ವಿಕಲಚೇತನರಿಗೆ ಸಮನಾದ ಅವಕಾಶ ಒದಗಿಸಿಕೊಡಬೇಕು: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಬೆನ್ನುಮೂಳೆ ಮುರಿತಕ್ಕೊಳಗಾದವರು ಸೇರಿದಂತೆ ತಾಲೂಕಿನ 13 ಮಂದಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನವನ್ನು ವಿತರಿಸಲಾಗುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರ ವಿಶೇಷ ಅನುದಾನದಿಂದ 11 ತ್ರಿಚಕ್ರ ವಾಹನಗಳಿಗೆ ಮಂಜೂರಾತಿ ಲಭಿಸಿದೆ. ವಾಹನ ಚಲಾಯಿಸಲು ಸಾಧ್ಯವಿರುವ ತಾಲೂಕಿನ ಇನ್ನುಳಿದ ವಿಶೇಷ ಚೇತನರಿಗೆ ದಾನಿಗಳ ಸಹಾಯದಿಂದ ತ್ರಿಚಕ್ರಗಳನ್ನು ನೀಡಲಾಗುವುದು. ಎಂದು ಶಾಸಕ ಹರೀಶ್ ಪೂಂಜ ಭರವಸೆ ನೀಡಿದರು.

ಅವರು ಶನಿವಾರ ಬೆಳ್ತಂಗಡಿ ಪ್ರವಾಸಿ ಮಂದಿರದ ಆವರಣದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ತಾಲೂಕಿನ 13 ಮಂದಿ ವಿಶೇಷ ಚೇತನ ಫಲಾನುಭವಿಗಳಿಗೆ ದೈನಂದಿನ ಚಟುವಟಿಕೆಗಳಿಗೆ ಉಪಯೋಗವಾಗಲು ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮ ದಲ್ಲಿ ಫಲಾನುಭವಿಗಳಿಗೆ ವಾಹನದ ಕೀ ಹಸ್ತಾಂತರಿಸಿ ಮಾತನಾಡಿದರು.

ಸೇವಾಭರತಿಯ ವಿನಾಯಕ ರಾವ್ ಅವರ ಮಾರ್ಗದರ್ಶನದಂತೆ ವಿಕಲಚೇತನರಿಗೆ ಅನುಕೂಲವಾಗಲು ವ್ಯವಸ್ಥೆ ಕಲ್ಪಿಸಲಾಗಿದೆ. ತಾಲೂಕಿನಲ್ಲಿ ಇನ್ನೂ ಕೆಲವರರು ಅರ್ಹರು ಇದ್ದು, ಅವರಿಗೂ ವಾಹನ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು. ವಿಶೇಷ ಚೇತನರ ಇಲಾಖೆಯಲ್ಲಿ ಈ ಯೋಜನೆ ಇದ್ದರೂ ಜಿಲ್ಲೆಯಲ್ಲಿ ಫಲಾನುಭವಿಗಳ ಆಯ್ಕೆ ನಡೆಯುತ್ತದೆ. ತಾಲೂಕಿಗೆ 3 ಅಥವಾ 4 ಮಂದಿಗೆ ಸಿಗುತ್ತದೆ ಎಂದ ಅವರು, ವಿಶೇಷಚೇತನರು ನಮ್ಮಂತೆಯೆ ವಿವಿಧ ಕೌಶಲ್ಯಗಳನ್ನು ಹೊಂದಿದ್ದು, ಅವಕಾಶ ದೊರೆತ ಹಲವು ವಿಶೇಷ ಚೇತನರು ಸಾಧನೆಗಳನ್ನು ಮಾಡಿರುವ ನಿದರ್ಶನ ನಮ್ಮ ಮುಂದಿದೆ. ಆದ್ದರಿಂದ ವಿಶೇಷ ಚೇತನರಿಗೆ ಸಮನಾದ ಅವಕಾಶವನ್ನು ಒದಗಿಸಿಕೊಟ್ಟು ಅವರೂ ಕೂಡ ಸಮಾಜದ ಮುಖ್ಯವಾಹಿನಿಗೆ ಬಂದು ಸಾಮಾನ್ಯ ಜೀವನವನ್ನು ನಡೆಸಲು ಅನುವು ಮಾಡಿಕೊಡುವ ದಿಶೆಯಲ್ಲಿ ನಮ್ಮ ಸಮಾಜವು ಸಜ್ಜಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ತಾಲೂಕಿನ 13 ವಿಶೇಷ ಚೇತನ ಫಲಾನುಭವಿಗಳಿಗೆ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಉಪಯೋಗವಾಗುವಂತೆ ತ್ರಿಚಕ್ರ ವಾಹನಗಳ ವಿತರಣೆ ಮಾಡಲಾಯಿತು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ಯಾಡಿ ಸೇವಾ ಭಾರತಿ ಅಧ್ಯಕ್ಷ ವಿನಾಯಕ ರಾವ್ ಅವರು, ದೇಶದಲ್ಲೇ ಪ್ರಪ್ರಥಮ ಬಾರಿಗೆ ಶಾಸಕರ ನಿಧಿಯಿಂದ ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ತ್ರಿಚಕ್ರ ವಾಹನಗಳನ್ನು ನೀಡುವ ಕಾರ್ಯ ನಡೆದಿದೆ. ಯಾವುದೇ ಯೋಜನೆಗಳು ಹಳ್ಳ ಹಿಡಿಯುತ್ತದೆ. ಭರವಸೆಗಳು ಮಾತ್ರ ನಮಗೆ ಉಳಿಯುತ್ತದೆ. ಆದರೆ ನಾವು ನೀಡಿದ ಅರ್ಜಿಗಳನ್ನು ಮಾನ್ಯತೆ ಮಾಡಿ ನುಡಿದಂತೆ ನಡೆಯುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೊಂದವರಿಗೆ ಸಹಾಯ ಮಾಡುವ ಮೂಲಕ ಮಾನವತಾವಾದಿಯಾಗಿದ್ದಾರೆ ಎಂದರು.

ವಿಕಲಚೇತನ ಕಲ್ಯಾಣಾಧಿಕಾರಿ ಯಮುನ ಅವರು, ಬೆನ್ನು ಮೂಳೆ ಮುರಿತಕ್ಕೊಳಗಾದವರಿಗೆ ಈ ಸೌಲಭ್ಯದ ಅವಕಾಶ ಇರಲಿಲ್ಲ. ಶಾಸಕ ಹರೀಶ್ ಪೂಂಜ ಅವರ ವಿಶೇಷ ಕಾಳಜಿಯಿಂದ ಅವರಿಗೂ ತ್ರಿಚಕ್ರ ವಾಹನ ವಿತರಣೆ ಮಾಡಲಾಗಿದೆ. ಶಾಸಕರು ಈಗಾಗಲೇ ಮೇಲಾಧಿಕಾರಿಗಳ ಬಳಿ ಮಾತನಾಡಿದ ಪರಿಣಾಮ ಬೆಳ್ತಂಗಡಿ ತಾಲೂಕಿಗೆ ಹೆಚ್ಚುವರಿ 11 ತ್ರಿಚಕ್ರ ವಾಹನಗಳು ದೊರಕುವ ಭರವಸೆ ಲಭಿಸಿದೆ. ಅವುಗಳನ್ನು ಅರ್ಹರಿಗೆ ಹಂಚಿಕೆ ಮಾಡಲಾಗುವುದು. ವಿಆರ್ ಡಬ್ಲ್ಯೂ ಸಿಬ್ಬಂದಿಗಳಿಗೂ ವಾಹನ ದೊರಕಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು.

ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ತುಳಸಿ ಕರುಣಾಕರ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ತಾಪಂ ಸದಸ್ಯರಾದ ಸುಧಾಕರ್ ಲಾಯಿಲ, ಜೋಯೆಲ್ ಮೆಂಡೋನ್ಸಾ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕಿ ವಿಜಯ ಆರಂಬೋಡಿ, ತಾಪಂ.ಇಒ ಕುಸುಮಾಧರ್, ಸಿಡಿಪಿಒ ಪ್ರಿಯಾ ಆಗ್ನೇಸ್ ಮೊದಲಾದವರು ಇದ್ದರು.

ಅಂಗನವಾಡಿ ಮೇಲ್ವಿಚಾರಕಿ ರತ್ನಾವತಿ ಸ್ವಾಗತಿಸಿದರು. ತಾಪಂ ಸಂಯೋಜಕ ಜಯಾನಂದ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ತಾಲೂಕಿನ 13 ಮಂದಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ:

ವಿನಾಯಕ ರಾವ್ ಕನ್ಯಾಡಿ, ಲಕ್ಷ್ಮಣ ಗೌಡ ಚಾರ್ಮಾಡಿ, ಜಗದೀಶ್ ನಾಯ್ಕ್ ಕನ್ಯಾಡಿ, ಚಂದ್ರಶೇಖರ ಆರಂಬೋಡಿ, ಎಂ.ಪಿ. ಪ್ರಕಾಶ್ ರೆಖ್ಯಾ, ರಾಮಣ್ಣ ಪೂಜಾರಿ ಕುಕ್ಕೇಡಿ, ಶಾಲು ಜೋಸೆಫ್ ನೆರಿಯ, ನೇಮಣ್ಣ ಪೂಜಾರಿ ಬಾರ್ಯ, ಡೀಕಯ್ಯ ಗೌಡ ನಿಡ್ಲೆ, ಪಾವನ ಕೆ.ಎಸ್. ಲಾಯಿಲ, ಚಿರಂಜೀವಿ ನಾಳ, ಶಾಜಿ ಚಾರ್ಮಾಡಿ, ಜಯ ಪೂಜಾರಿ ಪೆರಾಡಿ.

error: Content is protected !!