ಉಜಿರೆ: ತ್ಯಾಗ ಮತ್ತು ಸೇವೆಯೇ ಯಶಸ್ಸಿನ ಮೆಟ್ಟಿಲು. ಸಂಕಲ್ಪ ಮಾಡಿದರೆ ಸರಿಯಾದ ದಾರಿಯಲ್ಲಿ ಹೋಗಲು ಸಾಧ್ಯ. ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು, ಸಂವಹನ ಕೌಶಲವನ್ನು ಬೆಳೆಸಿಕೊಳ್ಳಬೇಕು ಎಂದು ಲೋಕ ಸೇವಾ ಆಯೋಗದ ಮಾಜಿ ಸದಸ್ಯ ಪ್ರೊ. ಎಂ.ನಾಗರಾಜ ಹೇಳಿದರು. ಅವರು ಉಜಿರೆಯ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದಲ್ಲಿ ಯೋಗ ಪದವಿಯ 32ನೇ ತಂಡ ಹಾಗು ಸ್ನಾತಕೋತ್ತರ ಪದವಿಯ 11ನೇ ತಂಡದ ನೂತನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಸ್ವಾಗತ, “ಶಿಷ್ಯೋಪನಯನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಮತ್ತು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕಾರ ಕೊಡುವ ರೀತಿ ಸ್ತುತ್ಯಾರ್ಹವಾಗಿದೆ. ಸಾಮಾಜಿಕ ಕಳಕಳಿಯಿಟ್ಟುಕೊಂಡು ಎಲ್ಲ ಜಾತಿ ಧರ್ಮದವರಿಗೆ ಮಾಡುವ ಕರ್ತವ್ಯವೇ ಸೇವೆಯಾಗಿದೆ ಎಂದರು.
ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಎಲ್ಲ ಮೂಲಭೂತ ಸೌಲಭ್ಯಗಳಿವೆ. ಎಲ್ಲ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್. ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ.ಯಶೋವರ್ಮ ಮಾತನಾಡಿ, ತರಗತಿಯಲ್ಲಿ ಶಿಕ್ಷಕರು ಕೇವಲ ಪರೀಕ್ಷೆಗಾಗಿ ಕಲಿಸಿದರೆ, ವಿದ್ಯಾರ್ಥಿಗಳು ಅದರ ಹೊರತಾಗಿ ಎಲ್ಲ ವಿಚಾರಗಳ ಅಧ್ಯಯನಕ್ಕೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ಈ ಮೂಲಕ ಜ್ಞಾನ ಸಂಪತ್ತನ್ನು ಕಲಿಕೆಯ ಜತೆಗೆ ವೃದ್ಧಿಸಿಕೊಳ್ಳಬೇಕು. ನೂತನ ಶಿಕ್ಷಣ ನೀತಿಗನುಸಾರ ಪಠ್ಯಪುಸ್ತಕಗಳಿಂದ ಹೊರಬಂದು ಇತರ ಗ್ರಂಥ, ಪುಸ್ತಕಗಳ ಅಧ್ಯಯನದಿಂದ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಿ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾಲೇಜು ವತಿಯಿಂದ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆ ವ್ಯಾಪ್ತಿಯ ಮಂಗಳೂರು ವಿ.ವಿ.ಯ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಬಿ.ಯಶೋವರ್ಮ ಅವರನ್ನು ಗೌರವಿಸಲಾಯಿತು. ಯೋಗ ವಿಭಾಗದ ಡೀನ್ ಡಾ. ಸುಜಾತ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಜ್ಯೋಸ್ನಾ ನಿರೂಪಿಸಿ, ಡೀನ್ ಡಾ. ಗೀತಾ ಶೆಟ್ಟಿ ವಂದಿಸಿದರು.