ಮುಂಡಾಜೆ: ಶಾರದಾನಗರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಅಂಗವಾಗಿ ಚಂಡಿಕಾಯಾಗ ಮತ್ತು ಶ್ರೀರಂಗ ಪೂಜೆ ನಡೆಯಿತು. ವೇದಮೂರ್ತಿ ಪಂಜೆರ್ಪು ಸುರೇಶ್ ಐತಾಳರ ನೇತೃತ್ವದಲ್ಲಿ ಪೂರ್ವಾಹ್ನ ದೇವತಾ ಪ್ರಾರ್ಥನೆ, ಗಣಹೋಮ, ಶ್ರೀ ದುರ್ಗಾ ಪರಮೇಶ್ವರೀ ದೇವರಿಗೆ ಪಂಚಾಮೃತತಾಭಿಷೇಕ, ನವಕುಂಭ ಕಲಶಾಭಿಷೇಕ ಮೊದಲಾದ ಧಾರ್ಮಿಕ ವಿಧಿ- ವಿಧಾನಗಳು ನಡೆದವು.
ಚಂಡಿಕಾಯಾಗ, ದೈವಗಳಿಗೆ ಪರ್ವಾರಾಧನೆ, ಕಟೀಲು ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ, ದೇವರ ಮಹಾಪೂಜೆ, ಅನ್ನದಾನ ನಡೆಯಿತು.
ಸ್ಥಳೀಯ ದುರ್ಗಾಪರಮೇಶ್ವರೀ ಭಜನಾ ಸಂಘದಿಂದ ಭಜನೆ, ಶ್ರೀ ದೇವರಿಗೆ ರಂಗ ಪೂಜೆ, ಕಟೀಲು ಮೇಳದ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ರಾತ್ರಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಸೇವೆ ಬಯಲಾಟ ಪ್ರದರ್ಶನಗೊಂಡಿತು.
ದೇವಳದ ಆಡಳಿತ ಮೊಕ್ತೇಸರ ಅಡೂರು ಗೋಪಾಲಕೃಷ್ಣ ರಾವ್, ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಪ್ರಧಾನ ಅರ್ಚಕ ಸತ್ಯನಾರಾಯಣ ಹೊಳ್ಳ ಕಾನರ್ಪ, ಅರ್ಚಕ ರಾಜಶೇಖರ ಭಟ್, ಕಾರ್ಯದರ್ಶಿ ಶೀನಪ್ಪ ಗೌಡ, ಕೋಶಾಧಿಕಾರಿ ಚೆನ್ನಕೇಶವ ಅರಸಮಜಲು, ದೇವಳದ ಸಮಿತಿ ಸದಸ್ಯರು, ಭಜನಾಮಂಡಳಿ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಭಕ್ತರು ಭಾಗವಹಿಸಿದ್ದರು.