ಮುನ್ನೆಚ್ಚರಿಕೆಯಿಂದ ಸಂಭಾವ್ಯ ಅಪಾಯ ದೂರ: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ: ಲಕ್ಷದೀಪೋತ್ಸವ ಅಂಗವಾಗಿ ‌ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಉಜಿರೆಯಿಂದ ಪಾದಯಾತ್ರೆ

ಧರ್ಮಸ್ಥಳ: ಕೊರೋನಾದಿಂದ ಇಡೀ ಜಗತ್ತು ತತ್ತರಿಸಿದೆ. ಇದು ಕೇವಲ ಒಬ್ಬರು, ಇಬ್ಬರ ಸಮಸ್ಯೆಯಲ್ಲ, ಇಡೀ ಜಗತ್ತು ತಲ್ಲಣಿಸುವಂತೆ ಮಾಡಿದ ರೋಗ ಕೊರೋನಾ. ಆದ್ದರಿಂದ ಜನತೆ ಯಾವುದೇ ಕಾರಣಕ್ಕೂ ವಿಚಲಿತರಾಗದೆ‌, ಶಾಂತ ಚಿತ್ತದಿಂದ ಸವಾಲು ಎದುರಿಸಬೇಕಿದೆ. ಮುಖ್ಯವಾಗಿ ವೈದ್ಯರು ಹಾಗೂ ಸರಕಾರ ಸೂಚಿಸಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಮೂಲಕ ಸಂಭಾವ್ಯ ಅಪಾಯ ತಪ್ಪಿಸುವ ಮೂಲಕ ಉತ್ತಮ ಜೀವನ ನಡೆಸಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು. ‌
ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಪಾದಯಾತ್ರಿಗಳನ್ನು‌ ಉದ್ದೇಶಿಸಿ ಮಾತನಾಡಿದರು.
ಜನತೆ ಅವರವರ ಶ್ರದ್ಧಾ, ಭಕ್ತಿಗನುಗುಣವಾಗಿ ದೇವರನ್ನು ನಂಬುತ್ತಾರೆ. ನಂಬಿದವರನ್ನು‌ ಮಂಜುನಾಥ ಸ್ವಾಮಿ ಖಂಡಿತಾ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಅಂತೆಯೇ ಫಲವೂ ಪ್ರಾಪ್ತಿಯಾಗುತ್ತದೆ. ನಮಗೆ ಲಭಿಸಿರುವ ಈ ಶ್ರೇಷ್ಠ ಜೀವನವನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಗೆ 4 ಲಕ್ಷ ಸದಸ್ಯರ ಸೇರ್ಪಡೆ:
ಪ್ರಸಕ್ತ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ 40 ಸಾವಿರ ಸಂಘಗಳು ಹೊಸದಾಗಿ ಸೇರ್ಪಡೆಯಾಗಿದ್ದು, 4 ಲಕ್ಷ ಮಂದಿ ಹೊಸದಾಗಿ ಯೋಜನೆಗೆ ಸೇರ್ಪಡೆಯಾದಂತಾಗಿದೆ ಎಂದರು.
ಮನೆ- ಮನೆಗೆ ಸೌಕರ್ಯ:
ಸಮಾಜದ ಜನತೆ ಸಂಕಷ್ಟದಲ್ಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಿವಿಧ ಜನ ಪರ ಕಾರ್ಯಗಳನ್ನು ಮನೆ ಮನೆಗಳಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಈ ಬಾರಿ ವೃದ್ಧರು, ಅಶಕ್ತರ ನೆರವಿಗಾಗಿಯೇ ವೃದ್ಧಾಪ್ಯ ವೇತನ, ವಾತ್ಸಲ್ಯ ಮೊದಲಾದ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಜಮ್ಮು- ಕಾಶ್ಮೀರ, ಪಂಜಾಬ್ ಮೊದಲಾದ ರಾಜ್ಯಗಳಲ್ಲಿಯೂ ರುಡ್ ಸೆಟ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ದೇಶದ 567 ಜಿಲ್ಲೆಗಳಲ್ಲಿ ಯುವಕರು ಸ್ವ-ಉದ್ಯೋಗಿಗಳನ್ನಾಗಿ ಮಾಡಲು ಪ್ರೇರಣೆ ನೀಡಲಾಗುತ್ತಿದೆ ಎಂದರು.


ಪಾದಯಾತ್ರೆಗೆ ಚಾಲನೆ:
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರಾ ಸಮಿತಿ ವತಿಯಿಂದ ಧರ್ಮಸ್ಥಳದ ಅಭಿಮಾನಿಗಳು, ಭಕ್ತರು ಸಮಾನ ಮಾನಸ್ಕರು ಸೇರಿಕೊಂಡು ಕಳೆದ ಏಳು ವರ್ಷಗಳಿಂದ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳುತ್ತಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯನ್ನು ಅನುಗುಣವಾಗಿ ಪ್ರಸ್ತುತ ವರ್ಷ 8 ನೇ ವರ್ಷದ ಪಾದಯಾತ್ರೆಯನ್ನು ಗುರುವಾರ ಹಮ್ಮಿಕೊಳ್ಳಲಾಯಿತು.
ಧರ್ಮಸ್ಥಳದ ಲಕ್ಷ ದೀಪೋತ್ಸವದ ಆರಂಭದ ದಿನ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಅವರ ನೇತೃತ್ವದಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಯಿತು. ಉಜಿರೆ ಜನಾರ್ದನ ಸ್ವಾಮಿ ದೇವಳದ ಶರತ್ ಕೃಷ್ಣ ಪಡ್ವೆಟ್ನಾಯ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಮತ್ತು ಪಾದಯಾತ್ರೆ ಸಮಿತಿ ಪದಾಧಿಕಾರಿಗಳು ಶ್ರೀಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹೊರ ಆವರಣದಲ್ಲಿ ದೀಪ ಪ್ರಜ್ವಲನೆಗೊಳಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಶ್ರೀ ಮಂಜುನಾಥ ಸ್ಚಾಮಿ ಭಾವಚಿತ್ರ ಅಳವಡಿಸಿದ ಮೂರು ಜೀಪುಗಳು ಸಹಿತ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಉಜಿರೆಯಿಂದ ಧರ್ಮಸ್ಥಳಕ್ಕೆ ರಸ್ತೆಯ ಒಂದು ಬದಿಯಿಂದ ಶಿಸ್ತನ್ನು ಅಳವಡಿಸಿಕೊಂಡು, ದೇವರ ನಾಮಗಳನ್ನು ಉಚ್ಚರಿಸುತ್ತಾ, ಭಜನೆಗಳನ್ನು ಹಾಡುತ್ತಾ ಸಾಗಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಮುಖ್ಯ ದ್ವಾರದ ಬಳಿ ಕ್ಷೇತ್ರದ ಪರವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಸಹೋದರ ಹರ್ಷೇಂದ್ರ ಕುಮಾರ್ ಹಾಗೂ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ‌. ಶೆಟ್ಟಿ ,ದೇವಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಸ್ವಾಗತಿಸಿದರು.


ಸರಕಾರದ ನಿಯಮ ಪಾಲನೆ:
ಪ್ರಸ್ತುತ ಈ ಬಾರಿ ಕೋವಿಡ್-19 ನಿಂದಾಗಿ ಪಾದಯಾತ್ರೆಯಲ್ಲಿ ನಿರ್ದಿಷ್ಟ ಜನರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಪಾದಯಾತ್ರೆಯಲ್ಲಿ ಸಹಸ್ರರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುತ್ತಿದ್ದರು. ಈ ಬಾರಿ ಸರಕಾರದ ನಿಯಮಗಳನ್ನು ಕಡ್ಡಾಯ ಪಾಲಿಸುವ ನಿಟ್ಟಿನಲ್ಲಿ ಮುಂಜಾಗ್ರತೆ ಕೈಗೊಳ್ಳಲಾಗಿತ್ತು.
ಪಾನೀಯ ವ್ಯವಸ್ಥೆ:
ಉಜಿರೆಯಿಂದ ಧರ್ಮಸ್ಥಳಕ್ಕೆ ತೆರಳಿದ ಪಾದಯಾತ್ರಿಗಳಿಗಾಗಿ ಅಲ್ಲಲ್ಲಿ ಪಾನೀಯದ ವ್ಯವಸ್ಥೆ ಮಾಡಲಾಗಿತ್ತು. ಉಜಿರೆಯ ನ್ಯಾಚುರೋಪತಿ ಕಾಲೇಜು, ಕನ್ಯಾಡಿಯ ಸೇವಾಭಾರತಿ ಹಾಗೂ ನೇತ್ರಾವತಿಯ ಶಾಂತಿವನ ಬಳಿ ಪಾನೀಯ ಹಾಗೂ ಕಷಾಯದ ವ್ಯವಸ್ಥೆ ಮಾಡಲಾಗಿತ್ತು..
ಶ್ರೀ ಶಿರಡಿ ಸಾಯಿ ‌ಸತ್ಯ ಸಾಯಿ‌ ಸೇವಾ ಕ್ಷೇತ್ರ , ಶ್ರೀ ಸಾಯಿ‌ನಗರ ಹಳೆಕೋಟೆ ಬೆಳ್ತಂಗಡಿ ‌ಇವರಿಂದ ಭಜನಾ ಕಾರ್ಯಕ್ರಮ ‌ನಡೆಯಿತು.


ಉಜಿರೆ ಜನಾರ್ದನ ದೇವಸ್ಥಾನದಲ್ಲಿ ಬೆಳ್ತಂಗಡಿ ಸತ್ಯಸಾಯಿ ಭಜನಾ ತಂಡದಿಂದ ಭಜನಾ ಸತ್ಸಂಗ ನೆರವೇರಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶನ ಡಾ.ಎಲ್.ಎಚ್. ಮಂಜುನಾಥ್, ಯೋಜನೆ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿ ಜಯಕರ ಶೆಟ್ಟಿ, ಜನಜಾಗೃತಿ ವೇದಿಕೆ ಅಧ್ಯಕ್ಷೆ ಶಾರದಾ ರೈ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರಾದ ವಸಂತ ಸಾಲ್ಯಾನ್ ಕಾಪಿನಡ್ಕ, ಪಿ.ಕೆ.ರಾಜು ಪೂಜಾರಿ, ಕಿಶೋರ್ ಹೆಗ್ಡೆ, ವೆಂಕಟರಾಯ ಅಡೂರ್, ತಿಮ್ಮಪ್ಪ ಗೌಡ ಬೇಳಾಲು, ಜಿ.ಪಂ.‌ಸದಸ್ಯೆ ಸೌಮ್ಯಲತಾ ಜಯಂತ್ ಗೌಡ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಎಂ.ಕಲ್ಮಂಜ, ರೋಟರಿ ಅಧ್ಯಕ್ಷ ಬಿ.ಕೆ. ಧನಂಜಯ ರಾವ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕ್ಷೇಮಪಾಲನಾಧಿಕಾರಿ ಸೋಮಶೇಖರ್ ಶೆಟ್ಟಿ, ಶಿವಳ್ಳಿ ಬ್ರಾಹ್ಮಣ ಸಭಾ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ಉದ್ಯಮಿಗಳಾದ ರಾಜೇಶ್ ಪೈ, ಮೋಹನ್ ಕುಮಾರ್, ಎಂ.ಜಿ.ಶೆಟ್ಟಿ, ಮೋಹನ್ ಶೆಟ್ಟಿಗಾರ್, ಸಿಯೋನ್ ಆಶ್ರಮದ ಟ್ರಸ್ಟಿ ಯು.ಸಿ.‌ಪೌಲೋಸ್, ಪಡಂಗಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್. ಮೊದಲಾದ ‌ಗಣ್ಯರು ಉಪಸ್ಥಿತರಿದ್ದರು.
ಧರ್ಮಸ್ಥಳದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಶ್ರೀಧರ ಭಟ್ ನಿರ್ವಹಿಸಿದರು.

error: Content is protected !!