ಕನಸು ಕಂಡವರು. ಭಾರತ ಇರುವವರೆಗೆ ಅಂಬೇಡ್ಕರ್ ನಮ್ಮೊಂದಿಗೆ ಇರುತ್ತಾರೆ ಎಂದ ಅವರು, ದೇಶಕ್ಕಾಗಿ ಅಮೃತವನ್ನು ನೀಡಿದ ಮಹಾತ್ಮ. ನೋವು, ಶೋಷಣೆ, ದಬ್ಬಾಳಿಕೆ, ಕ್ರಿಯಾಶೀಲತೆ, ಪುಸ್ತಕಗಳಿಂದ ಅಂಬೇಡ್ಕರ್ ರೂಪುಗೊಂಡಿದ್ದು. ವಿದ್ಯಾರ್ಥಿ ಜೀವನಕ್ಕೆ, ಶಿಕ್ಷಣ ಕ್ರಮಕ್ಕೆ, ಜ್ಞಾನಾರ್ಜನೆಗೆ ಅಂಬೇಡ್ಕರ್ ಎಲ್ಲರಿಗೂ ಮಾದರಿ’ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದಿವ್ಯಜ್ಯೋತಿ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ.ಶೆಟ್ಟಿ, ಸದಸ್ಯರಾದ ಕೊರಗಪ್ಪ ನಾಯ್ಕ್, ಸೌಮ್ಯಲತಾ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಕಲ್ಮಂಜ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ತುಳಸಿ, ತಹಶೀಲ್ದಾರ್ ಮಹೇಶ್ ಜೆ., ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್. ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು, ಅಕ್ರಮ-ಸಕ್ರಮ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ಅರಣ್ಯ ಹಕ್ಕು ಕಾಯ್ದೆಯಡಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ, ಅಂತರ್‌ತಿ ವಿವಾಹವಾದ ದಂಪತಿಗಳಿಗೆ ಪ್ರೋತ್ಸಾಹಧನ ವಿತರಣೆ, ಸಾಮಾಜಿಕ ಅರಣ್ಯ ಇಲಾಖೆಯಿಂದ ಸೋಲಾರ್ ದೀಪ ವಿತರಣೆ ಕಾರ್ಯಕ್ರಮ ನಡೆಯಿತು.
ಝೀ ಕನ್ನಡ ಡ್ಯಾನ್ಸ್ ಕರ್ನಾಟಕ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ ಬೆಳ್ತಂಗಡಿಯ ಪ್ರತಿಭೆ ಪ್ರತಿಕ್ಷಾ ಅವರ ಪರವಾಗಿ ಪೋಷಕರನ್ನು, ಪ್ರಧಾನ ಭಾಷಣಕಾರ ಡಾ. ಬಿ. ವಿ. ವಸಂತ ಕುಮಾರ್ ರನ್ನು ಗೌರವಿಸಲಾಯಿತು.
ತಾಲ್ಲೂಕು ಪಂಚಾಯಿತಿ ಇಒ ಕುಸುಮಾಧರ್ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೇಮಚಂದ್ರ ಪ್ರಸ್ತಾವಿಸಿದರು.
ಗಿರಿಜನ ಕಲ್ಯಾಣ ಇಲಾಖೆ ವಿಸ್ತಾರಣಾಧಿಕಾರಿ ಹೇಮಲತಾ ಕಾರ್ಯಕ್ರಮ ನಿರ್ವಹಿಸಿದರು. ಜಯಾನಂದ ವಂದಿಸಿದರು.