ಉಜಿರೆ: ಶ್ರೀವ್ಯಾಘ್ರ ಚಾಮುಂಡಿ ದೈವಸ್ಥಾನ ಕೋರ‍್ಯಾರು ಗುತ್ತು, ಮಾಚಾರು ಇದರ ಪ್ರತಿಷ್ಠಾ ಮಹೋತ್ಸವ ಹಾಗೂ ವರ್ಷಾವಧಿ ದೊಂಪದ ಬಲಿ ಉತ್ಸವವು ಫೆ.16 ಮತ್ತು ಫೆ.17 ರಂದು ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮೊಕ್ತೇಸರ ಜಿ. ಗೋಪಾಲಕೃಷ್ಣ ಉಪಾಧ್ಯಾಯ ಹೇಳಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಾಲೂಕಿನಲ್ಲಿ ಬಂಗರಸರ ಸೀಮೆಯ ಕಳಿಯ ಅರಸುರಗಳ ವ್ಯಾಪ್ತಿಯ ಬೆಳಾಲು ಮಾಗಣೆಯಗೆ ಸೇರಿದ ಪ್ರತಿಷ್ಠಿತ ಗುತ್ತುಗಳಲ್ಲಿ ಒಂದು ಕೋರ‍್ಯಾರುಗುತ್ತು. ಈ ಗುತ್ತಿನ ಅಧಿಕಾರಿಗಳಾಗಿ ಜೈನ ಮನೆತನದವರಿದ್ದರು. ನಂತರದ ದಿನಗಳಲ್ಲಿ ಆ ಮನೆತನದ ಅವನತಿಯಾಗಿ ಗುತ್ತಿನ ಮನೆ, ಆಸ್ತಿ, ಇತ್ಯಾದಿ ಪರಹಸ್ತಗತವಾದವು. ಗುತ್ತಿನ ಚಾವಡಿಯಲ್ಲಿ ಹಾಗೂ ಹೊರಗೆ ಸುಮಾರು 200 ವರ್ಷಗಳಿಂದ ಆರಾಧಿಸಲ್ಪಡುತ್ತಿದ್ದ ದೈವ ಮತ್ತು ನಾಗ ಸಾನಿಧ್ಯಗಳು ಉಪೇಕ್ಷೆಗೊಳಗಾದವು. ಆ ದೆಸೆಯಿಂದ ಗುತ್ತಿನಲ್ಲಿದ್ದವರಿಗೆ ಮಾತ್ರವಲ್ಲದೆ ಪರಿಸರ ಸಕಲರಿಗೂ ದೋಷಗಳ ಅನುಭವವುಂಟಾಗಿ ಆ ಸಾನಿಧ್ಯಗಳನ್ನು ಇದ್ದಲ್ಲಿಗೆ ಗುಡಿ, ಕಟ್ಟೆ ಇತ್ಯಾದಿಗಳನ್ನು ನಿರ್ಮಿಸಿ ಕಾಲಕಾಲಕ್ಕೆ ಆರಾಧನೆ ಮಾಡುತ್ತಾ ಬಂದರು ಇದರಿಂದ ದೋಷಗಳು ಪರಿಹಾರವಾದಂತೆ ಕಂಡರೂ ಎಲ್ಲಾ ಸಾನಿಧ್ಯಗಳ ಪೂರ್ಣಾನುಗ್ರಹ ಪಡೆಯಲು ಏನು ಮಾಡಬೇಕೆಂಬ ತೀರ್ಮಾನಕ್ಕಾಗಿ ಸ್ಥಳದಲ್ಲಿಯೇ ದೈವತಜ್ಞರಿಂದ ಪ್ರಶ್ನೆ ಇಡಿಸಿ ಚಿಂತಿಸಿದಾಗ ಎಲ್ಲಾ ದೈವ ಸಾನಿಧ್ಯಗಳನ್ನು ಸಮಗ್ರ ಜೀಣೋದ್ಧಾರ ಮಾಡಿ ಪುನರ್ ಸ್ಥಾಪಿಸಬೇಕೆಂದು ಕಂಡು ಬಂತು. ಈ ಹಿನ್ನಲೆಯಲ್ಲಿ ಗುತ್ತಿನ ಮನೆಯ ಚಾವಡಿಯಲ್ಲಿ ಆರಾಧಿಸಲ್ಪಡುತ್ತಿದ್ದ ವ್ಯಾಘ್ರ ಚಾಮುಂಡಿ, ಪಂಜುರ್ಲಿ, ಧೂಮವತಿ, ಉಳ್ಳಾಕುಲು ಹಾಗೂ ರಕ್ತೇಶ್ವರಿ ದೈವಗಳಿಗೆ ನೂತನ ಚಾವಡಿ ನಿರ್ಮಿಸಿ ಅದರಲ್ಲಿಯೇ ಸ್ಥಾನಕಲ್ಪನೆ ಮಾಡುವುದಾಗಿಯೂ ಕಲ್ಕುಡ-ಕಲ್ಲುರ್ಟಿಯನ್ನು ಪ್ರತ್ಯೇಕ ಸ್ಥಾನದಲ್ಲಿ ಪ್ರತಿಷ್ಠಾಪಿಸಿ ಹಾಗೂ ಬಿರ್ಮೆರು ಮತ್ತು ಗುಳಿಗ ದೈವವನ್ನು ಪ್ರತ್ಯೇಕ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿ, ಆರಾಧಿಸಿಕೊಂಡು ಬರುವುದಾಗಿ ಜೀಣೋದ್ಧಾರದ ನೀಲನಕ್ಷೆಯನ್ನು ತಯಾರಿಸಿ ಇದೀಗ ಬಹುತೇಕ ಪೂರ್ಣಗೊಂಡಿದೆ ಎಂದರು.
ಕೋರ‍್ಯಾರು ಪರಿಸರದ ಭಕ್ತಾಧಿಗಳು ಸೇರಿ ತಜ್ಞರ ಮಾರ್ಗದರ್ಶನದಲ್ಲಿ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ದೈವಗಳ ಚಾವಡಿಯ ಜೀಣೋದ್ಧಾರದ ಕಾರ್ಯವನ್ನು ಕೈಗೊಂಡು ಇದೀಗ ಜೀಣೋದ್ಧಾರ ಕೆಲಸಗಳು ಸರ್ವರ ಸಹಕಾರದಿಂದ ಸಂಪೂರ್ಣ ಗೊಂಡಿದೆ. ಸ್ಥಳೀಯರ ಶ್ರಮದಾನದಿಂದ ಅತೀಹೆಚ್ಚು ಕಾಮಗಾರಿ ನಡೆದಿದೆ ಎಂದರು.
ಫೆ.15ರಂದು ಬೆಳಿಗ್ಗೆ 9 ಕ್ಕೆ ಹಸಿರುವಾಣಿ ಸಮರ್ಪಣೆ, ಫೆ.16 ರಂದು ಬೆಳಿಗ್ಗೆ 8 ರಿಂದ ತೋರಣ ಮಹೂರ್ತ, 9 ಕ್ಕೆ ಕಛೇರಿ ಉದ್ಘಾಟನೆ, ಅನ್ನಛತ್ರ ಉದ್ಘಾಟನೆ, ಹಸಿರುವಾಣಿ ಉಗ್ರಾಣ ಉದ್ಘಾಟನೆ, 10 ಗಂಟೆಗೆ ಹಸಿರುವಾಣಿ ಸಮರ್ಪಣೆ, ಕೋರ‍್ಯಾರು ನಾಗಬನದಲ್ಲಿ ಆಶ್ಲೇಷ ಬಲಿ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 8 ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಫೆ.17 ರಂದು ಬೆಳಿಗ್ಗೆ 8.44 ಕ್ಕೆ ಬ್ರಹ್ಮರು, ರಕ್ತೇಶ್ವರಿ, ವ್ಯಾಘ್ರಚಾಮುಂಡಿ, ಪಂಜುರ್ಲಿ, ಉಳ್ಳಾಕ್ಲು, ಧೂಮವತಿ, ಕಲ್ಲುರ್ಟಿ-ಕಲ್ಕುಡ ಹಾಗೂ ಗುಳಿಗ ದೈವಗಳ ಪ್ರತಿಷ್ಠೆ, ಬೆಳಿಗ್ಗೆ ಗಂಟೆ 11ರಿಂದ ಚಂಡಿಕಾ ಯಾಗ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 8 ರಿಂದ ದೈವಗಳ ನೇಮೋತ್ಸವ ನಡೆಯಲಿದೆ.
ಫೆ.18 ರಂದು ಬೆಳಿಗ್ಗೆ ಗಂಟೆ 11ಕ್ಕೆ ವರ್ಷಾವಧಿ ಪರ್ವ, ತಂಬಿಲ ಸೇವೆ, ಸಂಜೆ 5 ಗಂಟೆಗೆ ದೊಂಪದಬಲಿ ಉತ್ಸವಕ್ಕೆ ಭಂಡಾರ ಹೊರಡುವುದು, ರಾತ್ರಿ ೮ರಿಂದ ನೇಮೋತ್ಸವ, ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಅಣ್ಣಿ ಪೂಜಾರಿ ಕೋರ‍್ಯಾರು ಪಡ್ಪು, ಜೀರ್ಣೋದ್ಧಾರ ಸಮಿತಿಯ ಜೊತೆ ಕಾರ್ಯದರ್ಶಿ ಕೇಶವ ಗೌಡ, ಪ್ರತಿಷ್ಠಾ ಮಹೋತ್ಸವ ಪ್ರಧಾನ ಸಂಚಾಲಕ ರಾಮಯ್ಯ ಗೌಡ ಮಾಚಾರು, ಉಪಸ್ಥಿತರಿದ್ದರು.