ವನರಂಗ ಬಯಲು ರಂಗಮಂದಿರದಲ್ಲಿ ‘ಅಭಿಷೇಕ’ ನಾಟಕ ಪ್ರದರ್ಶನ: ‘ಸಮೂಹ ಉಜಿರೆ’ ನೇತೃತ್ವದಲ್ಲಿ ‘ರಂಗಯಾನ  ಟ್ರಸ್ಟ್ ಮೈಸೂರು’ ತಂಡದಿಂದ ಪ್ರಸ್ತುತಿ

ಬೆಳ್ತಂಗಡಿ: ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದ ಸಮೀಪದ ‘ವನರಂಗ’ ಬಯಲು ರಂಗಮಂದಿರದಲ್ಲಿ ‘ಸಮೂಹ ಉಜಿರೆ’ ಇವರ ನೇತೃತ್ವದಲ್ಲಿ ‘ರಂಗಯಾನ ಟ್ರಸ್ಟ್ ಮೈಸೂರು’ ತಂಡದವರಿಂದ ‘ಅಭಿಷೇಕ’ ನಾಟಕ ಪ್ರದರ್ಶನ ನಡೆಯಿತು.
ಬಾಸ ಮಹಾಕವಿ ರಚನೆಯ ಈ ನಾಟಕವನ್ನು ಪಾನ್ಯಂ ಸುಂದರ ಶಾಸ್ತ್ರಿ ಕನ್ನಡಕ್ಕೆ ಅನುವಾದಿಸಿದ್ದಾರೆ. ನೀನಾಸಂನ ಪದವೀಧರ ಹಾಗೂ ಉಜಿರೆ ಎಸ್.ಡಿ.ಎಂ ಕಾಲೇಜಿನ ರಂಗ ಶಿಕ್ಷಣ ಕೇಂದ್ರದ ಅಭಿನಯ ಪ್ರಶಿಕ್ಷಕರಾಗಿರುವ ಸಾಲಿಯಾನ್ ಉಮೇಶ್ ನಾರಾಯಣ ನಾಟಕವನ್ನು ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ.

ಮನೋಜ್ಞ ಅಭಿನಯ:
ರಾಮಾಯಣದ ಕಿಷ್ಕಿಂದಾ ರಾಮ- ಲಕ್ಷ್ಮಣ ರು ಸೀತೆಯನ್ನು ಹುಡುಕುತ್ತಾ ಸುಗ್ರೀವನೊಂದಿಗೆ ಮೈತ್ರಿ ಬೆಳೆಸಿದ ಪ್ರಕರಣವನ್ನು ಮೊದಲು ಮಾಡಿ, ರಾವಣನನ್ನು ಸಂಹರಿಸಿದ ಬಳಿಕ ವಿಭೀಷಣನಿಗೆ ಲಂಕೆಯ ಪಟ್ಟ ಕಟ್ಟಿ ಅಯೋಧ್ಯೆಗೆ ಮರಳಿ ರಾಜಾಧಿಪತ್ಯದಲ್ಲಿ ರಾಮನು ಅಭಿಷಿಕ್ತನಾಗುವರೆಗಿನ ಕಥೆಯನ್ನು ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.

ಪಾತ್ರ ಪರಿಚಯ:
ನಾಟಕದ ವಿವಿಧ ಪಾತ್ರಗಳಲ್ಲಿ ಪ್ರಕಾಶ್ ಕೆ. ಕಾಸರಗೋಡು(ರಾಮ), ಪಲ್ಲವಿ ಸಿ.ಕೆ. ಹುಣಸೂರು ( ಸೀತೆ), ಮಹೇಂದ್ರ ಎಂ.ಎನ್. ಕೆ.ಆರ್. ನಗರ(ಲಕ್ಷ್ಮಣ), ನಟರಾಜು ಹೆಚ್ ಮಂಡ್ಯ( ಹನುಮಂತ), ನವೀನ್ ಕಾಂಚನ ಪುತ್ತೂರು (ವಾಲಿ), ಸುಮಂತ್ ಎಸ್.ಎಂ ಚನ್ನರಾಯಪಟ್ಟಣ (ಸುಗ್ರೀವ), ಸಂಗೀತಾ ಭಿಡೆ ಧರ್ಮಸ್ಥಳ (ತಾರೆ ಮತ್ತು ರಾಕ್ಷಸ), ಬೇಬಿ ತನುಶ್ರೀ ಮಂಡ್ಯ (ಅಂಗದ), ಮಂಜು ಭಗತ್ ದಡದಕಲ್ಲು(ರಾವಣ), ರಂಗಸ್ವಾಮಿ ಎ ಕುಣಿಗಲ್ (ಶಂಕುಕರ್ಣ) ಮತ್ತು ದಿಲೀಪ್ ಕುಮಾರ್ ಆರ್ ಚಿಕ್ಕಬಳ್ಳಾಪುರ (ವಿಭೀಷಣ) ರಾಗಿ ಪಾತ್ರಗಳಿಗೆ ಜೀವ ತುಂಬಿದರು.

ರಂಗಯಾನ ಟ್ರಸ್ಟ್ ಅಧ್ಯಕ್ಷ ವಿಕಾಸ್‌ಚಂದ್ರ ಅವರ ಮಾರ್ಗದರ್ಶನದಲ್ಲಿ, ಪ್ರಶಾಂತ್ ಬಿ. ಮಾದರಸನಕೊಪ್ಪ ಮತ್ತು ನಾರಾಯಣ ಕೆ ದೇಸಾಯಿ ಸಂಗೀತ, ಡಾ. ನಿಶಾ ಸಾಂಗತ್ಯ, ದಾಕ್ಷಾಯಿಣಿ, ದಿವ್ಯಾ, ರಾಧಾ, ಶ್ರೀ ಕಾಂತ್, ತ್ಯಾಗರಾಜು ದೇವರಹಳ್ಳಿ ಮೊದಲಾದವರು ರಂಗದ ಹಿಂದೆ ಯಶಸ್ಸಿನ ಭಾಗವಾದರು.

ವರ್ಷದ ಹಿಂದೆ ‘ವನರಂಗ’ ಲೋಕಾರ್ಪಣೆ:
ಸಾಹಿತ್ಯ ಕಾರ್ಯಕ್ರಮಗಳ ಪ್ರೇರಣೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಡಾ‌‌. ಡಿ. ವಿರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರು ಈ ಬಯಲು ರಂಗಮಂದಿರವನ್ನು ಕಳೆದ ವರ್ಷದ ಡಿ.9 ರಂದು ಲೋಕಾರ್ಪಣೆಗೊಳಿಸಿದ್ದು ಅದರ ಸವಿನೆನಪಿಗಾಗಿ ಅದೇ ದಿನದಂದು ಈ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಎಸ್.ಡಿ. ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಸಮೂಹ ಉಜಿರೆಯ ಡಾ. ಕೃಷ್ಣಮೂರ್ತಿ, ಡಾ.ಎಂ.ಪಿ ಶ್ರೀನಾಥ್, ಸೋಮಶೇಖರ ಶೆಟ್ಟಿ ಸಹಿತ ಸಮೂಹದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಡಾ‌. ಬಿ.ಎ. ಕುಮಾರ ಹೆಗ್ಡೆ ಸ್ವಾಗತಿಸಿ, ಪ್ರಸ್ತಾವನೆಗೈದರು.

error: Content is protected !!