ಬೆಳ್ತಂಗಡಿ: ಕಲೆಯಿಂದ ಮನಸ್ಸು ಅರಳುತ್ತದೆ, ಬುದ್ಧಿ ಬೆಳೆಯುತ್ತದೆ. ಮನೋವಿಕಾಸ, ಆತ್ಮೋನ್ನತಿ ಮತ್ತು ಮನೋರಂಜನೆಗಾಗಿ ಕಲೆ ಅಗತ್ಯ. ನಾಟ್ಯಶಾಸ್ತ್ರ ಎಲ್ಲಾ ಕಲೆಗಳಿಗೂ ಮಾತೃಸ್ಥಾನದಲ್ಲಿದೆ ಎಂದು ಖ್ಯಾತ ಚಲನಚಿತ್ರ ನಟ ಡಾ. ಶ್ರೀಧರ್ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ 18ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ನೀಡಿ ಮಾತನಾಡಿದರು.
ತಾನು ಆರಂಭದಲ್ಲಿ ಚಿತ್ರಕಲಾವಿದನಾಗಿ ನಂತರ ಸಂಗೀತ ಮತ್ತು ನೃತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ ಎಂದು ಹೇಳಿದ ಅವರು, ಚಿತ್ರಕಲೆಯಲ್ಲಿ ಭಾವ, ಸೌಂದರ್ಯ ಮತ್ತು ತಂತ್ರಗಾರಿಕೆ ಅಡಕವಾಗಿದೆ. ಚಿತ್ರಕಲೆಗೆ ವಸ್ತುವಿನ ಆಯ್ಕೆ ಮುಖ್ಯವಾಗಿದೆ. ಮನಸ್ಸಿನ ಕಲ್ಪನೆಗಳಿಗೆ ಪ್ರಜ್ಞೆಯನ್ನು ಸೇರಿಸಿದಾಗ ಆಕರ್ಷಕ ಚಿತ್ರ ರೂಪಿಸಬಹುದು. ನೋಡಿದ ಅನುಭವವನ್ನು ಅಭಿವ್ಯಕ್ತಗೊಳಿಸಲು ಚಿತ್ರಕಲೆ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ. ಕಲೆಯನ್ನು ಅನುಭವಿಸಿ, ಆಸ್ವಾದಿಸಿ, ಆನಂದಿಸಬೇಕು. ಚಿತ್ರಕಲೆಯಲ್ಲಿ ಧರ್ಮ, ಸಂಸ್ಕೃತಿ, ಸಾಮಾಜಿಕ ಪ್ರಜ್ಞೆ, ವಿಜ್ಞಾನ ಹಾಗೂ ಸಮಕಾಲೀನ ಸಮಾಜದ ಪ್ರತಿಬಿಂಬ ಎಲ್ಲವೂ ಸಮ್ಮಿಲನವಾಗಿರುತ್ತದೆ ಎಂದು ಡಾ. ಶ್ರೀಧರ್ ಅಭಿಪ್ರಾಯಪಟ್ಟರು. ಚಿತ್ರಕಲೆಯು ಮಕ್ಕಳ ಸುಪ್ತ ಪ್ರತಿಭೆಯ ದ್ಯೋತಕವಾಗಿದೆ. ಸ್ಪರ್ಧೆಯಲ್ಲಿ ಪುರಸ್ಕಾರ ಪಡೆಯುವುದಕ್ಕಿಂತಲೂ ಭಾಗವಹಿಸುವುದು ಮುಖ್ಯ ಎಂದು ಅವರು ಸಲಹೆ ನೀಡಿದರು.
ಧರ್ಮಸ್ಥಳದಲ್ಲಿ ಸ್ವಚ್ಛತೆ, ಪಾವಿತ್ರ್ಯತೆ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮರ್ಪಣಾ ಭಾವದ ಸೇವೆಯನ್ನು ಅವರು ಶ್ಲಾಘಿಸಿದರು. ಧರ್ಮಸ್ಥಳಕ್ಕೆ ಬಂದ ಕೂಡಲೇ ಇಲ್ಲಿನ ಪ್ರಶಾಂತ ಹಾಗೂ ಪವಿತ್ರ ಪರಿಸರದಿಂದ ಭಕ್ತರಲ್ಲಿ ಬಾಹ್ಯವಾಗಿ ಹಾಗೂ ಆಂತರಿಕವಾಗಿ ಸಾಕಷ್ಟು ಧನಾತ್ಮಕ ಪರಿಣಾಮಗಳಾಗುತ್ತವೆ. ಧರ್ಮಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಇಚ್ಛಾಶಕ್ತಿಯನ್ನು ಅವರು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ , ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ವಿಕಸನಕ್ಕಾಗಿ ಅಂಚೆ-ಕುಂಚ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಚಿತ್ರಕಲೆಯಲ್ಲಿ ಅನುಕರಣೆ ಸಲ್ಲದು. ವಿದ್ಯಾರ್ಥಿಗಳು ವೈವಿಧ್ಯಮಯ ಅಭಿರುಚಿ ಹಾಗೂ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಚಿತ್ರಕಲೆಯಲ್ಲಿ ಉನ್ನತ ಶಿಕ್ಷಣ ಮಾಡುವವರಿಗೆ ಧರ್ಮಸ್ಥಳದಿಂದ ವಿಶೇಷ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಹೆಗ್ಗಡೆಯವರು ತಿಳಿಸಿದರು. ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಬೆಂಗಳೂರಿನ ಖ್ಯಾತ ಚಿತ್ರ ಕಲಾವಿದ ಬಾಗೂರು ಮಾರ್ಕಾಂಡೇಯ ಹಾಗೂ ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರಿಂದ ಕುಂಚ-ಗಾನ-ನೃತ್ಯ ವೈಭವ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ಹದಿನೆಂಟನೇ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯಲ್ಲಿ ವಿಜೇತರು.
ಪ್ರಾಥಮಿಕ ಶಾಲಾ ವಿಭಾಗ
ಪ್ರಾಥಮಿಕ ಶಾಲಾ ವಿಭಾಗ: ಕುಮಾರಿ ಪ್ರತಿಷ್ಠಾ ಶೇಟ್, ವಿದ್ಯೋದಯ ಪಬ್ಲಿಕ್ ಶಾಲೆ, ಉಡುಪಿ, (ಪ್ರಥಮ)
ಕುಮಾರಿ ಶ್ರೀಮಯಿ, ಸಿ. ಭಾರತೀಯ ವಿದ್ಯಾಭವನ ಶಾಲೆ, ವಿಜಯನಗರ ಮೈಸೂರು (ದ್ವಿತೀಯ)
ಕುಮಾರಿ ಲಕ್ಷ್ಯ, ಪಿ.ಎನ್. ಭಾರತೀಯ ವಿದ್ಯಾಭವನ ಶಾಲೆ, ಕೊಡಗು ವಿದ್ಯಾಲಯ, ಮಡಿಕೇರಿ (ತೃತೀಯ)
ಪ್ರೌಢಶಾಲಾ ವಿಭಾಗ
ಪ್ರಸಾದ ಶ್ರೀಧರ ಮೇತ್ರಿ, ಕಾತ್ಯಾಯಿನಿ ಪ್ರೌಢಶಾಲೆ, ಆವರ್ಸಾ, ಅಂಕೋಲಾ (ಪ್ರಥಮ) ಕುಮಾರಿ ಶ್ರೇಯಾ ಆರ್. ದೇಶಪಾಂಡೆ, ಸೈಂಟ್ ಜೋಸೆಫ್ ಶಾಲೆ, ಜಯಲಕ್ಷ್ಮೀಪುರಂ ಮೈಸೂರು (ದ್ವಿತೀಯ)
ಕುಮಾರಿ ಪ್ರತೀಕ್ಷಾ ಮರಕಿನಿ, ಪೂರ್ಣಪ್ರಜ್ಞ ಪ್ರೌಢಶಾಲೆ, ಸದಾಶಿವ ನಗರ, ಬೆಂಗಳೂರು (ತೃತೀಯ)
ಕಾಲೇಜು ವಿಭಾಗ
ಕುಮಾರಿ ಅನನ್ಯ ದೀಪಕ್ ನಾಯಕ್, ಸರ್ಕಾರಿ ಪದವಿಪೂರ್ವ ಕಾಲೇಜು, ಕಾರವಾರ (ಪ್ರಥಮ)
ಅಖಿಲೇಶ್ ನಾಗೇಶ ನಾಯ್ಕ, ಶ್ರೀ ಸತ್ಯಸಾಯಿ ಪದವಿಪೂರ್ವ ಕಾಲೇಜು, ಅಳಿಕೆ (ದ್ವಿತೀಯ), ಜಯಪ್ರಕಾಶ್, ವಿವೇಕಾನಂದ ಕಾಲೇಜು, ಪುತ್ತೂರು (ತೃತೀಯ)
ಸಾರ್ವಜನಿಕ ವಿಭಾಗ:
ದಿನೇಶ ದೇವರಾಯ ಮೇತ್ರಿ, ಆವರ್ಸಾ, ಅಂಕೋಲಾ, (ಪ್ರಥಮ), ಲಕ್ಷ್ಮೀಕಾಂತ ವಾಸುದೇವ ನಾಯ್ಕ, ಆವರ್ಸಾ, ಅಂಕೋಲಾ (ದ್ವಿತೀಯ), ರಾಜೇಶ್, ಡಿ.ಎಸ್. ವಾದಿರಾಜ ನಗರ, ಮಂಗಳೂರು (ತೃತೀಯ)
ಸ್ಪರ್ಧೆಯ ವಿಷಯ: ಸಮುದ್ರ ಕಿನಾರೆ.
ನಾಲ್ಕು ವಿಭಾಗಗಳಿಂದ ಒಟ್ಟು 16,230 ಸ್ಪರ್ಧಾಳುಗಳು ಅಂಚೆ-ಕುಂಚ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೆಶಕ ಡಾ.ಐ.ಶಶಿಕಾಂತ್ ಜೈನ್ ಸ್ವಾಗತಿಸಿದರು.ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ವಂದಿಸಿದರು.ಶಿಕ್ಷಕ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.