ಯೂಟ್ಯೂಬ್‍ನಲ್ಲಿ ಯಕ್ಷಗಾನ ಲೈವ್: 1.55 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ಗಳಿಸಿದ ‘ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ’: ಸಮಯೋಚಿತ ಬದಲಾವಣೆಗೆ ಜನಮೆಚ್ಚುಗೆ

ಧರ್ಮಸ್ಥಳ: ಕರಾವಳಿಯ ಗಂಡು ಕಲೆ ಮನಸ್ಸಿಗೆ ಹತ್ತಿರವಾಗಿತ್ತು, ಇದೀಗ ಯಕ್ಷಗಾನ ವೀಕ್ಷಣೆ ಅಂಗೈಗೇ ತಲುಪಿರುವುದರಿಂದ ಯಕ್ಷಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ವೀಕ್ಷಣೆಯನ್ನು ಯೂಟ್ಯೂಬ್ ಮೂಲಕ ಮಾಡುತ್ತಿದ್ದಾರೆ. ಸಮಯೋಚಿತವಾಗಿ ತನ್ನ ಯಕ್ಷಗಾನ ಮಂಡಳಿಯಲ್ಲಿ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಯಕ್ಷಗಾನವನ್ನು ಕೇವಲ 8 ದಿನಗಳಲ್ಲಿ 1.55ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿ ದಾಖಲೆ ಬರೆದಿದ್ದಾರೆ.
ಕೊರೋನಾ ಹಿನ್ನೆಲೆ ಧರ್ಮಸ್ಥಳದ ಯಕ್ಷಗಾನ ಮಂಡಳಿ ಕ್ಷೇತ್ರದಲ್ಲೇ ಒಂದು ತಿಂಗಳ ಕಾಲ ಸೇವಾಕರ್ತರ ನೆರವಿನೊಂದಿಗೆ ಕ್ಷೇತ್ರದಲ್ಲಿಯೇ ಪ್ರದರ್ಶನ ನೀಡಲಿದೆ ಎಂದು ಮೇಳದ ಅಧ್ಯಕ್ಷರು, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ 53ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ದಿನ ಅ.25ರಂದು ತಿಳಿಸಿದ್ದರು. ಅಂತೆಯೇ ಧರ್ಮಸ್ಥಳದ ಅಮೃತಮಹೋತ್ಸವ ಸಭಾಂಗಣದ ಬಳಿ ವೇದಿಕೆ ಹಾಕಿ, ನ.19ರಿಂದ ಮೇಳದ ಯಕ್ಷಗಾನ ಪ್ರದರ್ಶನವನ್ನು ಸಂಜೆ 7ರಿಂದ 12ರವರೆಗೆ ನಡೆಸಲಾಗುತ್ತಿದೆ. ಒಂದು ತಿಂಗಳ ಕಾಲ ಇಲ್ಲಿಯೇ ಪ್ರದರ್ಶನ ನಡೆಯಲು ಸಕಲ ವ್ಯವಸ್ಥೆ ಮಾಡಲಾಗಿದ್ದು, ಕೊರೋನಾ ಹಿನ್ನೆಲೆ ಸರಕಾರದ ಮಾರ್ಗಸೂಚಿ ಪಾಲನೆ ಮಾಡಲಾಗುತ್ತಿದೆ.


ಯೂಟ್ಯೂಬ್‍ನಲ್ಲಿ ವೀಕ್ಷಣೆಗೆ ಅವಕಾಶ:
ಧರ್ಮಸ್ಥಳ ಮೇಳದ ಯಕ್ಷಗಾನವನ್ನು ಹೊರಜಗತ್ತಿಗೂ ವೀಕ್ಷಣೆ ಸಾಧ್ಯವಾಗಬೇಕು ಎಂಬ ದೃಷ್ಟಿಯಿಂದ ಕ್ಷೇತ್ರದ ಯೂಟ್ಯೂಬ್ ಚಾನಲ್ ‘ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ’ ಮೂಲಕ ಲೈವ್ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನದ ಮಾಹಿತಿ ನೀಡಲಾಗುತ್ತಿತ್ತು. ಪ್ರದರ್ಶನದ ಪ್ರಥಮ ದಿನ ಅಂದರೆ ನ.19ರಂದು ನಡೆದ ‘ಅಶ್ವಮೇಧ’ ಪ್ರಸಂಗವನ್ನು 15 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸುವ ಮೂಲಕ ಈ ವಿನೂತನ ಪ್ರಯತ್ನಕ್ಕೆ ಭಾರೀ ಬೆಂಬಲ ವ್ಯಕ್ತಪಡಿಸಿದ್ದರು.


ದಿನಂಪ್ರತಿ ಸರಾಸರಿ 27 ಸಾವಿರ ಜನರ ವೀಕ್ಷಣೆ:
ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದ ವ್ಯವಸ್ಥಾಪಕರಾದ ಡಿ. ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಒಟ್ಟು 8 ದಿನಗಳಿಂದಲೂ ಯೂಟ್ಯೂಬ್ ಲೈವ್ ನಡೆಯುತ್ತಿದ್ದು, ಸುಮಾರು 1.50 ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ನಡೆಸಿದ್ದಾರೆ. ನ.19ರಂದು ನಡೆದ ಪ್ರಥಮ ದಿನದ ‘ಅಶ್ವಮೇಧ’ ಪ್ರಸಂಗವನ್ನು 16 ಸಾವಿರ ಜನ ವೀಕ್ಷಿಸಿದ್ದರು, ನ.20ರ ‘ರುಕ್ಮಿಣಿ ಕಲ್ಯಾಣ- ಜಾಂಬವತಿ ಕಲ್ಯಾಣ- ರತಿ ಕಲ್ಯಾಣ’ ಪ್ರಸಂಗವನ್ನು ಸುಮಾರು 12 ಸಾವಿರ ಜನ, ನ.21ರ ‘ನರಕಾಸುರ ಮೋಕ್ಷ-ಮೈಂದ-ದ್ವಿವಿಧ ಕಾಳಗ’ವನ್ನು 12.5 ಸಾವಿರ ಜನ, ನ.22ರಂದು ನಡೆದ ‘ಸಂಪೂರ್ಣ ಶ್ರೀ ದೇವೀ ಮಹಾತ್ಮೆ’ ಪ್ರಸಂಗವನ್ನು 18 ಸಾವಿರ ಜನ, ನ.23ರಂದು ನಡೆದ ಅಮೃತ ಸೋಮೇಶ್ವರ ವಿರಚಿತ ‘ಕಾಯಕಲ್ಪ’ ಪ್ರಸಂಗವನ್ನು 15 ಸಾವಿರ ಮಂದಿ, 24ರಂದು ನಡೆದ ‘ಸುದರ್ಶನ ವಿಜಯ ಇಂದ್ರಜೀತು ಕಾಳಗ’ ಪ್ರಸಂಗವನ್ನು 29 ಸಾವಿರ ಜನ, ನ. 25ರಂದು ಪ್ರದರ್ಶನವಾದ ‘ದಕ್ಷಯಜ್ಞ- ದಮಯಂತಿ ಪುನರ್ ಸ್ವಯಂವರ’ವನ್ನು 29 ಸಾವಿರ ಮಂದಿ, ನ.26ರಂದು ಪ್ರದರ್ಶನವಾದ ‘ಮಹಾಕಲಿ ಮಗಧೇಂದ್ರ’ ಪ್ರಸಂಗವನ್ನು 24 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. ಹೀಗಾಗಿ ಒಟ್ಟು ವೀಕ್ಷಕರ ಸಂಖ್ಯೆ ಸಧ್ಯ 1.55 ಲಕ್ಷವನ್ನೂ ದಾಟುತ್ತದೆ. ಕಳೆದ ಮೂರು ದಿನಗಳಲ್ಲಿ ಸುಮಾರು 82 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ನಡೆಸಿದ್ದಾರೆ. ಹೀಗಾಗಿ ಮೂರು ದಿನಗಳ ಸರಾಸರಿ ಗಮನಿಸಿದರೆ ಪ್ರತಿದಿನ 27 ಸಾವಿರ ಮಂದಿ ಯೂಟ್ಯೂಬ್ ಮೂಲಕ ಧರ್ಮಸ್ಥಳ ಮೇಳದ ಯಕ್ಷಗಾನವನ್ನು ವೀಕ್ಷಿಸುತ್ತಿದ್ದಾರೆ.


ವಿದೇಶಗಳಲ್ಲೂ ಕರಾವಳಿ ಗಂಡುಕಲೆಯ ಕಂಪು:
ಹೆಬ್ರಿ, ಹಕ್ಲಾಡಿ, ಕುಂದಾಪುರ, ಸಾಲಿಗ್ರಾಮ, ಬಳ್ಕೂರು, ಕಾರ್ಕಳ, ಕೊಂಜಾಡಿ, ಜಡ್ಕಲ್, ಮೂಡಬಿದ್ರೆ ಮೊದಲಾದ ಪ್ರದೇಶಗಳ ಸೇವಾಕರ್ತರು ತಮ್ಮ ಸೇವಾ ಸೇವಾ ಪ್ರದರ್ಶನಗಳನ್ನು ಧರ್ಮಸ್ಥಳದಲ್ಲಿಯೇ ನಡೆಸಿದ್ದಾರೆ. ಆದರೆ ವೀಕ್ಷಣೆಗೆ ಯೂಟ್ಯೂಬ್ ಮಾಧ್ಯಮ ಬಳಸಿಕೊಂಡಿರುವುದರಿಂದ ತಮ್ಮ ಊರಿನವರೂ ಸುಲಭವಾಗಿ ವೀಕ್ಷಣೆ ಮಾಡಲು ಸಹಾಯಕವಾಗಿದೆ. ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದ ವ್ಯವಸ್ಥಾಪಕರಾದ ಡಿ. ಹರ್ಷೇಂದ್ರ ಕುಮಾರ್ ಅವರು ತಿಳಿಸುವಂತೆ, “ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಕೊರೋನಾದಂತಹಾ ಸಂದರ್ಭದಲ್ಲೂ ದೇಶ, ವಿದೇಶಗಳ ವೀಕ್ಷಕರೂ ತಮ್ಮ ತಮ್ಮ ಮನೆಯಲ್ಲೇ ಕುಳಿತು ನೇರವಾಗಿ ಧರ್ಮಸ್ಥಳದಿಂದ ಪ್ರದರ್ಶನವನ್ನು ವೀಕ್ಷಿಸುವಂತಾಗಿದೆ. ಕ್ಷೇತ್ರದಲ್ಲಿ ಯಕ್ಷಗಾನ ನಡೆಯುವಷ್ಟು ದಿನ ಲೈವ್ ಮಾಡಲಾಗುವುದು” ಎಂದಿದ್ದಾರೆ.


ವ್ಯಾಪ್ತಿ ವಿಸ್ತರಣೆ:
ಯಕ್ಷಗಾನ ತಿರುಗಾಟದ ಸಂದರ್ಭ ಸೀಮಿತ ಜನರನ್ನು ತಲುಪುತ್ತಿದ್ದ ಯಕ್ಷಗಾನ ಇದೀಗ ವಿಶ್ವವ್ಯಾಪಿಯಾಗಿ, ಲಕ್ಷಾಂತರ ಜನರನ್ನು ಏಕ ಕಾಲದಲ್ಲಿ ತಲುಪುವಂತಾಗಿದೆ. ಧರ್ಮಸ್ಥಳದ ಲೈವ್ ಪ್ರಸಾರಕ್ಕೆ ಯಕ್ಷ ಪ್ರೇಮಿಗಳೂ ಹರ್ಷ ವ್ಯಕ್ತಪಡಿಸಿದ್ದಾರೆ. ಲೈವ್ ಯಕ್ಷಗಾನದ ಕುರಿತು ಮೇಳದ ಯಜಮಾನ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಹುಟ್ಟುಹಬ್ಬದ ದಿನ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, “ಯೂಟ್ಯೂಬ್ ಲೈವ್ ಮೂಲಕ ಯಕ್ಷಗಾನ ಪ್ರದರ್ಶನದ ಪ್ರಯೋಗ ನಡೆಸಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪರಿವರ್ತನೆಯಿಂದ ಜನ ದೂರ ಇದ್ದರೂ, ಹೆಚ್ಚು ಜನರನ್ನು ತಲುಪುವಂತಾಗಿದೆ” ಎಂದು ಈ ಧನಾತ್ಮಕ ಬೆಳವಣಿಗೆಯ ಕುರಿತು ಸಂತಸ ವ್ಯಕ್ತಪಡಿಸಿದ್ದರು.


ಕಲಾವಿದರಿಗೆ ಗೌರವ:
ಡಾ. ಹೆಗ್ಗಡೆಯವರ ಸಹೋದರ, ಮೇಳದ ಉಸ್ತುವಾರಿ ವಹಿಸಿಕೊಂಡಿರುವ ಡಿ. ಹರ್ಷೇಂದ್ರ ಕುಮಾರ್ ಅವರು ಮೇಳದ ಕಲಾವಿದರಿಗೆ ಯಾವುದೇ ಕುಂದು ಕೊರತೆ ಉಂಟಾಗದಂತೆ ವಿಶೇಷ ಕಾಳಜಿ ವಹಿಸುತ್ತಾರೆ. ಧರ್ಮಸ್ಥಳ ಮೇಳದ ಕಲಾವಿದರಿಗೆ ವಸತಿ, ಊಟ, ಔಷಧ, ಸೌಕರ್ಯ ಇತ್ಯಾದಿ ಜೊತೆಗೆ ಪಿಎಫ್, ಇಎಸ್‍ಐ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ನಿವೃತ್ತಿ ಸಂದರ್ಭ ಸೇವೆಸಲ್ಲಿಸಿದ ಅವಧಿಗನುಗುಣವಾಗಿ ಸೇವಾ ಗೌರವ ಧನವನ್ನೂ ಪಾವತಿಸಲಾಗುತ್ತದೆ. ಮೇಳ ಸಾಮಾನ್ಯವಾಗಿ ಕಾರ್ತಿಕ ಮಾಸದಲ್ಲಿ ಮೇಳದ ತಿರುಗಾಟ ಪ್ರಾರಂಭವಾಗಿ ಹತ್ತನಾವಧಿ ಜಾತ್ರೆ ಸಂದರ್ಭ ಮುಕ್ತಾಯವಾಗುತ್ತದೆ. ಹಿರಿಯ ಕಲಾವಿದ ಸುಮಾರು ಎಂಬತ್ತರ ಹರೆಯದ ಕೆ. ಗೋವಿಂದ ಭಟ್ ಸೂರಿಕುಮೇರು, ಈಗಲೂ ಯುವಕರನ್ನು ನಾಚಿಸುವಂತೆ ರಂಗದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಜೊತೆಗೆ ಹಿರಿಯ ಕಲಾವಿದರಾದ ಶ್ರೀಧರ ರಾವ್ ಕುಂಬ್ಳೆ, ಚಿದಂಬರ ಬಾಬು, ವಸಂತ ಕಾಯರ್ತಡ್ಕ, ಚಂದ್ರಶೇಖರ ಧರ್ಮಸ್ಥಳ ಅವರೂ ತಂಡದಲ್ಲಿದ್ದಾರೆ. ಈ ಬಾರಿ ವಿವಿಧ ಮೇಳದಲ್ಲಿ ತಿರುಗಾಟ ನಡೆಸಿದ ಅನುಭವಿ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ಅವರು ಸೇರ್ಪಡೆಯಾಗಿದ್ದಾರೆ.


ಮೇಳದ ಕಲಾವಿದರು:
ಧರ್ಮಸ್ಥಳ ಮೇಳದಲ್ಲಿ ಧರ್ಮಸ್ಥಳ ಮೇಳದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪಿ.ಟಿ. ಪ್ರಸಾದ್, ಚೆಂಡೆ ಮದ್ದಲೆಯಲ್ಲಿ ಅಡೂರು ಲಕ್ಷ್ಮೀನಾರಾಯಣ, ಚಂದ್ರಶೇಖರ ಸರಪಾಡಿ, ಲಕ್ಷ್ಮೀಶ ಬೆಂಗ್ರೋಡಿ, ಮುಮ್ಮೇಳದಲ್ಲಿ ಹರೀಶ್ ಮಣ್ಣಾಪು, ಶಂಭಯ್ಯ ಕಂಜರ್ಪಣೆ, ಗಂಗಾಧರ ಪುತ್ತೂರು, ಈಶ್ವರ ಪ್ರಸಾದ್ ಧರ್ಮಸ್ಥಳ, ಮಾಧವ ಪಾಟಾಳಿ ನೀರ್ಚಾಲು, ಪದ್ಮನಾಭ ಕನ್ನಡಿಕಟ್ಟೆ, ಹರಿಶ್ಚಂದ್ರ ಚಾರ್ಮಾಡಿ, ಸ್ತ್ರೀ ವೇಷದಲ್ಲಿ ಪ್ರಧಾನ ಸ್ತ್ರೀ ಪಾತ್ರಧಾರಿ ಮುರಳೀಧರ ಕನ್ನಡಿಕಟ್ಟೆ, ಶರತ್ ತೀರ್ಥಹಳ್ಳಿ, ಹಾಸ್ಯಗಾರರಾಗಿ ಮಹೇಶ್ ಮಣಿಯಾಣಿ ಹಾಗೂ ಇತರ ಕಲಾವಿದರು ಇದ್ದಾರೆ.


ಶ್ರೀ ಧರ್ಮಸ್ಥಳ ಮೇಳ:
ಸುಮಾರು 200 ವರ್ಷಗಳ ಅಧಿಕೃತ ಇತಿಹಾಸವಿರುವ ‘ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ’ ಕಾಲಾನುಸಾರವಾಗಿ ಹೊಸತನವನ್ನು ಮೈಗೂಡಿಸಿಕೊಂಡು ಯಕ್ಷಪ್ರಿಯರ ಮನಗೆದ್ದಿದೆ. ಕಾಲಮಿತಿ ಯಕ್ಷಗಾನ, ಯಕ್ಷಗಾನ ಕಲೆಗೆ ಜೀವತುಂಬಲು ಹಾಗೂ ಹೊಸ ಕಲಾವಿದರ ಸೃಷ್ಟಿಗೆ ಯಕ್ಷಗಾನ ಕಲಾಕೇಂದ್ರ ಸ್ಥಾಪನೆ, ಯಕ್ಷಗಾನದಲ್ಲಿ ಹೊಸ ಪ್ರಸಂಗಗಳ ಅಳವಡಿಕೆ ಮೊದಲಾದ ಹೊಸ ವಿಚಾರಗಳನ್ನು ಅಳವಡಿಸಿಕೊಂಡು ಜನಮೆಚ್ಚುಗೆಗೆ ಪಾತ್ರವಾಗಿದೆ.


ಮೈಸೂರು ಅರಮನೆಯಲ್ಲೂ ಯಕ್ಷಗಾನ ಪ್ರದರ್ಶನ!:
1785 ಇಸವಿಯಲ್ಲೇ ಶ್ರೀ ಕ್ಷೇತ್ರದಲ್ಲಿ ಯಕ್ಷಗಾನ ಪ್ರಚಲಿತವಾಗಿತ್ತು. ಆಗಿನ ಧರ್ಮಾಧಿಕಾರಿಗಳಾಗಿದ್ದ ಕುಮಾರ ಹೆಗ್ಗಡೆಯವರು ಯಕ್ಷಗಾನ ಕಲಾರಾಧಕರಾಗಿದ್ದರು. ಕುಮಾರ ಹೆಗ್ಗಡೆಯವರು ದೂರ ಸಂಚಾರ ಮಾಡುವ ಸಂದರ್ಭ ಒಂದು ಯಕ್ಷಗಾನ ಮೇಳವೂ ಅವರ ಜೊತೆ ತೆರಳಬೇಕಿತ್ತು. ಮೈಸೂರಿನ ಒಡೆಯರ್ ಸಂಸ್ಥಾನದವರು, ಅರಮನೆಯಲ್ಲೇ ಯಕ್ಷಗಾನ ಪ್ರದರ್ಶನ ವೀಕ್ಷಿಸಿ, ಕುಮಾರ ಹೆಗ್ಗಡೆಯವರಲ್ಲಿ ವಿನಂತಿಸಿಕೊಂಡು ಕೆಲ ಕಲಾವಿದರನ್ನು ಮೈಸೂರಿನಲ್ಲೇ ಉಳಿಸಿಕೊಂಡ ಬಗ್ಗೆ ಇತಿಹಾಸ ಇದೆ. ಈ ಬಗ್ಗೆ ಪತ್ರದ ಉಲ್ಲೇಖದ ಲಿಖಿತ ದಾಖಲೆಯೂ ಲಭ್ಯವಿದೆ. ಹಿಂದಿನ ಧರ್ಮಾಧಿಕಾರಿಗಳಾದ ಮಂಜಯ್ಯ ಹೆಗ್ಗಡೆಯವರ ಕಾಲದಲ್ಲೂ ಹೆಚ್ಚಿನ ಕಡೆ ಮೇಳದ ತಿರುಗಾಟಗಳು ನಡೆದವು. ಚೌಕಿಯಲ್ಲಿ ಶಿಸ್ತು, ವೇಷದ ರಚನೆ ಬಗ್ಗೆ ಸ್ವತಃ ಮಂಜಯ್ಯ ಹೆಗ್ಗಡೆಯವರೇ ಕಲಾವಿದರಿಗೆ ನಿರ್ದೇಶನ ಮಾಡುತ್ತಿದ್ದರು. ಧರ್ಮಾಧಿಕಾರಿಗಳಾಗಿದ್ದ ರತ್ನವರ್ಮ ಹೆಗ್ಗಡೆಯವರು ಧರ್ಮಸ್ಥಳ ಮೇಳವನ್ನು ಬಲಿಷ್ಠವಾಗಿ ಸಂಘಟಿಸಲು ಅನೇಕ ಕಲಾವಿದರನ್ನು ಆಹ್ವಾನಿಸಿ, ಗಜ ಮೇಳವನ್ನೇ ಕಟ್ಟಿದರು. ಉಕ್ಕಿನ ಷಡ್ಬುಜ ಕೋನದ ವಿಶೇಷ ರಂಗ ಮಂಟಪ, ಸುಸಜ್ಜಿತ ಡೇರೆ, ವಾಹನ ಸೌಕರ್ಯ ವ್ಯವಸ್ಥೆಯನ್ನೂ ಕಲ್ಪಿಸಿದ್ದರು. ಜೊತೆಗೆ ಬೆಳಗಿನವರೆಗೂ ಮೇಳದ ಜೊತೆ ಕೂತು ರತ್ನವರ್ಮ ಹೆಗ್ಗಡೆಯವರೇ ಯಕ್ಷಗಾನ ವೀಕ್ಷಣೆ ಮಾಡುತ್ತಿದ್ದರು.


ಕಲಾಕೇಂದ್ರ ಸ್ಥಾಪನೆ, ಕಲಾವಿದರ ಸೃಷ್ಟಿ:
1972ರಲ್ಲಿ ಯಕ್ಷಗಾನ ಕಲಾ ಕೇಂದ್ರ ಸ್ಥಾಪನೆ ಮಾಡುವ ಮೂಲಕ ಯಕ್ಷಗಾನದ ಪುನರುತ್ಥಾನ, ಮೌಲಿಕತೆಯನ್ನು ಎತ್ತಿ ಹಿಡಿಯಲು ಶ್ರಮಿಸಿದವರು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು. ಡಾ. ಹೆಗ್ಗಡೆಯವರು ತೆಂಕುತಿಟ್ಟಿನ ಯಕ್ಷಗಾನದಲ್ಲಿ ಸುಧಾರಣೆ, ಬದಲಾವಣೆ ತರುವ ನಿಟ್ಟಿನಲ್ಲಿ ಯಕ್ಷಗಾನ ಕಲಾ ಕೇಂದ್ರ ಸ್ಥಾಪಿಸಿ, ಯಕ್ಷಗಾನದ ಚಿಕಿತ್ಸಕರಾಗಿಯೂ ಹೊರಹೊಮ್ಮಿದರು. ಕುರಿಯ ವಿಠಲಶಾಸ್ತ್ರಿ, ಪಡ್ರೆ ಚಂದ್ರು, ಮಾಂಬಾಡಿ ನಾರಾಯಣ ಭಾಗವತರು, ಲೀಲಾವತಿ ಬೈಪಾಡಿತ್ತಾಯ ಮೊದಲಾದ ಹಿರಿಯ ಕಲಾವಿದರನ್ನು ಆಹ್ವಾನಿಸಿ, ಯಕ್ಷಗಾನ ಆಸಕ್ತರಿಗೆ ತರಬೇತಿ ನೀಡಲಾಯಿತು. ಪ್ರಥಮ ವರ್ಷದಲ್ಲೇ ಇಪ್ಪತ್ತು ವಿದ್ಯಾರ್ಥಿಗಳು ಶಿಕ್ಷಣಾರ್ಥಿಗಳಾಗಿದ್ದರು. ಗೋವಿಂದ ಭಟ್ ಅವರ ನೇತೃತ್ವದಲ್ಲಿ ಯಕ್ಷಗಾನದ ಪೂರ್ವ ಪರಂಪರೆಯನ್ನು ಅಳವಡಿಸಿಕೊಂಡು ಯಕ್ಷಗಾನವನ್ನು ಮೇಳದಲ್ಲಿ ಪುನರುಜ್ಜೀವನಗೊಳಿಸುವ ಕಾರ್ಯ ಮಾಡಲಾಯಿತು. ಯಕ್ಷಗಾನ ಕಲಾಕೇಂದ್ರ ನೂರಾರು ಕಲಾಸಕ್ತರ ಕಲಿಕೆಯ ಗರಡಿಯಾಗಿದೆ.


ಕಾಲಮಿತಿ ಅಳವಡಿಕೆ:
ವಾಡಿಕೆಯಿಂದ ರಾತ್ರಿ ಜಾವಗಳಲ್ಲಿ ಪ್ರದರ್ಶಿಸಲ್ಪಟ್ಟು ರಂಜಿಸುವ ಕಲೆ ಯಕ್ಷಗಾನ. ಆದರೆ ಡಾ. ಹೆಗ್ಗಡೆಯವರು ರಾತ್ರಿ ಪೂರ್ತಿ ಆಟ ಆಡಿಸುವ ಬದಲು ಮಧ್ಯರಾತ್ರಿವರೆಗೆ ಆಟ ಆಡಿಸಿದರೆ ಒಳಿತು. ಸಮಯವೂ ಉಳಿತಾಯ, ಜನರೂ ನೊಡುತ್ತಾರೆ, ಕಲಾವಿದರ ಆರೋಗ್ಯಕ್ಕೂ ಉತ್ತಮ ಎಂಬ ವಿಚಾರಗಳೊಂದಿಗೆ ಶ್ರೀ ಕ್ಷೇತ್ರದ ಮೇಳಕ್ಕೆ ಕಾಲಮಿತಿ ಅಳವಡಿಸಿದರು. ಅನಗತ್ಯ ವಿಳಂಬ, ಅನಾವಶ್ಯಕ ಹಾಸ್ಯ, ಮಾತುಗಾರಿಕೆಗೆ ಕತ್ತರಿ ಪ್ರಯೋಗ ಮಾಡಿ, ಯಕ್ಷಗಾನದ ಮನೋರಂಜನಾತ್ಮಕ ಅಂಶ ಉಳಿಸಿಕೊಂಡು ಪ್ರಯೋಗ ಯಶಸ್ವಿಯಾಯಿತು. ಸಂಜೆ 7 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದು ಜನರಿಗೂ ಇಷ್ಟವಾಯಿತು. ಈ ಮೂಲಕ ಯಕ್ಷಗಾನಕ್ಕೆ ಕಾಲಮಿತಿ ಅಳವಡಿಕೆ ಮಾಡಿ ಮನೋರಂಜನೆಯ ಜೊತೆಗೆ ಧಾರ್ಮಿಕ, ಆಧ್ಯಾತ್ಮಿಕ ಸಂದೇಶಗಳನ್ನು ತಲುಪಿಸುವ ಪ್ರಯತ್ನ ಯಶಸ್ವಿಯಾಗಿದೆ.
ಹೀಗೆ ಸುಮಾರು 200 ವರ್ಷಗಳ ಇತಿಹಾಸವಿರುವ ‘ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ’ ತನ್ನ ಸಮಯೋಚಿತ ಬದಲಾವಣೆಗಳು ಜನರನನ್ನು ತಲುಪಲು ಪರಿಣಾಮಕಾರಿ ಬದಲಾವಣೆಗಳನ್ನು ಮಾಡುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಕಲಾ ಪೋಷಣೆ ಇನ್ನೂ ಹೆಚ್ಚು ನಡೆಯಲಿ, ಇನ್ನೂ ಹೆಚ್ಚಿನ ಕಲಾರಸಿಕರ ಮನಗೆಲ್ಲುವಂತಾಗಲಿ, ಈ ಮೂಲಕ ಕರಾವಳಿಯ ಗಂಡು ಕಲೆಯ ಕಂಪು ವಿಶ್ವವ್ಯಾಪಿಯಾಗಿ ಪಸರಿಸುವಂತಾಗಲಿ ಎಂಬುದು ‘ಪ್ರಜಾಪ್ರಕಾಶ’ ತಂಡದ ಆಶಯ.

error: Content is protected !!