ಉಪ್ಪಿನಂಗಡಿ: ಕರಾಯ ಗ್ರಾಮದ ಹುಣಸೆಕಟ್ಟೆ ಎಂಬಲ್ಲಿ ಭಾನುವಾರ ರಾತ್ರಿ ಅಪಘಾತ ನಡೆಸಿರುವ ಪಿಕ್ ಅಪ್ ಚಾಲಕ ಅಮಲು ಪದಾರ್ಥ ಸೇವಿಸಿರುವುದು ಕಂಡುಬಂದ ಕಾರಣ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಕೊಯ್ಯೂರು ಗ್ರಾಮದ ಚಾಲಕ ಹರೀಶ(29), ಅಮಲು ಪದಾರ್ಥ ಸೇವಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಆದ್ದರಿಂದ ಅತನ ವಿರುದ್ಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅಮಲು ಪದಾರ್ಥದ ನಶೆಯಲ್ಲಿ ವಾಹನ ಚಾಲನೆ ಮಾಡಿ, ಇನ್ನೊಂದು ಜೀವಕ್ಕೆ ಹಾನಿ ಅಥವಾ ಮರಣ ಉಂಟಾಗಬಹುದು ಎಂಬ ಜ್ಞಾನವಿದ್ದರೂ, ಅಮಲು ಪದಾರ್ಥದ ನಶೆಯಲ್ಲಿ ವಾಹನ ಚಲಾಯಿಸಿ ಕೃತ್ಯವೆಸಗಿರುವುದರಿಂದ ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಕೊಲೆಯಲ್ಲದ ಅಪರಾಧಿಕ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ.
ಪಿಕ್ ಅಪ್ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ತಪ್ಪು ಮಾರ್ಗದಲ್ಲಿ ಚಲಾಯಿಸಿ, ಜಯರಾಮ ಹಾಗೂ ಕೃಷ್ಣಪ್ರಸಾದ್ ಅವರು ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಸಾವನ್ನಪ್ಪಿದ ಪ್ರಕರಣಕ್ಕೆ ಕಾರಣಕರ್ತನಾಗಿದ್ದಾನೆ ಎಂದು ಆರೋಪಿಸಲಾಗಿದೆ. ಅಪಘಾತ ಸಂಭವಿಸಿದ ಬಳಿಕ ಆರೋಪಿ ಚಾಲಕ ಸ್ಥಳದಿಂದ ವಾಹನ ಸಹಿತ ಪರಾರಿಯಾಗಿದ್ದು, ಸಾರ್ವಜನಿಕರು ಕಲ್ಲೇರಿ ಜನತಾ ಕಾಲೋನಿ ಬಳಿ ತಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಮುಂದಿನ ದಿನಗಳಲ್ಲೂ ಸಾರ್ವಜನಿಕರು ವಾಹನ ಚಾಲನೆಯ ವೇಳೆ ಅಮಲು ಪದಾರ್ಥ ಸೇವನೆ ಮಾಡಿದ್ದಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.