ಬೆಳ್ತಂಗಡಿ: ಅಡಿಕೆ ಬೆಳೆಯನ್ನು ಕಾಡುತ್ತಿರುವ ಹಳದಿ ಎಲೆ ರೋಗದ ಸಮಸ್ಯೆಗೆ ಪರಿಹಾರವನ್ನು ಹಾಗೂ ಅಡಕೆ ಬೆಳೆಯೊಂದಿಗೆ ಇತರೆ ಪರ್ಯಾಯ/ಉಪ ಬೆಳೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮುಂಬರುವ ಬಜೆಟಿನಲ್ಲಿ ರೂ 25 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಲ್ಲಿ ದಕ್ಷಿಣ ಕನ್ನಡ,ಉಡುಪಿ,ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಯ ಶಾಸಕರ ನಿಯೋಗ ಮನವಿ ಸಲ್ಲಿಸಿತು.
ಈಗಾಗಲೇ ಎಲೆ ಹಳದಿ ರೋಗದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಅವರಿಗೆ ನೆರವಿನ ಅವಶ್ಯಕತೆ ಇದೆ.ಪರ್ಯಾಯ ಬೆಳೆಗಳ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗುತ್ತಿದೆ.ಪರ್ಯಾಯ ಬೆಳೆ ಲಾಭದಾಯಕವಾಗಿಲ್ಲವಾದರೂ ಅದನ್ನು ಬೆಳೆಯುವುದು ಅನಿವಾರ್ಯವಾಗಿದೆ.ಪರ್ಯಾಯ ಬೆಳೆಯನ್ನು ಸರ್ಕಾರ ಪ್ರೋತ್ಸಾಹಿಸಬೇಕು. ದ.ಕ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಅಡಿಕೆ ಹಳದಿ ರೋಗದಿಂದ ಭಾದಿತರಾದ ರೈತರಿಗೆ ಸಾಲ ಮನ್ನಾ ಮಾಡಬೇಕು, ಅದಲ್ಲದೇ ಇನ್ನಿತರ ಪರ್ಯಾಯ ಕೃಷಿ ಮಾಡುವವರಿಗೆ ಪ್ರೋತ್ಸಾಹ ನೀಡಿ ದೀರ್ಘಾವಧಿ ಸಾಲ ನೀಡಬೇಕು ಎಂಬ ಮನವಿ ಮಾಡಲಾಗಿದೆ.
ಮನವಿಗೆ ಸಕಾರತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಪ್ಯಾಕೇಜ್ ಘೋಷಿಸುವುದಾಗಿ ಭರವಸೆ ನೀಡಿದ್ದಾರೆ ಹಳದಿ ರೋಗ ನಿವಾರಣೆಗೆ ಉನ್ನತ ಮಟ್ಟದ ಸಂಶೋಧನೆಗೆ ಆದೇಶ ನೀಡುವುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ತೋಟಗಾರಿಕಾ ಸಚಿವ ಆರ್ ಶಂಕರ್, ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್ ಅಂಗಾರ, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಾಸರಾದ ಸಂಜೀವ ಮಠಂದೂರು, ಹರೀಶ್ ಪೂಂಜ,ರಾಜೇಶ್ ನಾಯ್ಕ್,ಕೆ.ಜಿ.ಬೋಪಯ್ಯ,ಆರಗ ಜ್ಙಾನೇಂದ್ರ ನಿಯೋಗದಲ್ಲಿದ್ದರು.