ಧರ್ಮಸ್ಥಳದ ಅಭಿವೃದ್ಧಿಯ ಶಕೆ ವಿಶ್ವಕ್ಕೆ ಮಾದರಿ: ವಸತಿ ಸಚಿವ ವಿ. ಸೋಮಣ್ಣ ಹೇಳಿಕೆ: ಸರ್ವಧರ್ಮ ಸಮ್ಮೇಳನದ 88ನೇ ಅಧಿವೇಶನ

 

ಧರ್ಮಸ್ಥಳ: ಅಭಿವೃದ್ಧಿಯ ಎಲ್ಲ ರಂಗಗಳಲ್ಲೂ ಕೆಲಸ ಮಾಡಿರುವ ಧರ್ಮಸ್ಥಳ ಈ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಆದ ಹೊಸ ವಿಧಾನ ಅನುಸರಿಸುವ ಮೂಲಕ ಧರ್ಮಸ್ಥಳ ಮಾದರಿಯನ್ನೇ ಸೃಷ್ಟಿಸಿದೆ. ಈ ಮಾದರಿ ನಾಡಿನ ಅಭಿವೃದ್ಧಿಗೆ ಹೊಸ ಶಕೆಯನ್ನೇ ನೀಡಿದೆ ಎಂದು ರಾಜ್ಯ ವಸತಿ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು.

ಧರ್ಮಸ್ಥಳ ಲಕ್ಷದೀಪೋತ್ಸವ ಅಂಗವಾಗಿ ಅಮೃತವರ್ಷಿಣಿ ಸಭಾಭವನದಲ್ಲಿ ಭಾನುವಾರ ಸಂಜೆ ನಡೆದ ಸರ್ವಧರ್ಮ ಸಮ್ಮೇಳನದ 88ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳದ ಪ್ರಭೆ ಜಗತ್ತಿಗೆ ಬೆಳಕು ನೀಡಿದೆ. ಭಕ್ತರ ಪಾಲಿಗೆ ಇಲ್ಲಿ ಸೂಜಿಗಲ್ಲಿನ ಆಕರ್ಷಣೆ ಇದೆ. ಬೆಳಕು ಎಂಬ ಶಬ್ದಕ್ಕೆ ಇನ್ನೊಂದು ಅನ್ವರ್ಥವೇ ಧರ್ಮಸ್ಥಳ ಎಂಬುದಾಗಿದೆ. 800 ವರ್ಷಗಳ ಇತಿಹಾಸದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಈ ಕ್ಷೇತ್ರ ಬೆಳಕು ನೀಡಿದೆ. ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿಗಳ ಮೇಲೆ ಅವಿಚ್ಛಿನ್ನ ಅಭಿರುಚಿ ಧರ್ಮಾಧಿಕಾರಿಗಳಿಗಿದೆ ಎಂದು ಹೇಳಿದ ಅವರು, ಮಾವನ ಧರ್ಮ, ವಿಶ್ವಮಾನವ ಧರ್ಮದ ನಮ್ಮ ಪರಂಪರೆ ಇಲ್ಲಿ ಬೆಳಗುತ್ತಿದೆ ಎಂದರು.

ಡಾ.ಹೆಗ್ಗಡೆಯವರಿಗೆ ಭಾರತರತ್ನ ಸಿಗಲಿ:
ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಸಿಗಬೇಕು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು. ರಾಜ್ಯ ಪ್ರಶಸ್ತಿ ಡಾ. ಹೆಗ್ಗಡೆಯವರಿಗೆ ಪ್ರಾಪ್ತವಾಗಿದೆ. ಈ ಮೂಲಕ ಆ ಪ್ರಶಸ್ತಿಗೆ ಗೌರವ ಸಿಕ್ಕಿದೆ. ಆದರೆ ಹೆಗ್ಗಡೆಯವರ ಸೇವೆ ಮತ್ತು ಧರ್ಮ ಕಾರ್ಯಗಳಿಗೆ ಸಹಜವಾಗಿ ಭಾರತ ರತ್ನ ಪ್ರಶಸ್ತಿ ಸಿಗಬೇಕು. ಈ ಬಗ್ಗೆ ನಾನು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದೇನೆ ಎಂದರು.

ದೀವಿಗೆಯಾಗಲಿ ಧರ್ಮ ಸಮ್ಮೇಳನ:
ಧರ್ಮದ ಬಗೆಗಿನ ಎಲ್ಲ ಸಂಕುಚಿತತೆಗಳು ಅಳಿದು, ಧರ್ಮ ಸಮ್ಮೇಳನ ಧರ್ಮ ದೀವಿಗೆಯಾಗಬೇಕು. ಧರ್ಮದ ಹೆಸರಿನಲ್ಲಿ ನಡೆಯುವ ಅಹಿತಕರ ಘಟನೆಗೆ ನಿಜಕ್ಕೂ ಧರ್ಮ ಕಾರಣವಲ್ಲ. ಧರ್ಮವನ್ನು ಅರ್ಥ ಮಾಡಿಕೊಳ್ಳದ ಜನ ಕಾರಣ. ಧರ್ಮದ ಹಾದಿಯಲ್ಲಿ ನಡೆಯದಿರುವುದೇ ಕಾರಣ ಎಂದು ವಿಶ್ಲೇಷಿಸಿದರು.

ಧರ್ಮಕ್ಕೆ ಹೊಸ ವ್ಯಾಖ್ಯಾನ ಪ್ರಾಪ್ತ:
ಸ್ವಾಗತ ಭಾಷಣ ಮಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಸಮಾಜದಲ್ಲಿ ಮೇಲು- ಕೀಳು ವ್ಯತ್ಯಾಸ ಮೊದಲಿಗಿಂತ ಈಗ ತುಂಬಾ ಕಡಿಮೆಯಾಗಿದೆ. ಒಂದು ಜಾತಿಯವರು ಶ್ರೇಷ್ಠರು ಇನ್ನೊಂದು ಜಾತಿಯವರು ಕನಿಷ್ಠರು ಎಂಬಂತಹ ಭೇದಭಾವ ದೂರವಾಗಿದೆ. ಧರ್ಮಕ್ಕೆ ಹೊಸ ವ್ಯಾಖ್ಯಾನ ಪ್ರಾಪ್ತವಾಗಿದೆ ಎಂದು ನುಡಿದರು.
ಧರ್ಮ ಧರ್ಮಗಳ ಮಧ್ಯೆ ಭೇದ, ಪುರುಷ- ಸ್ತ್ರೀಯರ ಮಧ್ಯೆ ಇದ್ದಂತಹ ಭೇದಗಳು ಕಡಿಮೆಯಾಗಿದೆ. ಹೋಟೇಲು, ಶಾಲೆ, ಕಾಲೇಜು, ಆಸ್ಪತ್ರೆ, ಸಾರ್ವಜನಿಕ ಸಾರಿಗೆ, ಕಚೇರಿ, ಸೇನೆಗಳಲ್ಲಿ ಹೀಗೆ ಎಲ್ಲಾ ವೃತ್ತಿಗಳಲ್ಲಿ ಜಾತಿ- ಮತದ ಭೇದಭಾವಗಳು ಕಡಿಮೆಯಾಗಿವೆ. ಸಮಾನತೆ ಎಂಬುದು ಧರ್ಮ ವಿರೋಧ ಪ್ರಜ್ಞೆ ಅಲ್ಲ. ಆದ್ದರಿಂದ ಧರ್ಮದ ಹೊಸ ವ್ಯಾಖ್ಯಾನದಲ್ಲಿ, ಪ್ರತಿಯೊಂದು ಧರ್ಮಕ್ಕೆ ಸಂಬಂಧಪಟ್ಟಂತಹ ಎಲ್ಲರಿಗೂ ಸರಿಸಮಾನವಾಗಿ, ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವ ಅವಕಾಶ ನಿರ್ಮಾಣವಾಗಿದೆ ಎಂದವರು ನುಡಿದರು.

ಶ್ರೀಕ್ಷೇತ್ರ ಧರ್ಮಸ್ಥಳವೆಂದರೆ ವಿವಿಧ ಜಾತಿ ಮತ ಪಂಥಗಳ ಸಂಕುಚಿತ ಎಲ್ಲೆಯನ್ನು ಮೀರಿ ವಿಶಾಲ ವಿಶ್ವದ ಸರ್ವ ಜನಾಂಗಗಳ ಹಿತವನ್ನು ಬಯಸುವ ಮಾನವ ಧರ್ಮವೇ ಶ್ರೇಷ್ಠವೆಂದು ಬಗೆದು ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕ್ಷೇತ್ರ. ಧರ್ಮದಲ್ಲಿ ಸತ್ವವಿದೆ, ಸತ್ಕಾರ್ಯಕ್ಕೆ ಪ್ರೇರಣೆ ಇದೆ. ಹೊರತಾಗಿ ದುಷ್ಕಾರ್ಯಗಳಿಗಲ್ಲ. ಧಾರ್ಮಿಕ ತಳಹದಿಯಲ್ಲಿ ಕೈಗೊಳ್ಳುವ ಕರ್ಮಗಳು ಸತ್ಪರಿಣಾಮವನ್ನೇ ಉಂಟು ಮಾಡುತ್ತದೆ. ಧರ್ಮವು ಎಲ್ಲರನ್ನು ಒಗ್ಗೂಡಿಸುವ ಸಾಧನ. ಧರ್ಮ ಸಮನ್ವಯತೆಗೆ ಕೊರೊನಾ ವ್ಯಾಧಿ ಉತ್ತಮ ಉದಾಹರಣೆಯಾಗಿದೆ. ಈ ರೋಗದಿಂದ ಭೀತಿಗೊಳಗಾದ ಎಲ್ಲರೂ ಸಂಯಮಿಗಳಾಗಿದ್ದಾರೆ. ಅನೇಕರು ಈ ರೋಗ ಬಾರದಂತೆ ತಮ್ಮ ಆಹಾರ ವಿಹಾರ ವಿಚಾರಗಳಲ್ಲಿ ಎಚ್ಚರಿಕೆ ವಹಿಸಿದ್ದಾರೆ. ಧರ್ಮದ ಮರ್ಮ ಇರುವುದು ಆಚರಣೆಯಲ್ಲಿ ಡಾ. ಹೆಗ್ಗಡೆ ವ್ಯಾಖ್ಯಾನಿಸಿದರು.

5 ಲಕ್ಷ ಸ್ವಸಹಾಯ ಸಂಘ ರಚನೆ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ರಾಜ್ಯದಲ್ಲಿ 5 ಲಕ್ಷ ಸ್ವ-ಸಹಾಯ ಸಂಘಗಳನ್ನು ರಚಿಸಿದ್ದು, ೪೩ ಲಕ್ಷ ಸದಸ್ಯರಿದ್ದಾರೆ. ಸ್ವ-ಸಹಾಯ ಸಂಘಗಳ ಮೂಲಕ ಬ್ಯಾಂಕುಗಳಿಂದ 13 ಕೋಟಿ ರೂ. ಹಣ ವ್ಯವಹಾರಕ್ಕೆ ಒದಗಿಸಲಾಗಿದೆ. 20 ಲಕ್ಷ ಮಂದಿ ಜೀವನ ಮಧುರ ವಿಮೆ ಮಾಡಿದ್ದಾರೆ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಮ್ಮ ಭಾಷಣದಲ್ಲಿ ಹೇಳಿದರು.

ಧರ್ಮೋತ್ಥಾನ ಟ್ರಸ್ಟ್ ಮೂಲಕ 270ಕ್ಕೂ ಹೆಚ್ಚು ದೇವಾಲಯಗಳ ಪುನರ್ ನಿರ್ಮಾಣ ಮಾಡಲಾಗಿದೆ. ಕ್ಷೇತ್ರದಿಂದ ನೇರವಾಗಿ ಕಳೆದ ಒಂದು ವರ್ಷದಲ್ಲಿ 1135 ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಹಾಯಹಸ್ತ ನೀಡಲಾಗಿದೆ. ರುಡ್‌ಸೆಟ್ ಸಂಸ್ಥೆ ಮೂಲಕ 587 ತರಬೇತಿ ಕೇಂದ್ರಗಳಲ್ಲಿ 4 ಲಕ್ಷಕ್ಕೂ ಮಂದಿಗೆ ಸ್ವಉದ್ಯೋಗ ತರಬೇತಿ ನೀಡಲಾಗಿದೆ. ಈ ವರ್ಷ ಕ್ಷೇತ್ರದಿಂದ ನೇರವಾಗಿ ವೈದ್ಯಕೀಯ, ಸಾಮಾಜಿಕ, ಶೈಕ್ಷಣಿಕ ಸಹಾಯವಾಗಿ ರೂ.71 ಕೋಟಿ 23 ಲಕ್ಷ ಕೈಧರ್ಮ ನೀಡಲಾಗಿದೆ ಎಂದರು.

ಧರ್ಮ ತಪ್ಪುತ್ತಿದ್ದಾನೆ ಮನುಷ್ಯ:
ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಕನಕಗಿರಿ ಜೈನ ಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳದಲ್ಲಿ ನಿಂತು ಧರ್ಮದ ಬಗ್ಗೆ ಮಾತನಾಡುವುದು ಸೂರ್ಯನ ಎದುರು ಕುಳಿತು ಬೆಳಕು ಹುಡುಕಿದಂತೆ. ವಿಶ್ವಧರ್ಮದ ಸಂದೇಶ ಇಲ್ಲಿ ನಿರಂತರ ಪ್ರವಹಿಸುತ್ತಿದೆ. ಆಚರಣೆ ಮತ್ತು ಪ್ರಯೋಗದ ಮೂಲಕ ಜಗತ್ತಿಗೆ ಧರ್ಮದ ಪರಿಚಯ ಮಾಡಿದೆ. ಸಕ್ಕರೆ ಎಲ್ಲಿ ತಿಂದರೂ ಅದು ಸಿಹಿಯಾಗಿಯೇ ಇರುತ್ತದೆ. ಅದೇ ರೀತಿ ಧರ್ಮ ಯಾವುದಾದರೂ ಧರ್ಮಾಚಾರ್ಯರ ಸಂದೇಶ ಒಂದೇ ಆಗಿದೆ. ನೋಡುವ ರೀತಿ ಮಾತ್ರ ಬೇರೆ ಬೇರೆಯಾಗಿದೆ ಎಂದರು.

ಪ್ರಕೃತಿಯ ಪ್ರತಿಯೊಂದು ಚರಾಚರ ವಸ್ತುಗಳಲ್ಲೂ ಧರ್ಮವಿದೆ. ವಸ್ತುವಿನ ಮೂಲ ಗುಣ ಯಾವುದೋ ಅದು ಧರ್ಮ. ಆದರೆ ಇಂದು ಮನುಷ್ಯ ಮಾತ್ರ ಮೂಲ ಗುಣ ಮರೆತು ಧರ್ಮ ಕೈಬಿಡುತ್ತಿದ್ದಾನೆ. ಧರ್ಮದ ವಿಚಾರಗಳು ಮಾನವನಿಂದ ದೂರವಾಗದಂತೆ ನೋಡಿಕೊಳ್ಳಬೇಕಿದೆ ಎಂದರು.

ಬೆಂಗಳೂರಿನ ಕೇಶವ ಮಳಗಿ ಅವರು ಕಬೀರನ ವಿಚಾರಗಳ ಸಮಕಾಲೀನತೆ ಮತ್ತು ಭಕ್ತಿಪಂಥಗಳು ಎಂಬ ವಿಷಯದ ಬಗ್ಗೆ ಮಾತನಾಡಿದರು. ಫಾ. ಚೇತನ್ ಲೋಬೋ ಅವರು ಮಾನವೀಯತೆಯೇ ಶ್ರೇಷ್ಠ ಧರ್ಮ ಎಂಬ ವಿಚಾರದ ಬಗ್ಗೆ ಮಾತನಾಡಿದರು. ಉಪನ್ಯಾಸಕರನ್ನು ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್ ಗೌರವಿಸಿದರು. ಸಚಿವರು ಹಾಗೂ ಸ್ವಾಮೀಜಿಯವರನ್ನು ಡಾ. ಹೆಗ್ಗಡೆಯವರು ಕ್ಷೇತ್ರದ ಪರವಾಗಿ ಗೌರವಿಸಿದರು.

ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಡಿ.ರಾಜೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಹಾಗೂ ಉಪನ್ಯಾಸಕ ಸುನೀಲ್ ಪಂಡಿತ್ ಸನ್ಮಾನ ಪತ್ರ ವಾಚಿಸಿದರು. ಎಸ್. ಡಿ. ಎಂ. ಕಾಲೇಜಿನ ಉಪನ್ಯಾಸಕ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಸುಧೀರ್ ಪ್ರಭು ವಂದಿಸಿದರು. ಉಜಿರೆ ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು.

error: Content is protected !!