ಬೆಳ್ತಂಗಡಿ: ಅಡಕೆ ಹಾಗೂ ಕಾಳುಮೆಣಸು ಬೆಳೆಗಾರರಿಗೆ ಸಿಗುವ ಹವಾಮಾನ ಆಧಾರಿತ ಬೆಳೆ ವಿಮೆ ಜಮೆಯಾಗಿಲ್ಲ. ಹೆಚ್ಚಿನ ಕೃಷಿಕರ ಖಾತೆಗೆ ಹಣ ಜಮಾಯಾಗಿದ್ದರೂ ಕೆಲವು ಕೃಷಿಕರು ತಾಂತ್ರಿಕ ಎಡವಟ್ಟುಗಳಿಂದ ಮೊತ್ತ ಜಮೆಯಾಗದೆ ಇಲಾಖೆಗಳಿಗೆ ಅಲೆಯುವುದು ಅನಿವಾರ್ಯವಾಗಿದೆ. ಕಳೆದ ಮೂರು ವರ್ಷಗಳಿಂದ ಬೆಳೆ ವಿಮೆ ಕಂತು ಪಾವತಿಸಿದ್ದರೂ, ಎಲ್ಲಾ ದಾಖಲೆಗಳನ್ನು ಒದಗಿಸಿದ್ದರೂ ಇದುವರೆಗೂ ನನಗೆ ಯಾವುದೇ ಬೆಳೆ ವಿಮೆ ಬಂದಿಲ್ಲ ಎಂದು
ನಿವೃತ ಲೆಪ್ಟಿನೆಂಟ್, ಪ್ರಗತಿಪರ ಕೃಷಿಕ ಗಜಾನನ ವಝೆ ಆರೋಪಿಸಿದರು.
ಅವರು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಚಾರ ತಿಳಿಸಿದರು.
ಇಲಾಖೆಗಳಿಗೆ ಎರಡು ವರ್ಷದಿಂದ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಸಮರ್ಪಕ ಸ್ಪಂದನೆ ಕೂಡಾ ಸಿಕ್ಕಿಲ್ಲ. ವಿಮೆಯ ಕುರಿತು ಇಲಾಖೆ 15 ದಿನದೊಳಗೆ ಸರಿಪಡಿಸಬೇಕು. ಇಲ್ಲವಾದರೆ ಬೆಳ್ತಂಗಡಿ ತಾಲೂಕು ಕಚೇರಿಯ ಎದುರು ಧರಣಿ ಸತ್ಯಾಗ್ರಹ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಂಡಾಜೆ ಗ್ರಾಮದ ಸರ್ವೆ ನಂಬ್ರ 67/2ಎ ಯಲ್ಲಿ 2.18ಎಕ್ರೆ ಸ್ಥಳವಿದ್ದು, 2018-19ರಲ್ಲಿ ಒಂದು ಎಕ್ರೆಗೆ, 2019-20 ಹಾಗೂ 2020-21 ರಲ್ಲಿ ಎರಡು ಎಕ್ರೆಗೆ ಬೆಳೆ ವಿಮೆ ಮಾಡಿಸಿದ್ದೇನೆ. ಚಾರ್ಮಾಡಿ ಭಾಗದಲ್ಲಿ ಪ್ರವಾಹದಿಂದ, ಕೊಳೆರೋಗದಿಂದ ಕೃಷಿಗೆ ಹಾನಿಯಾಗಿದ್ದು, ಬೆಳೆ ವಿಮೆ ಮಾಡಿಸಿದ್ದರೂ ನನಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ಜಿಲ್ಲಾ ತೋಟಗಾರಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಸಮರ್ಪಕ ಉತ್ತರ ಸಿಕ್ಕಿಲ್ಲ. ನಾನು ವಿಮೆ ಹಣ ಕಟ್ಟಿದ ಸಿಎ ಬ್ಯಾಂಕಿನವರಿಗೂ ಸರಿಯಾದ ಮಾಹಿತಿ ಇಲ್ಲವಾಗಿದೆ. ಕಳೆದ ಎರಡು ವರ್ಷದಿಂದ ಬೆಳೆ ವಿಮೆಗಾಗಿ ಅಲೆದಾಟ ಮಾಡಿ ಸಾಕಾಗಿದೆ. ತಾಂತ್ರಿಕ ಮಾಹಿತಿ ಸರಿಯಾಗಿ ಸಲ್ಲಿಸಿದ್ದರೂ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಇಲ್ಲವಾದರೆ ನಮಗೆ ಉತ್ತರ ನೀಡುವವರು ಯಾರು.? ಹದಿನೈದು ದಿನದೊಳಗೆ ಸಮಸ್ಯೆಯನ್ನು ಸಂಬಂದಪಟ್ಟ ಇಲಾಖೆಯವರು ಸರಿಪಡಿಸಿಕೊಡಬೇಕು. ಇಲ್ಲವಾದರೆ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ದರಣಿ ಸತ್ಯಾಗ್ರಹ ನಡೆಸುವುದು ಅನಿವಾರ್ಯ ಎಂದು ತಿಳಿಸಿದರು.
ಈ ಸಂದರ್ಭ ಅಜಿತ್ ವಝೆ ಉಪಸ್ಥಿತರಿದ್ದರು.